ಕೊರಟಗೆರೆ:
ಈ ನಾಡಿನಲ್ಲಿ ಹಜರತ್ ಟಿಪ್ಪು ಸುಲ್ತಾನ್ ಎಂಬ ದೇಶಪ್ರೇಮಿಯ ಜಯಂತಿ ವಿರೋಧ ಮಾಡುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ರಾಜ್ಯ ಮತ್ತು ರಾಷ್ಟ್ರಕ್ಕೆ ತಾನು ನೀಡಿರುವ ಕೊಡುಗೆ ಏನು ಎಂಬುದನ್ನು ಮೊದಲು ಯೋಚನೆ ಮಾಡಬೇಕು ಎಂದು ಸಾಹಿತಿ ಹೊಸಕೆರೆ ರೀಜ್ವಾನ್ ಪಾಷ ತಿಳಿಸಿದರು.
ತಾಪಂ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಯಂತಿಯ ಹೆಸರು ಬಳಸಿಕೊಂಡು ರಾಜಕಾರಣಿಗಳು ರಾಜಕೀಯ ಮಾಡುವುದು ಸೂಕ್ತವಲ್ಲ. ಸರಕಾರ ಸಮುದಾಯಗಳ ಜಯಂತಿಗೆ ಖರ್ಚು ಮಾಡುವ ಹಣವನ್ನು ರೈತರ ಕಲ್ಯಾಣಕ್ಕಾಗಿ ಬಳಸಬೇಕು. ರಾಜ್ಯದ ಪ್ರತಿಯೊಂದು ಕ್ಷೇತ್ರದ ಕೆರೆ ಮತ್ತು ಕಟ್ಟೆಯನ್ನು ಅಭಿವೃದ್ದಿ ಪಡಿಸಿ ಅಂತರ್ಜಲ ಮಟ್ಟವನ್ನು ವೃದ್ದಿಸುವ ಕೆಲಸ ಮಾಡಿ ರೈತರ ಆರ್ಥಿಕ ಅಭಿವೃದ್ದಿ ಸಹಕಾರ ನೀಡಿದಾಗ ಮಾತ್ರ ರಾಜ್ಯ ಮತ್ತು ದೇಶದ ಅಭಿವೃದ್ದಿ ಆಗಲು ಸಾಧ್ಯ ಎಂದು ಸೂಚನೆ ನೀಡಿದರು.
ತಹಶೀಲ್ದಾರ್ ನಾಗರಾಜು ಮಾತನಾಡಿ ಕಾನೂನು ಚೌಕಟ್ಟಿನಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡುವುದು ತುಂಬಾ ಕ್ಲಿಷ್ಟಕರವಾದ ಕೆಲಸವಾಗಿದೆ. ಟಿಪ್ಪು ತನ್ನ ಸಾಮ್ರಾಜ್ಯ ವಿಸ್ತರಣೆ ಮಾಡುವ ವೇಳೆಯಲ್ಲಿ ಹಲವಾರು ರಾಜರೊಡನೆ ಯುದ್ದ ಮಾಡುವುದು ಅನಿವಾರ್ಯ. ಬ್ರೀಟಿಷರ ವಿರುದ್ದ ಹೋರಾಟದ ವೇಳೆ 3ನೇ ಮೈಸೂರು ಯುದ್ದದಲ್ಲಿ ತನ್ನ ಇಬ್ಬರು ಮಕ್ಕಳನ್ನು 3ಕೋಟಿ 30ಲಕ್ಷ ಒತ್ತೆ ಇಟ್ಟು ಹೋರಾಟ ನಡೆಸಿದ ದಿನವು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆ ತರುವಂತಹ ಸಂಗತಿಯಾಗಿದೆ ಎಂದು ಹೇಳಿದರು.
ಮುಖಂಡ ಮಯೂರ ಗೋವಿಂದರಾಜು ಮಾತನಾಡಿ ಮುಸ್ಲಿಂ ಮತ್ತು ಹಿಂದೂ ಭಾಂದವರು ಶಾಂತಿ, ಸಹಭಾಳ್ವೆಯಿಂದ ಕೊರಟಗೆರೆ ಕ್ಷೇತ್ರದಲ್ಲಿ ನಡೆಸುತ್ತೀರುವ ಸುಂದರ ಜೀವನ ರಾಜ್ಯ ಮತ್ತು ರಾಷ್ಟ್ರದ ನಾಯಕರಿಗೆ ಮಾದರಿ ಆಗಬೇಕಾಗಿದೆ. ಮೈಸೂರು ಮಹಾರಾಜರಿಗೆ ಗೌರವ ನೀಡಿ ಶ್ರೀರಂಗಪಟ್ಟಣದಲ್ಲಿ ಮನೆ ನಿರ್ಮಿಸಿಕೊಂಡು ವಾಸವಿದ್ದು ಬ್ರೀಟಿಷರ ವಿರುದ್ದ ಹೋರಾಟ ಮಾಡಿದ ವೀರ ನಾಯಕನಿಗೆ ನಾವೇಲ್ಲರೂ ಗೌರವಿಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ಕೆಂಪರಾಮಯ್ಯ, ಸಿಪಿಐ ಮುನಿರಾಜು, ಪಿಎಸೈ ಮಂಜುನಾಥ, ಇಓ ಶಿವಪ್ರಕಾಶ್, ಬಿಆರ್‍ಸಿ ಸುರೇಂದ್ರನಾಥ್, ಪಿಡ್ಲ್ಯೂಡಿ ಎಇಇ ಜಗದೀಶ್, ಕಂದಾಯ ಇಲಾಖೆಯ ಸೂರ್ಯಪ್ರಕಾಶ್, ನರಸಿಂಹಮೂರ್ತಿ, ಕೃಷಿ ಇಲಾಖೆಯ ನೂರ್ ಆಜಾಂ, ಪಪಂ ಸದಸ್ಯ ನಟರಾಜು ಮುಖಂಡರಾದ ಬಸೀರ್ ಅಹಮ್ಮದ್, ಅನ್ಸರ್‍ಪಾಷ, ರಿಯಾಸತ್ ಅಲಿ, ಮುಕ್ತಿಯಾರ್, ಗೌಸ್‍ಪೀರ್, ಹುಸೇನ್‍ಸಾಬ್, ಅಲ್ಲಾಬಕಾಶ್, ನಜರ್‍ಪಾಷ, ಬಾಷಸಾಬ್, ಸೇರಿದಂತೆ ಇತರರು ಇದ್ದರು.