ತುಮಕೂರು:

      ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ತ್ವರಿತವಾಗಿ ಪೂರ್ಣಗೊಳ್ಳದ ಕಾರಣ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ತಾತ್ಕಾಲಿಕ ಸ್ಥಳಾಂತರಕ್ಕೆ ಅಡ್ಡಿಯಾಗಿದೆ. ಸ್ಥಳಾಂತರಕ್ಕೆ ಪೂರಕವಾದ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ|| ರಾಕೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

       ತಮ್ಮ ಕಚೇರಿಯಲ್ಲಿಂದು ಕೆಎಸ್ಸಾರ್ಟಿಸಿ, ಸ್ಮಾರ್ಟ್ ಸಿಟಿ, ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣವನ್ನು ಹೈಟೆಕ್ ಬಸ್ ನಿಲ್ದಾಣವನ್ನಾಗಿ ನಿರ್ಮಿಸುವ ಕಾಮಗಾರಿ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಜೆಸಿ ರಸ್ತೆಯಲ್ಲಿರುವ ಕೆಎಸ್ಸಾರ್ಟಿಸಿ ಘಟಕ-1ರ ಸ್ಥಳಕ್ಕೆ ಹಾಲಿಯಿರುವ ಕೆಎಸ್ಸಾರ್ಟಿಸಿ ಬಸ್‍ನಿಲ್ದಾಣವನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಸ್ಮಾರ್ಟ್‍ಸಿಟಿ ವತಿಯಿಂದ ಕೈಗೊಂಡಿರುವ ಕಾಮಗಾರಿಗಳನ್ನು ನವೆಂಬರ್ 18ರೊಳಗಾಗಿ ಪೂರ್ಣಗೊಳಿಸುವಂತೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

      ನಗರದ ಜೆ.ಸಿ ರಸ್ತೆ, ಪ್ರಶಾಂತ್ ಚಿತ್ರಮಂದಿರ ಬಳಿ, ಅಶೋಕ ರಸ್ತೆಗಳ ಬದಿಯಲ್ಲಿರುವ ತಳ್ಳುಗಾಡಿ ಅಂಗಡಿ, ಹಣ್ಣಿನ ಅಂಗಡಿ ಸೇರಿದಂತೆ ಇತರೆ ಅಂಗಡಿಗಳನ್ನು ತೆರವುಗೊಳಿಸಬೇಕು. ಅಲ್ಲದೇ ಅಶೋಕ ರಸ್ತೆಯಿಂದ ತಾತ್ಕಾಲಿಕ ಬಸ್ ನಿಲ್ದಾಣ ರಸ್ತೆಗೆ ಪ್ರವೇಶಿಸುವ ಪ್ರವೇಶ ದ್ವಾರದ ಬಲಬದಿಯಲ್ಲಿ ತೆರೆದ ಚರಂಡಿಗಳಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಅನುವಾಗುವಂತೆ ಚರಂಡಿಗಳ ಮೇಲ್ಭಾಗದಲ್ಲಿ ಸ್ಲ್ಯಾಬ್‍ಗಳನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೇ ಶಿರಾ-ಬೆಂಗಳೂರು ಮಾರ್ಗವಾಗಿ ದಿನನಿತ್ಯ ಸುಮಾರು 1300 ಬಸ್‍ಗಳು ಸಂಚರಿಸುತ್ತಿದ್ದು, ಆ ಮಾರ್ಗದಲ್ಲಿ ರಸ್ತೆ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸುವಂತೆ ತಿಳಿಸಿದರು.

      ತಾತ್ಕಾಲಿಕ ಬಸ್‍ನಿಲ್ದಾಣದಿಂದ ಸಂಚರಿಸುವ ಬಸ್‍ಗಳು ಅಶೋಕ ರಸ್ತೆ, ಜೆಸಿ ರಸ್ತೆ, ಕೆನರಾ ಬ್ಯಾಂಕ್ ರಸ್ತೆ, ಗುಬ್ಬಿ ವೀರಣ್ಣ ಕಲಾಕ್ಷೇತ್ರ ರಸ್ತೆ ಸೇರಿದಂತೆ ನಿಲ್ದಾಣವನ್ನು ಸಂಧಿಸುವ ರಸ್ತೆಗಳ ಸ್ವಚ್ಛತಾ ಕಾರ್ಯಕ್ಕೆ ಹೆಚ್ಚುವರಿ ಪೌರಕಾರ್ಮಿಕರನ್ನು ನಿಯೋಜಿಸಬೇಕು. ಬಸ್ ನಿಲ್ದಾಣದ ಸ್ಥಳಾಂತರ ಹಾಗೂ ಬದಲಾದ ರಸ್ತೆ ಮಾರ್ಗದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು 30 ಸೆಕೆಂಡ್ ಅವಧಿಯ ವಿಡೀಯೋ ತುಣಕನ್ನು ಸಿದ್ಧಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ಎಂದು ಸ್ಮಾರ್ಟ್‍ಸಿಟಿ ಅಧಿಕಾರಿಗಳಿಗೆ ಸಲಹೆ ನೀಡಿದರು.

      ಸ್ಥಳಾಂತರಗೊಂಡ ಬಸ್ ನಿಲ್ದಾಣದಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೆ ಸ್ಥಳದ ಅಭಾವವಿರುವುದರಿಂದ ವಿನಾಯಕ ಮಾರುಕಟ್ಟೆಯಲ್ಲಿ ಸಾರ್ವಜನಿಕರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ಅಲ್ಲದೇ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದ ಮುಂಭಾಗ ನಿಲ್ಲುವ ಭಾರಿ ವಾಹನಗಳಿಗೆ ನಗರದ ಒಳಗಡೆ ಪಾರ್ಕಿಂಗ್‍ಗೆ ಅವಕಾಶ ನೀಡದಂತೆ ಪೊಲೀಸ್ ಇಲಾಖೆಗೆ ಸೂಚಿಸಿದರು.
ವಾಹನಗಳ ಸಂಚಾರಕ್ಕೆ ಅಡಚಣೆಯಾಗುವ ತಾತ್ಕಾಲಿಕ ಬಸ್ ನಿಲ್ದಾಣದ ನಿರ್ಗಮನ ದ್ವಾರದ ರಸ್ತೆಯಲ್ಲಿನ ವಿದ್ಯುತ್ ತಂತಿಗಳನ್ನು ತೆರವುಗೊಳಿಸಿ. ಇಲ್ಲದಿದ್ದರೆ ಮುಂಜಾಗ್ರತಾ ಕ್ರಮವಾಗಿ ಸುರಕ್ಷತಾ ದೃಷ್ಟಿಯಿಂದ ಯುಜಿ ಕೇಬಲ್ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಬೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.

      ಸಭೆಯಲ್ಲಿ ಉಪವಿಭಾಗಾಧಿಕಾರಿ ಸಿ.ಎಲ್ ಶಿವಕುಮಾರ್, ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್ ಸೇರಿದಂತೆ ಸ್ಮಾರ್ಟ್‍ಸಿಟಿ, ಪಾಲಿಕೆ ಅಧಿಕಾರಿಗಳು ಹಾಜರಿದ್ದರು.

(Visited 32 times, 1 visits today)