ಮಧುಗಿರಿ:
ಜಮೀನಿನ ಪೊದೆಯೊಂದರಲ್ಲಿ ಜನರನ್ನು ಕಂಡು ಗಾಬರಿಗೊಂಡು ನಿತ್ರಾಣವಾಗಿದ್ದು ಹೆಣ್ಣು ಚಿರತೆಯೊಂದನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆಯವರು ಹಾಗೂ ಸಾರ್ವಜನಿಕರು ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಐಡಿಹಳ್ಳಿ ಹೋಬಳಿಯ ಗರಣಿ ಗ್ರಾಮದ ಗೇಟ್ ಸಮೀಪವಿರುವ ನರಸಿಂಹಯ್ಯ ಎನ್ನುವವರಿಗೆ ಸೇರಿದ ಇಟ್ಟಿಗೆ ಕಾರ್ಖಾನೆಯ ಬಳಿ ಶುಕ್ರವಾರ ಬೆಳಗ್ಗೆ ಸುಮಾರು 2 ವರ್ಷ ಪ್ರಾಯದ ಹೆಣ್ಣು ಚಿರತೆಯೊಂದು ಪ್ರತ್ಯಕ್ಷವಾಗಿತ್ತು.
ಚಿರತೆಯನ್ನು ಕಂಡ ಕೆಲ ಗ್ರಾಮಸ್ಥರ ತಂಡ ಚಿರತೆಯನ್ನು ಹಿಂಬಾಲಿಸಿಕೊಂಡು ಹೋದಾಗ ಮಿಡಿಗೇಶಿ ಗರಣಿ ಮುಖ್ಯ ರಸ್ತೆಯ ಸಮೀಪವಿದ್ದ ಇಟ್ಟಿಗೆ ಕಾರ್ಖಾನೆಯ ಸಮೀಪದಲ್ಲಿನ ಪೂದೆಯಲ್ಲಿ ಸೇರಿಕೊಂಡಿತ್ತು. ಚಿರತೆ ಬಂದಿರುವ ವಿಷಯ ತಿಳಿಯುತ್ತಲೆ ಗರಣಿ ಸುತ್ತಮುತ್ತಾಲಿನ ನೂರಾರು ಗ್ರಾಮಸ್ಥರ ಚೀರಾಟ ಹಾಗೂ ಕೂಗಾಟಕ್ಕೆ ಪೊದೆ ಸೇರಿದ್ದ ಹೆಣ್ಣು ಚಿರತೆ ಮಧ್ಯಾಹ್ನದ ವರೆವಿಗೂ ಪೊದೆ ಬಿಟ್ಟು ಕದಲಿರಲಿಲ್ಲ.
ಕೆಲ ಗ್ರಾಮಸ್ಥರು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ಚಿರತೆಯನ್ನು ಹಿಡಿಯುವಂತೆ ಮನವಿ ಮಾಡಿದ್ದರು ತಕ್ಷಣ ಕಾರ್ಯ ಪೌವೃತ್ತರಾದ ಅರಣ್ಯ ಇಲಾಖೆಯವರು ಚಿರತೆ ಅವಿತು ಕೊಂಡಿರುವ ಸ್ಥಳದ ಬಗ್ಗೆ ಮಾಹಿತಿ ಪಡೆದು ಮಧ್ಯಾಹ್ನ ಸುಮಾರು 1.20ರ ಸಮಯದಲ್ಲಿ ಪೊದೆಯಲ್ಲಿ ನಿಂತ್ರಾಣವಾಗಿದ್ದ ಚಿರತೆಯ ಮೇಲೆ ಬಲೆ ಬೀಸಿ ಹಿಡಿದು ಕೊಂಡು ತಿಮ್ಮಲಾಪುರ ಅಭಯಾರಣ್ಯಕ್ಕೆ ಚಿರತೆಯನ್ನು ಬಿಡಲಾಯಿತು.
ಈ ಸಂಧರ್ಭದಲ್ಲಿ ಚಿರತೆಯನ್ನು ನೋಡಲು ಬಂದ ನೂರಾರು ಜನ ಗ್ರಾಮಸ್ಥರನ್ನು ನಿಯಂತ್ರಿಸಲು ಮಿಡಿಗೇಶಿ ಪೋಲಿಸರು ಹರಸಾಹಸ ಪಡಬೇಕಾಯಿತು. ಆದರೆ ಚಿರತೆಯಿಂದ ಯಾವುದೇ ಪ್ರಾಣಾಪಾಯಗಳು ಸಂಭಂವಿಸಿಲ್ಲ. ಹೆಣ್ಣು ಚಿರತೆಯು ಗರ್ಭಧರಿಸಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಮರಿಗಳನ್ನು ಜನ್ಮ ನೀಡಲಿದೆ ಆದ್ದರಿಂದ ಅದು ಸ್ವಲ್ಪ ಕಾಲ ನಿತ್ರಾಣವಾಗಿತ್ತು ಯಾರಿಗೂ ಯಾವುದೇ ರೀತಿಯ ತೊಂದರೆ ಯಾಗಿಲ್ಲ ಚಿರತೆಯು ಆರೋಗ್ಯವಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಆರ್ ಎಫ್ ಓ ವಾಸುದೇವಾ ಮೂರ್ತಿ, ಮುತ್ತುರಾಜ್, ಚಂದ್ರಶೇಖರ್, ಶಿವರಾಜ್, ಕರಿಯಣ್ಣ, ಕೇಶವಮೂರ್ತಿ, ಮಿಡಿಗೇಶಿ ಪೋಲೀಸ್ ಸಿಬ್ಬಂದಿವರ್ಗದವರು ಹಾಗೂ ನೂರಾರು ಗ್ರಾಮಸ್ಥರು ಇದ್ದರು.