ತುಮಕೂರು:
ಸಾಮಾಜಿಕ, ಐತಿಹಾಸಿಕ ಸಂದೇಶ ಸಾರುವ ಚಿತ್ರಗಳನ್ನು ವೀಕ್ಷಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಮಕ್ಕಳಿಗೆ ಕಿವಿಮಾತು ಹೇಳಿದರು.
ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ವತಿಯಿಂದ ನಗರದ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ “ಡೆಲ್ ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ”ವನ್ನು ಉದ್ಘಾಟಿಸಿ ಮಾತನಾಡಿದ ಅವರು ಭವಿಷ್ಯದಲ್ಲಿ ಮುಂದಿನ ಹಾದಿಗಳು ಸುಲಭವಾಗಿರುವುದಿಲ್ಲ ಮಕ್ಕಳು ಈಗಿನಿಂದಲೇ ಪ್ರಯತ್ನ ಪಡಬೇಕು. ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಬೇಕು ಎಂದು ನೀತಿ ಕತೆಯನ್ನು ಹೇಳಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಗಂಗಾಜನೇಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ರಂಗಧಾಮಪ್ಪ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಜೈಪಾಲ್, ಎಲ್‍ಎಕ್ಸ್‍ಎಲ್ ಐಡಿಯಾಸ್‍ನ ಶರತ್‍ಕುಮಾರ್ ಮತ್ತಿತರು ಹಾಜರಿದ್ದರು.
ಚಲನಚಿತ್ರ ಪ್ರದರ್ಶನಲ್ಲಿ ಮಕ್ಕಳ ವಯಸ್ಸಿಗನುಣವಾಗಿ ಮಕ್ಕಳ ಜವಾಬ್ದಾರಿ, ನೈತಿಕತೆ, ಪರಿಸರ ಪ್ರಜ್ಞೆ, ಸಾಮಾಜಿಕ ಅರಿವು, ಮೌಲ್ಯಗಳ ಅಭಿವೃದ್ಧಿಗೆ ಪೂರಕವಾದ ಅಂಶಗಳುಳ್ಳ ವಿವಿಧ ದೇಶ ಮತ್ತು ಭಾಷೆಗಳ ಚಲಚಿತ್ರಗಳನ್ನು ಪ್ರದರ್ಶಿಸಲಾಯಿತು. ತುಮಕೂರು ತಾಲೂಕು ವ್ಯಾಪ್ತಿಯ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ಸುಮಾರು 3000 ಮಕ್ಕಳು ವಿವಿಧ ತಂಡಗಳಲ್ಲಿ ಆಗಮಿಸಿ ಬೆಳಿಗ್ಗೆ 9-30ರಿಂದ ಸಂಜೆ 5-30ರವರೆಗೆ ಚಲನಚಿತ್ರಗಳನ್ನು ವೀಕ್ಷಿಸಿದರು.