ತುಮಕೂರು :
ನಗರದ ಹೃದಯ ಭಾಗದ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ನಿರ್ಭಯವಾಗಿ ರೌಡಿ ಗ್ಯಾಂಗ್ ಲಾಂಗು ಮಚ್ಚು ಹಿಡಿದು ರಾಜಾರೋಷವಾಗಿ ಮತ್ತೊಂದು ರೌಡಿ ಗ್ಯಾಂಗ್ ನ ಇಬ್ಬರನ್ನೂ ಕೊಚ್ಚಿ ಕೊಲೆ ಮಾಡುವ ಹಂತ ತಲುಪಿದೆ ಎಂದರೆ ಸ್ಥಳೀಯ ಖಾಕಿಯಲ್ಲಿ ಖಧರ್ ಇಲ್ಲವೆನ್ನುವುದು ಸ್ಪಷ್ಟವಾಗುತ್ತಿದೆ.
ವಿಶೇಷವೆಂದರೆ ಕುಕೃತ್ಯ ನಡೆದದ್ದು ಬೇರೆಲ್ಲೂ ಅಲ್ಲ ಲೇಡಿ ಸಿಗಂ ಆಗಲು ಹೋಗಿ ಲೇವಡಿ ಸಿಂಗಂ ಆಗಿ ಸಾರ್ವಜನಿಕವಾಗಿ ನಗೆ ಪಾಟಲಿಗೀಡಾದ ಪಾರ್ವತಮ್ಮ ಎಂಬ ತಿಲಕ್ ಪಾರ್ಕ್ ವೃತ್ತನಿರೀಕ್ಷಕರ ವ್ಯಾಪ್ತಿಯ ತಿಲಕ್ ಪಾರ್ಕ ಪೊಲೀಸ್ ಠಾಣಾ ಸರಹದ್ದಿನ ರೈಲ್ವೆ ಸ್ಟೇಷನ್ ರಸ್ತೆಯ ಮಹಾವೀರ ಕಲ್ಯಾಣ ಮಂಟಪದ ಎದುರು. ನವೆಂಬರ್ 2 ರ ರಾತ್ರಿ 11-30 ರ ಸುಮಾರಿನಲ್ಲಿ ಹತ್ಯೆಯಾದ ಕುಖ್ಯಾತ ರೌಡಿ ಹಟ್ಟಿ ಮಂಜನ ಬಲಗೈ ಭಂಟ ರೌಡಿಶೀಟರ್‍ಗಳಾದ ದಿವಾಕರ್ ಮತ್ತು ಸಾಲೆ ಮಂಜನ ಮೇಲೆ ಅಟ್ಯಾಕ್ ಮಾಡಿ ಕೊಲ್ಲಲು ಪ್ರಯತ್ನಿಸಿದ ಹಟ್ಟಿ ಮಂಜನ ಹಂತಕರಾದ ಶಂಬು, ರಾಘವ, ಸಂಪಿ, ಎನ್ನುವ ರೌಡಿಗಳ ಅಟ್ಟಹಾಸ ನೋಡಿದರೆ ನಗರದ ಜನ ಭಯ ಭೀತರಾಗುತ್ತಿದ್ದಾರೆ.
