ತುಮಕೂರು:
ಯಶಸ್ವಿನಿ ಯೋಜನೆ ಇನ್ನೊಂದು ತಿಂಗಳೊಳಗಾಗಿ ಪುನಾರಂಭ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದರು.
ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ 66ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಯಶಸ್ವಿನಿ ಯೋಜನೆ ಜಾರಿಗೆ ಬಂದರೆ ಸುಮಾರು 25 ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗುತ್ತದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್ ರಾಜಣ್ಣ ಅವರು ಪ್ರಸ್ತಾವನೆ ನೀಡಿದ್ದಾರೆ. ಈಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಇನ್ನೊಂದು ತಿಂಗಳಲ್ಲಿ ಅನುಷ್ಟಾನಕ್ಕೆ ತರಲಾಗುವುದು ಎಂದರು.
ಹಾಲು ಒಕ್ಕೂಟದಡಿಯಲ್ಲಿ ತುಮಕೂರು ಜಿಲ್ಲೆಯಲ್ಲಿ ಮೆಗಾಡೈರಿ ನಿರ್ಮಿಸಲು ಚಿಂತನೆ ನಡೆಸಲಾಗುವುದು. ಅಲ್ಲದೇ ತಿಪಟೂರಿನಲ್ಲಿ 100 ಎಕರೆ ಭೂಮಿಯಲ್ಲಿ ತೋಟಗಾರಿಕಾ ಕಾಲೇಜನ್ನು ಆರಂಭ ಮಾಡತ್ತೇನೆಂದು ಅವರು ಭರವಸೆ ನೀಡಿದರಲ್ಲದೇ ಜಿಲ್ಲೆಯ ಎಲ್ಲಾ ಕೆರೆಗಳಿಗೂ ನೀರು ತುಂಬಿಸುವುದು ನನ್ನ ಮೊದಲ ಆದ್ಯತೆ ಎಂದರು.
ಜಿಲ್ಲೆಯ 3 ತಾಲೂಕುಗಳು ಬರದ ಪಟ್ಟಿಯಿಂದ ಬಿಟ್ಟುಹೋಗಿದ್ದು, ಅದೇ ರೀತಿ ರಾಜ್ಯದಲ್ಲಿ ಬರದ ಪರಿಸ್ಥಿತಿಗೆ ಒಳಗಾದ ತಾಲೂಕುಗಳನ್ನು ಸೇರಿಸಿ ಬರಗಾಲ ಪೀಡಿತ ತಾಲೂಕುಗಳು ಎಂದು ಶೀಘ್ರದಲ್ಲಿ ಘೋಷಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಕರ್ನಾಟಕದಲ್ಲಿ ಸಹಕಾರಿ ಕಾಯ್ದೆ ಜಾರಿಯಾದ ನಂತರ ಹಲವಾರು ತಿದ್ದುಪಡಿಗಳನ್ನು ಮಾಡಿ ಸಹಕಾರಿ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಅನುಕೂಲ ಮಾಡಿಕೊಡಲಾಗಿದೆ. ರಾಜ್ಯದಲ್ಲಿ ಸುಮಾರು 44 ಸಾವಿರ ಸಹಕಾರಿ ಸಂಘಗಳಿವೆ. ಸರ್ಕಾರದಿಂದ 6.9 ಲಕ್ಷ ರೈತರಿಗೆ 249 ಕೋಟಿ ರೂ.ಗಳನ್ನು ಸಹಕಾರಿ ಬ್ಯಾಂಕ್‍ಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಸಾಲಮನ್ನಾ ಯೋಜನೆಯಡಿ ಸಹಕಾರಿ ಸಂಘದಲ್ಲಿ ಬೆಳೆ ಸಾಲಪಡೆದ ರೈತರಿಗೆ ಗರಿಷ್ಠ 1 ಲಕ್ಷದವರೆಗೆ ಸಾಲವನ್ನು ನೀಡಲಾಗುತ್ತಿದೆ. 2.85 ಲಕ್ಷ ರೈತರಿಗೆ 2000 ಕೋಟಿ ರೂ. ಬಿಡುಗಡೆ ಮಾಡಿದೆ. ನಗರದ ಪ್ರದೇಶದ ಬೀದಿ ಬದಿ ವ್ಯಾಪಾರಿಗಳಿಗೆ ಸಹಕಾರಿ ಸಂಘಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡಲಾಗುತ್ತಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಸಂಘಟನೆ ಎಂಬುದು ಬಹಳ ದೊಡ್ಡದಾದ ಸಹಕಾರಿ ಸಂಘ. ರಾಜ್ಯದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಮೊದಲ ಬಾರಿಗೆ ಪ್ರತಿ ಲೀಟರ್‍ಗೆ 2 ರೂ.ಗಳ ಪೋತ್ಸಾಹಧನ ನೀಡಿದರು. ಅದು ಇದೀಗ 5 ರೂ. ಆಗಿದೆ ಎಂದು ಅವರು ತಿಳಿಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್ ರಾಜಣ್ಣ ಮಾತನಾಡಿ ಮಣಪುರಂ, ಮುತ್ತೂಟ್ ಫೈನಾನ್ಸ್ ಕಂಪನಿಗಳು ರೈತರ ಆಭರಣಗಳನ್ನು ಅಡವಿಟ್ಟುಕೊಂಡು ಅಧಿಕ ಬಡ್ಡಿದರವನ್ನು ವಿಧಿಸುತ್ತಿವೆ. ಈ ಕಂಪನಿಗಳಿಗೆ ಕಡಿವಾಣ ಹಾಕಿ ರೈತರನ್ನು ರಕ್ಷಿಸಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಗೃಹ ಹಾಗೂ ಸಹಕಾರ ಸಚಿವ ಬಸವರಾಜ ಬೊಮ್ಮಾಯಿ, ವಸತಿ ಸಚಿವ ವಿ.ಸೋಮಣ್ಣ, ಸಂಸದ ಬಸವರಾಜು, ಶಾಸಕರಾದ ಜಿ.ಬಿ ಜ್ಯೋತಿಗಣೇಶ್, ಜಯರಾಮ್, ಬಿ.ಸಿ ನಾಗೇಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್ ರಾಜಣ್ಣ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎನ್.ಗಂಗಣ್ಣ, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಸಂಸದ ಸಿ.ಪಿ ಮೂಡಲಗಿರಿಯಪ್ಪ, ಮಾಜಿ ಶಾಸಕ ಸುರೇಶ್‍ಗೌಡ, ವಿಧಾನ ಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ತುಮಕೂರು ಮರ್ಚಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎನ್.ಎಸ್ ಜಯಕುಮಾರ್, ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ ಮಹಾಲಿಂಗಯ್ಯ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಆರ್. ರಾಜೇಂದ್ರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ|| ಶಾಲಿನಿ ರಂಜನೀಶ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಡಾ|| ಕೆ.ರಾಕೇಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೋನವಂಶಿಕೃಷ್ಣ, ಸಿಇಓ ಶುಭಾ ಕಲ್ಯಾಣ್, ಪಾಲಿಕೆ ಮೇಯರ್ ಲಲಿತ ರವೀಶ್, ಜಂಟಿ ನಿರ್ದೇಶಕ ಎಂ.ಡಿ ನರಸಿಂಹಮೂರ್ತಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.