ತುಮಕೂರು:
ನಗರಕ್ಕೆ ಕುಡಿಯುವ ನೀರು ಪೂರೈಸುವ ಬುಗುಡನಹಳ್ಳಿ ಪಂಪ್ ಹೌಸ್‍ಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಎಕ್ಸ್‍ಪ್ರೆಸ್ ಲೈನ್‍ನ ಕಂಬಗಳು ಮಣ್ಣು ಮಾಫಿಯಾದ ಕರಾಳತೆಯಿಂದ ನೀರಿನಲ್ಲಿ ಮುಳುಗಿದ್ದು ನಗರಕ್ಕೆ ಎರಡು ದಿನಗಳಿಂದ ನೀರು ಪೂರೈಕೆ ಮಾಡಲಾಗುತ್ತಿಲ್ಲ.
ನಗರದ ವಾರ್ಡ್ ನಂ-01ರ ಸಂಜೀವಯ್ಯನ ಕಟ್ಟೆಯಲ್ಲಿ ಅಕ್ರಮವಾಗಿ ಮಣ್ಣು ತುಂಬುತ್ತಿರುವ ಬಗ್ಗೆ ಸಿಪಿಐ 26-10-2018ರಂದು ಜಿಲ್ಲಾಧಿಕಾರಿಗಳು, ತಹಶೀಲ್ದಾರ್, ಕಂದಾಯಾಧಿಕಾರಿಗಳು, ಪೊಲೀಸ್ ಸೇರಿದಂತೆ ಆಡಳಿತ ವ್ಯವಸ್ಥೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಇದ್ದರಿಂದ ಇಂದು ಸಂಜೀವಯ್ಯನ ಕೆರೆಯಲ್ಲಿ 40ರಿಂದ 50 ಅಡಿ ಆಳ ತೆಗೆದು ಅಕ್ರಮವಾಗಿ ಮಣ್ಣನ್ನು ಪ್ರತಿಷ್ಠಿತ ವ್ಯಕ್ತಿಗಳ ಲೇಔಟ್ ಹಾಗೂ ರೈಲ್ವೆ ಕಾಮಗಾರಿಗೆ ಬಳಸಿಕೊಳ್ಳಲಾಗಿದೆ.
ಕೆರೆಯಲ್ಲಿ ಮಣ್ಣು ತುಂಬುತ್ತಿರುವುದರಿಂದಾಗಿ ಬುಗುಡನಹಳ್ಳಿ ಪಂಪ್‍ಹೌಸ್‍ಗೆ ಸಂಪರ್ಕ ಕಲ್ಪಿಸುವ ಎಕ್ಸ್‍ಪ್ರೆಸ್ ಲೈನ್‍ನ ವಿದ್ಯುತ್ ಕಂಬಗಳು ನೀರಿನಲ್ಲಿ ಮುಳುಗುಡೆಯಾಗುತ್ತವೆ. ಇದರಿಂದಾಗಿ ಬೆಸ್ಕಾಂ ಇಲಾಖೆಗೆ ನಷ್ಟವಾಗಲಿದ್ದು, ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೂ ಸಹ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದೇ ಇರುವುದರಿಂದ ಇಂದು ಸಂಜೀವನಯ್ಯನ ಕೆರೆಯಲ್ಲಿ ಕಂಬಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ನಗರಕ್ಕೆ ನೀರು ಪೂರೈಸಲು ಆಗದಂತಹ ಪರಿಸ್ಥಿತಿಯುಂಟಾಗಿದ್ದು, ಜಿಲ್ಲಾಡಳಿತದ ನಿರ್ಲಕ್ಷ್ಯತೆಯಿಂದ ಸಾರ್ವಜನಿಕರು ಪರದಾಡುವಂತಾಗಿದ್ದು, ಸಾರ್ವಜನಿಕ ಆಸ್ತಿಯನ್ನು ರಕ್ಷಿಸಲು ಯಾವುದೇ ಅಧಿಕಾರಿಗಳು ಮುಂದಾಗದೇ ಇರುವುದು ದುರದೃಷ್ಟಕರ.ಸ್ಥಳೀಯ ಕಾರ್ಪೋರೇಟರ್ ಅವರ ಕುಮ್ಮಕ್ಕಿನಿಂದಾಗಿ ಕೆಲ ಪುಂಡರು ಮುಂದೆ ನಿಂತು ಕೆರೆಯಿಂದ ಮಣ್ಣನ್ನು ಸಾಗಿಸುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೂ ದೂರು ನೀಡಿದರು, ಮಾಧ್ಯಮಗಳಲ್ಲಿ ವರದಿ ಪ್ರಸಾರವಾದರೂ ಜಿಲ್ಲಾಡಳಿತವಾಗಲಿ, ಪೊಲೀಸರಾಗಲಿ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಹೊನ್ನೇನಹಳ್ಳಿ, ದಿಬ್ಬೂರಿನ ಡಾಂಬರೀಕರಣದ ರಸ್ತೆಯೇ ಕಾಣೆಯಾಗಿದ್ದು, ಪ್ರತಿಷ್ಠಿತ ವ್ಯಕ್ತಿಯಾಗಿರುವ ಮಲ್ನಾಡ್ ಫರ್ನಿಚರ್‍ನ ಮಧು ಹಾಗೂ ಬಾವಿಕಟ್ಟೆ ನಾಗಣ್ಣ ಅವರ ಲೇಔಟ್‍ಗೆ ಮಣ್ಣನ್ನು ಭರ್ತಿ ಮಾಡಲು ಹಾಗೂ ರೈಲ್ವೆ ಇಲಾಖೆ ಗುತ್ತಿಗೆದಾರರು ಸಂಜೀವಯ್ಯನ ಕರೆಯನ್ನು ಹಾಳುಗೆಡವಲಾಗಿದ್ದು, ಅದರ ಪರಿಣಾಮವನ್ನು ಈಗ ಎದುರಿಸುವಂತಾಗಿದೆ.
ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಅಕ್ರಮವಾಗಿ ಮಣ್ಣನ್ನು ಸಾಗಣೆ ಮಾಡುವ ಮೂಲಕ ವಿದ್ಯುತ್ ಕಂಬಗಳ ಮುಳುಗಡೆಗೆ ಕಾರಣವಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಬೆಸ್ಕಾಂ ಇಲಾಖೆಗೆ ಆಗಿರುವ ನಷ್ಟವನ್ನು ಮರುಪಾವತಿಸಬೇಕು ಹಾಗೂ ಸಂಜೀವಯ್ಯನ ಕೆರೆ ಭರ್ತಿಯಾದರೆ ಕೆರೆ ಒಡೆಯುವ ಅಪಾಯದಲ್ಲಿದ್ದು, ಕೆರೆಯನ್ನು ಸಂರಕ್ಷಿಸುವ ಜೊತೆ ತಂತಿಬೇಲಿಯನ್ನು ನಿರ್ಮಿಸದೇ ಹೋದರೆ, ಕೆರೆ ಒತ್ತುವರಿಯಾಗುವ ಸಾಧ್ಯತೆ ಇದ್ದು, ಈಗಾಗಲೇ ಒತ್ತುವರಿಯಾಗಿರುವ ಕೆರೆಯ ಜಾಗವನ್ನು ತೆರವುಗೊಳಿಸಿ ಸಂರಕ್ಷಿಸಬೇಕು ಎಂದು ಗಿರೀಶ್ ಒತ್ತಾಯಿಸಿದ್ದಾರೆ.