ಈ ಹಿಂದೆ ತಿಲಕ್ ಪಾರ್ಕ್ ವೃತ್ತ ನಿರೀಕ್ಷಕರ ವ್ಯಾಪ್ತಿಯ ಜಯನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ತರಕಾರಿ ಮಹೇಶನ ಮನೆಯ ಬಳಿ ಮಹೇಶನ ಮಗ ರೌಡಿಶೀಟರ್‍ನನ್ನು ಹತ್ಯೆಮಾಡಲು ರೌಡಿಶೀಟರ್ ಚಿದಾನಂದ ತನ್ನ ಗ್ಯಾಂಗ್‍ನೊಂದಿಗೆ ಮುಚ್ಚು ಲಾಂಗ್ ಗಳನ್ನು ಹಿಡಿದು ಅಟ್ಯಾಕ್ ಮಾಡಿದಾಗ ಇದರ ಸಂಬಂಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಪುಡಿ ಪುಕ್ಕಗಳ ಬಂಧನ ಮಾಡಲಾಯಿತು. ಗ್ಯಾಂಗ್ ಲೀಡರ್ ಚಿದಾನಂದನನ್ನು ಬಂಧಿಸಲಿಲ.್ಲ ಆತನನ್ನು ಎನ್‍ಕೌಂಟರ್ ಮಾಡುವುದಾಗಿ ಬೆದರಿಸಿ ಗ್ಯಾಂಗ್ ಲೀಡರ್ ಅರ್ಪಿಸಿದ ಮಹಾಪ್ರಸಾದ ಸ್ವೀಕರಿಸಿದ ಆ ಅಧಿಕಾರಿ ರೌಡಿಶೀಟರ್ ಗುಂಡನ್ನು ಎನ್‍ಕೌಂಟರ್ ಮಾಡುವ ಬೆದರಿಕೆಯೊಡ್ಡಿದ್ದರು ಎನ್ನುವ ವಿಚಾರ ಗುಟ್ಟಾಗಿ ಉಳಿಯಲಿಲ್ಲ. ಅಂದೇ ಚಿದಾನಂದನನ್ನು ಬಂಧಿಸಿದ್ದರೆ ಗ್ಯಾಂಗ್ ವಾರ್‍ಗಳು ಇತ್ತೀಚೆಗೆ ನಡೆಯುತ್ತಿರಲಿಲ್ಲ,
ಬೆಳ್ಳಂಬೆಳಗ್ಗೆ ತುಮಕೂರಿನ ತುಂಬಾ ಪೊಲೀಸ್ ರು ಓಡಾಡಿದ್ದಾರೆ. ಸಣ್ಣ ಪುಟ್ಟ ಪುಡಿ ರೌಡಿಗಳಿಂದ ಹಿಡಿದು ಕೊಂಚ ಹೆಸರು ಮಾಡಿರುವ ರೌಡಿಗಳವರೆಗೂ ಎಲ್ಲರ ಮನೆ ಬಾಗಿಲು ಬಡಿದು ನಸುಕಿನಲ್ಲಿ ಎದ್ದು ದೇವರ ಫೋಟೋ ನೋಡುವುದಕ್ಕೆ ಮುನ್ನವೇ ರೌಡಿಗಳ ಮುಂದೆ ಪೊಲೀಸ್ ರ ಹಾಜರಾಗಿದ್ದಾರೆ. ನೋಡಿ “ಎಲ್ಲಾ ಮುಚ್ಕೊಂಡು ಇದ್ರೆ ಸರಿ, ಬಾಲಗೀಲ ಬಿಚ್ಚಿದ್ರೆ ಗ್ರಹಚಾರ ಬಿಡಿಸ್ತೀವಿ” ಎಂದು ಪೊಲೀಸ್ ರು ಕೊಟ್ಟ ಫೋಸ್ಗೆ ಕೆಲವರು ಹೆದರಿ ಬಾಲ ಮುದುಡಿಕೊಂಡಿದ್ದಾರೆ. ಮತ್ತೆ ಕೆಲವರು ತಾನು ಮಾಡಿದ ಇಡುಗಂಟು ಅರ್ಪಿಸಿ ಪೊಲೀಸ್ ರ ಎದುರು ಫೋಜು ಕೊಟ್ಟು ಫೋಟೋ ತೆಗೆಸಿಕೊಂಡಿದ್ದಾರೆ. ಅವರು ತೆಗೆಸಿಕೊಂಡ ಫೋಟೋದಲ್ಲಿ ಪೊಲೀಸ್ ಅಧಿಕಾರಿಗಳು ನಿಂತಿರುವ ಸ್ಥಿತಿ, ರೌಡಿಗಳು ನಿಂತಿರುವ ಸ್ಥಿತಿ ಗಮನಿಸಿದರೆ ತಿಳಿಯುತ್ತದೆ. ಇವರ ಭಯ ನಮಗಿಲ್ಲ ಎನ್ನುವುದು ಎತ್ತಿ ತೋರಿಸುವಂತಿದೆ. ಕೇವಲ ಹಿರಿಯ ಅಧಿಕಾರಿಗಳ ಮುಂದೆ ತಲೆ ತಗ್ಗಿಸದಂತೆ ತನ್ನ ಮಾನ ಕಾಪಾಡಿಕೊಳ್ಳುವ ಸಲುವಾಗಿ ಆಡಿರುವ ಡ್ರಾಮಾದಂತಿದೆ.
