ಮಧುಗಿರಿ :
ಅವಧಿಗೆ ಮುನ್ನ ತಹಶೀಲ್ದಾರ್ ವರ್ಗಾವಣೆ ಸರಿಯಾದ ಕಾನೂನು ಕ್ರಮವಲ್ಲ ಎಂದು ಅಭಿಪ್ರಾಯಪಟ್ಟಿರುವ ರಾಜ್ಯ ಆಡಳಿತ ನ್ಯಾಯ ಮಂಡಳಿಯು ಮಧುಗಿರಿ ತಹಶೀಲ್ದಾರ್ ನಂದೀಶ್ ರವರ ಅಕಾಲಿಕ ವರ್ಗಾವಣೆ ಆದೇಶಕ್ಕೆ ತಡೆ ನೀಡಿದ್ದು, ಹುದ್ದೆಯಲ್ಲಿ ಮುಂದುವರೆಯುವಂತೆ ಆದೇಶಿಸಿದೆ.
ಮಧುಗಿರಿ ತಹಶೀಲ್ದಾರ್ ನಂದೀಶ್ರವರನ್ನು ವರ್ಗಾವಣೆ ಮಾಡಿಸುವಂತೆ ಕ್ಷೇತ್ರದ ಕೆಲ ರಾಜಕಾರಣಿಗಳು ಮುಖ್ಯಮಂತ್ರಿಯಿಂದ ಬೇರೊಂದು ಇಲಾಖೆಯ ಅಧಿಕಾರಿಯನ್ನು ಶಿಫಾರಸ್ಸು ಮಾಡಿಸಿದ್ದರು. ಇದನ್ನು ಪ್ರಶ್ನಿಸಿ ತಹಶೀಲ್ದಾರ್ ನಂದೀಶ್ ಕೆಎಟಿ ಮೊರೆ ಹೋಗಿದ್ದರು. ಇವರ ವಾದವನ್ನು ಆಲಿಸಿದ ರಾಜ್ಯ ಆಡಳಿತ ನ್ಯಾಯ ಮಂಡಳಿಯು ಯಾವುದೇ ಅಧಿಕಾರಿಯನ್ನು ಒಂದು ಜಾಗಕ್ಕೆ ನೇಮಿಸಿದರೆ ಕನಿಷ್ಟ 2 ವರ್ಷ ವರ್ಗಾವಣೆ ಅಸಂಭವ. ಇದು ಅವಧಿಗೆ ಮುನ್ನವೇ ವರ್ಗಾವಣೆ ಮಾಡಿದ ಪ್ರಕರಣವಾಗಿದ್ದು ಕಾನೂನು ರೀತಿ ಸರಿಯಲ್ಲ.. ಮಾರುಕಟ್ಟೆಯ ಅಧಿಕಾರಿಯನ್ನು ಕಂದಾಯ ಇಲಾಖೆಯ ಅರಿವಿಲ್ಲದಂತಹ ತಹಶೀಲ್ದಾರ್ ಹುದ್ದೆಗೆ ನಿಯೋಜಿಸುವುದು ಅಕ್ಷಮ್ಯ ಎಂದು ವಾದಿಸಿದರು. ಈ ಮೇಲಿನ ಅಂಶವನ್ನೆಲ್ಲ ಪರಿಗಣಿಸಿದ ನ್ಯಾಯಮೂರ್ತಿ ಭಕ್ತವತ್ಸಲಂ ರವರು, ಸದರಿ ಮಧುಗಿರಿ ತಹಶೀಲ್ದಾರ್ ಹುದ್ದೆಯಲ್ಲಿ ಮುಂದುವರೆಯುವಂತೆ ನಂದೀಶ್ರವರಿಗೆ ಮಧ್ಯಂತರ ಆದೇಶ ನೀಡಿ ಸೂಚಿಸಿದರು.
ಈ ಬಗ್ಗೆ ದೂರವಾಣಿಯಲ್ಲಿ ಮಾತನಾಡಿದ ತಹಶೀಲ್ದಾರ್ ನಂದೀಶ್ ಏಕಾಏಕಿ ವರ್ಗಾವಣೆ ಆಶ್ಚರ್ಯ ಮತ್ತು ಬೇಸರ ತರಿಸಿತ್ತು. ತಾಲ್ಲೂಕಿನ ಬಡವರ-ರೈತರ ಕಾರ್ಯಗಳಿಗೆ ನಾನು ಸದಾ ಮುಂದಿರುತ್ತೇನೆ, ಕೆಲವು ಪಟ್ಟಭಧ್ರ ಹಿತಾಸಕ್ತಿಗಳ ಕಾಣದ ಕೈಗಳು ವರ್ಗಾವಣೆ ಹಿಂದಿವೆ, ಸರ್ಕಾರಿ ಅಧಿಕಾರಿಗಳಿಗೆ, ನಿಷ್ಠಾವಂತರಿಗೆ ಕೆಎಟಿ ಆಸರೆಯಾಗಿದ್ದು, ನನಗೆ ನ್ಯಾಯ ದೊರೆತಿದೆ. ಕರ್ತವ್ಯ ನಿಷ್ಟನಾಗಿದ್ದು ಮುಂದಿನ ದಿನಗಳಲ್ಲಿ ತಾಲ್ಲೂಕಿನ ಜನರ ಸೇವೆಯಲ್ಲಿ ಮುಂದುವರೆಯುತ್ತೇನೆ ಎಂದರು.