ಗುಬ್ಬಿ :

     ಜನಸಂಖ್ಯಾ ಅನುಗುಣವಾಗಿ ಪರಿಶಿಷ್ಟ ಪಂಗಡಕ್ಕೆ ನೀಡಬೇಕಾದ ಮೀಸಲಾತಿಯನ್ನು ಶೇ.೭.೫ ಕ್ಕೆ ಏರಿಸಬೇಕು. ಈ ಬಗ್ಗೆ ದೊಡ್ಡ ಹೋರಾಟ ನಡೆಸಿ ಹಕ್ಕೋತ್ತಾಯ ಮಂಡಿಸಲಾಗಿದೆ. ಆದರೂ ಸರ್ಕಾರ ನಿರ್ಲಕ್ಷ್ಯ ತೋರಿದಂತೆ ಕಾಣುತ್ತಿದೆ. ಮೀಸಲಾತಿ ನಮ್ಮ ಹಕ್ಕು ಯಾರಪ್ಪನ ಮನೆಯ ಸ್ವತ್ತಲ್ಲ ಎಂದು ರಾಜನಹಳ್ಳಿ ವಾಲ್ಮೀಕಿ ಪೀಠಾಧ್ಯಕ್ಷ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಗುಡುಗಿದರು.

       ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ವಾಲ್ಮೀಕಿ ನಾಯಕರ ಸಮಾಜ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬುಡಕಟ್ಟು ಜನಾಂಗವಾಗಿ ತನ್ನದೇ ಆದ ವೈಶಿಷ್ಟ ಬೆಳೆಸಿಕೊಂಡು ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ವಿಚಾರದಲ್ಲಿ ಅನ್ಯಾಯವಾಗುತ್ತಿದೆ. ಎಲ್ಲಾ ರಂಗದಲ್ಲೂ ಮೀಸಲಾತಿ ಪಡೆದಲ್ಲಿ ನಮ್ಮ ಸಮುದಾಯ ಮುಖ್ಯವಾಹಿನಿಗೆ ಬರಲಿದೆ. ಈ ನಿಟ್ಟಿನಲ್ಲಿ ನಿಗದಿಯಾಗಿರುವ ಶೇ.೩ ರ ಮೀಸಲಾತಿಯನ್ನು ಶೇ.೭.೫ ಕ್ಕೆ ಏರಿಕೆ ಮಾಡಬೇಕಿದೆ ಎಂದರು.

      ದೇಶದಲ್ಲಿ ಬಹುಸಂಖ್ಯೆಯಲ್ಲಿರುವ ವಾಲ್ಮೀಕಿ ಸಮುದಾಯ ಚುನಾವಣೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಇದೇ ಮಾದರಿಯಲ್ಲಿ ಉತ್ತರ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶವೇ ಉದಾಹಣೆಯಾಗಿದೆ. ಮೀಸಲಾತಿಗಾಗಿ ಪಾದಯಾತ್ರೆ ಮೂಲಕ ಹೋರಾಟ ಮಾಡಲಾಗಿದೆ. ಬೆಂಗಳೂರಿನಲ್ಲಿ ಪಾದಯಾತ್ರ ನಡೆಸಿ ನಮ್ಮ ಹಕ್ಕು ಪ್ರತಿಪಾದಿಸಿದ್ದೇವೆ. ಸರ್ಕಾರ ಪಡೆದ ಮೂರು ತಿಂಗಳ ಗಡುವು ತೀರಿದೆ. ಮೈತ್ರಿ ಸರ್ಕಾರವಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರಲ್ಲಿ ಒತ್ತಡ ಹೇರಲಾಗಿತ್ತು. ಈಗಿನ ಬಿಜೆಪಿ ಸರ್ಕಾರ ನಮ್ಮ ಮೀಸಲಾತಿಯ ಬಗ್ಗೆ ಕೂಡಲೇ ಪರಾಮರ್ಶಿಸಿ ಶೇ.೭.೫ ಕ್ಕೆ ಮೀಸಲಾತಿ ನಿಗದಿ ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟಕ್ಕೂ ಸಮುದಾಯ ಸಿದ್ದವಿದೆ ಎಂದು ಎಚ್ಚರಿಕೆ ನೀಡಿದರು.

      ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ ಗಣ್ಯರು ಹಾಗೂ ದಾರ್ಶನಿಕರನ್ನು ಒಂದು ಜಾತಿಗೆ ಸೀಮಿತ ಮಾಡದೇ ಅವರ ತತ್ವಾದರ್ಶವನ್ನು ಎಲ್ಲಾ ವರ್ಗದವರೊಟ್ಟಿಗೆ ಪಾಲಿಸಬೇಕು. ರಾಜಕೀಯ ಪ್ರೌಢಿಮೆ ಬೆಳೆಸಿಕೊಳ್ಳಲು ಶಿಕ್ಷಣ ಮಾರ್ಗ ಅನುಸರಿಸಬೇಕು. ಜತೆಗೆ ಜಾತಿಯ ನಾಯಕನಾಗಿ ಗುರುತಿಸಿಕೊಳ್ಳದೇ ಜನನಾಯಕನಾಗಿ ಬೆಳೆದಲ್ಲಿ ಮಾತ್ರ ರಾಜಕೀಯ ಶಕ್ತಿ ತಾನಾಗಿಯೇ ಬೆಳೆಯುತ್ತದೆ. ಎಲ್ಲಾ ವರ್ಗದವರೊಂದಿಗೆ ಬದುಕು ಕಟ್ಟಿಕೊಳ್ಳುವ ನಮ್ಮ ವಾಲ್ಮೀಕಿ ಜನಾಂಗ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಾಥ್ ನೀಡಬೇಕು ಎಂದರು.