ನಗರದಲ್ಲಿ ರೌಡಿಗಳ ಆರ್ಭಟ ಹೆಚ್ಚಲು ಮೂಲ ಕಾರಣ ಲ್ಯಾಂಡ್ ಮಾಫಿಯಾ ಬೆಂಗಳೂರಿಗೆ ಸನಿಹವಿರುವ ತುಮಕೂರಿನ ಮತ್ತು ಆಸು ಪಾಸಿನ ಜಮೀನಿಗೆ ಚಿನ್ನಕ್ಕಿಂತ ಮೌಲ್ಯವಿದೆ. ಅದಕ್ಕಾಗಿ ಲ್ಯಾಂಡ್ ಮಾಫಿಯಾದವರು ಪ್ರಭಲ ರಾಜಕಾರಣಿಗಳ ಚೇಲಾಗಳಾಗಿದ್ದು ಅದರ ಜೊತೆಗೆ ಹಣಬಲ, ತೋಳ್ಬಲ ಇರುವವರಾಗಿದ್ದು ಜನರನ್ನ ಹೆದರಿಸಿ ಬೆದರಿಸಿ ಕಡಿಮೆ ಬೆಲೆಗೆ ಜಮೀನು ಖರೀದಿ ಮಾಡುತ್ತಾರೆ. ಒಪ್ಪದಿದ್ದರೆ ರೌಡಿಗಳ ಬಳಸಿಕೊಂಡು ಜನರನ್ನು ಕೊಲೆ ಬೆದರಿಕೆ ಹಾಕಿ ಸ್ವತ್ತುಗಳನ್ನು ತಮಗೆ ಬೇಕಾದವರ ಹೆಸರಿಗೆ ಬರೆಸಿಕೊಳ್ಳುತ್ತಿದ್ದಾರೆ.
ಎಲ್ಲರಿಗೂ ತಿಳಿದಿರುವಂತೆ ರೌಡಿಗಳು ಅನಾಯಾಸವಾಗಿ ಹಣ ಮಾಡುವುದೇ ರಿಯಲ್ ಎಸ್ಟೇಟ್‍ನಿಂದ. ಇದುಕೈನಲ್ಲಿ ಬಿಡುಗಾಸಿಲ್ಲದಿದ್ದರೂ, ದಿಢೀರ್ ಶ್ರೀಮಂತರಾಗುವ ದುರಾಸೆಯಿಂದ ಮಾಡುವ ವ್ಯವಹಾರ. ರೌಡಿಗಳು ಇದನ್ನು ಬಹಳ ವ್ಯವಸ್ಥಿತವಾಗಿ ಹಿಡಿತ ಸಾಧಿಸುತ್ತಾರೆ ಅನ್ಯರ ಅರಿವಿಗೆ ಬಾರದಂತೆ ಖಾಲಿ ಇರುವ ನಿವೇಶನ ಗುರುತಿಸಿ ನಕಲಿ ದಾಖಲೆ ಸೃಷ್ಟಿಸಿ ಅವರಿಗೆ ಬೇಕಾದವರ ಹೆಸರಿಗೆ ಖಾತೆ ಹಾಗೂ ಇನ್ನಿತರೆ ದಾಖಲೆ ಸೃಷ್ಟಿಸುತ್ತಾರೆ. ತನ್ನ ರೌಡಿಗಳ ಮುಂದೆ ಬಿಟ್ಟು ಬಳಿಕ ತಂತಿ ಬೇಲಿ ಹಾಕಿಸಿ ಇಬ್ಬರ ನಡುವೆ ಜಗಳ ತಂದಿಡುತ್ತಾರೆ. ತಾವೇ ಸೃಷ್ಟಿಸಿದ ನಕಲಿ ಮಾಲಿಕನಿಂದ ಬೆದರಿಕೆ ಹಾಕಿಸಿ ನಂತರ ರೌಡಿಗಳೇ ಮಧ್ಯ ಪ್ರವೇಶಿಸಿ ನಿಮ್ಮನ್ನು ಸೆಟ್ಲ್‍ಮೆಂಟ್ ಮಾಡುವುದಾಗಿ ಬಲವಂತವಾಗಿ ಒಪ್ಪಿಸುತ್ತಾರೆ. ಅಸಲಿ ಸ್ವತ್ತಿನ ಮಾಲಿಕನ ಮುಂದೆ ಎರಡು ಆಯ್ಕೆಯಿಟ್ಟು ಕೇಳಿದಷ್ಟು