      ಮಾಜಿ ಸಚಿವ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ ಶೋಷಿತವರ್ಗಕ್ಕೆ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಸಾಧಿಸಲು ಪ್ರೇರಣೆ ನೀಡಿದ್ದ ವಾಲ್ಮೀಕಿ ಗ್ರಂಥ ರಾಮಾಯಣ ಪುರಾತನ ಸಂವಿಧಾನ ಎಂದು ಎನಿಸಿದೆ. ರಾಜಕಾರಣಕ್ಕೆ ಬರಲು ಪ್ರೇರಣೆಯಾಗಿದ್ದು ಸಂಸದ ಬಸವರಾಜು ಅವರ ತಂತ್ರಗಾರಿಕೆ ಕಾರಣವಾಗಿದೆ. ನಗರಸಭೆ ಟಿಕೆಟ್‌ಗಾಗಿ ಕೇಳಿಕೊಂಡರೂ ನನ್ನ ತಾತ್ಸರ ಮಾಡಿದ್ದ ಪರಿಣಾಮ ರಾಜಕಾರಣಕ್ಕೆ ಬಂದು ಸತತ ನಾಲ್ಕು ಬಾರಿ ಶಾಸಕನಾಗಿ ಎಲ್ಲಾ ವರ್ಗದವರ ಜತೆ ಕೆಲಸ ಮಾಡಿದ್ದೇನೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಲ್ಲಾ ವರ್ಗದ ಜನರನ್ನೂ ಬೆಳೆಸಿದ್ದೇನೆ. ಶೋಷಿತರ ದನಿಯಾಗಿ ಕೆಲಸ ಮಾಡಿದ್ದೇನೆ ಎಂದರು.

      ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ಜತೆಗೆ ವಾಲ್ಮೀಕಿ ಸಮುದಾಯದ ನಿವೃತ್ತ ನೌಕರರಿಗೂ ಗೌರವಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ಚನ್ನಬಸವೇಶ್ವರಸ್ವಾಮಿ ದೇವಾಲಯದಿಂದ ನಡೆಸಲಾಯಿತು. ಮೆರವಣಿಗೆಯನ್ನು ಸಂಸದ ಜಿ.ಎಸ್.ಬಸವರಾಜು ಚಾಲನೆ ನೀಡಿದರು.

      ಕಾರ್ಯಕ್ರಮದಲ್ಲಿ ಶಿಡ್ಲೆಕೋಣ ಮಠದ ಶ್ರೀ ಸಂಜಯಕುಮಾರ ಸ್ವಾಮೀಜಿ, ಮುಖಂಡರಾದ ಜಿ.ಎನ್.ಬೆಟ್ಟಸ್ವಾಮಿ, ಎಸ್.ಡಿ.ದಿಲೀಪ್‌ಕುಮಾರ್, ಜಿಪಂ ಸದಸ್ಯರಾದ ಜಿ.ರಾಮಾಂಜಿನಪ್ಪ, ಜಿ.ಎಚ್.ಜಗನ್ನಾಥ್, ಡಾ.ನವ್ಯಾಬಾಬು, ಕೆ.ಆರ್.ಭಾರತಿ, ಕೆ.ಯಶೋಧಮ್ಮ, ತಾಪಂ ಅಧ್ಯಕ್ಷೆ ಅನುಸೂಯ, ತಾಪಂ ಸದಸ್ಯರಾದ ಕರಿಯಮ್ಮ, ಅ.ನ.ಲಿಂಗಪ್ಪ, ಪಪಂ ಸದಸ್ಯರಾದ ಜಿ.ಎನ್.ಅಣ್ಣಪ್ಪಸ್ವಾಮಿ, ಜಿ.ಸಿ.ಕೃಷ್ಣಮೂರ್ತಿ, ಸಾದಿಕ್, ಶೌಕತ್‌ಆಲಿ, ರೇಣುಕಾಪ್ರಸಾದ್, ಶಶಿಕುಮಾರ್, ವಾಲ್ಮೀಕಿ ಜಯಂತಿ ಆಚರಣಾ ಸಮಿತಿಯ ಪುಟ್ಟರಾಜು, ಎ.ನರಸಿಂಹಮೂರ್ತಿ, ಎಚ್.ಡಿ.ಯಲ್ಲಪ್ಪ, ಸಾಕಸಂದ್ರ ದೇವರಾಜು ಇತರರು ಇದ್ದರು.

(Visited 29 times, 1 visits today)