ಹಣವನ್ನು ಕೊಟ್ಟರೆ ನಿವೇಶನವನ್ನು ಬಿಟ್ಟುಕೊಡುತ್ತಾರೆ, ಇಲ್ಲವೇ ಅವರು ಹೇಳಿದ ಮೌಲ್ಯಕ್ಕೆ ಮಾರಿ ಬಂದಷ್ಟು ಹಣ ಪಡೆಯುವುದು. ಬಹುತೇಕರು ರೌಡಿಗಳ ಸಹವಾಸ ಉತ್ತಮವಲ್ಲ ಎಂದು ಕೊಟ್ಟಷ್ಟು ಹಣ ತೆಗೆದುಕೊಂಡು ಜಾಗ ಕಾಲಿಮಾಡುತ್ತಾರೆ ಇಂತಹ ರೌಡಿಗಳ ಹಾವಳಿಯಿಂದ ತಮ್ಮ ಜಮೀನು ಕಳೆದುಕೊಂಡವರ ಗೋಳು ಕೇಳಲಾಗದು.
ಮಾಡಬಾರದ ಕುಕೃತ್ಯವೆಸಗುವ ರೌಡಿಗಳಿಗೆ ಪೊಲೀಸ್ ಭಯವಿಲ. ಕಾರಣ ರೊಕ್ಕಕ್ಕಾಗಿ ಕೈಚಾಚುವ ಖಾಕಿ ಪಡೆ ತಮ್ಮ ಸ್ವಾಭಿಮಾನ ಮತ್ತು ಅಧಿಕಾರ ವ್ಯಾಪ್ತತೆಯನ್ನು ಕೆಲ ರೌಡಿಗಳಿಗೆ ಅಡಮಾನ ಇಟ್ಟು ಸಾರ್ವಜನಿಕವಾಗಿ ಹೀರೋಯಿಸಂ ತೋರಿಸುತ್ತಿದೆ.
ವರ್ಗಾವಣೆಗಾಗಿ ಹತ್ತರಿಂದ ಹದಿನೈದು ಲಕ್ಷ ಹಣವನ್ನು ಭ್ರಷ್ಟ ರಾಜಕಾರಣಿಗಳ ಪಾದಕ್ಕಿಟ್ಟು ನಮಸ್ಕರಿಸಿ ಬಂದ ಅಧಿಕಾರಿಗಳು ತಾವು ಹೂಡಿದ ಹಣ ದ್ವಿಗುಣ ಮಾಡುವ ಭರದಲ್ಲಿ ತಮ್ಮ ಅಧಿಕಾರದ ಸ್ವಾಭಿಮಾನವನ್ನ ಒತ್ತೆಯಿಡುತ್ತಿರುವುದು ಕೇವಲ ರೊಕ್ಕಕ್ಕಾಗಿ ಮಾತ್ರ. ನಡು ರಸ್ತೆಯಲ್ಲಿ ನಿರ್ಭಯವಾಗಿ ಲಾಂಗು ಮಚ್ಚು ಹಿಡಿದು ರಾಜಾರೋಷವಾಗಿ ಕೊಚ್ಚಿ ಕೊಲೆ ಮಾಡುವ ಹಂತ ತಲುಪಿದೆ ಎಂದರೆ ಸ್ಥಳೀಯ ಖಾಕಿಯಲ್ಲಿ ಖಧರ್ ಇಲ್ಲವೆನ್ನುವುದು ಸಾಬೀತಾಗುತ್ತದೆ.
ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೋನ ವಂಶಿಕೃಷ್ಣ ಸಾಹೇಬರ ಒಳ್ಳೆಯ ತನವನ್ನ ದುರುಪಯೋಗ ಪಡಿಸಿಕೊಳ್ಳುವ ಭ್ರಷ್ಟ ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಆದ್ದರಿಂದ ಇದರತ್ತ ಕೂಡಲೇ ಗಮನ ಹರಿಸುವ ಅಗತ್ಯತೆ ಇದೆ.