ತುಮಕೂರು :
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ನಗರದಲ್ಲಿರುವ ಎಲ್ಲಾ ಬಡಾವಣೆಗಳ ಗಡಿ ಗುರುತಿಸಿ ಬಡಾವಣೆವಾರು ನಾಗರಿಕ ಹಿತರಕ್ಷಣಾ ಸಮಿತಿಗಳನ್ನು ಬಳಸಿಕೊಳ್ಳಲು ನಿರ್ಣಯವನ್ನು ಕೈಗೊಳ್ಳಲಾಯಿತು.
ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ಕಚೇರಿಯಲ್ಲಿಂದು ಸಂಸದ ಜಿ.ಎಸ್. ಬಸವರಾಜು ಅವರ ಅಧ್ಯಕ್ಷತೆಯಲ್ಲಿ ಜರುಗಿದ ತುಮಕೂರು ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಯಿತು. ನಂತರ ಮಾತನಾಡಿದ ಸಂಸದರು ನಗರದ ಬಡಾವಣೆವಾರು ನಾಗರಿಕ ಸಮಿತಿಗಳನ್ನು ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಬಳಸಿಕೊಳ್ಳುವುದರಿಂದ ನಗರದ ಪ್ರತಿಯೊಂದು ಮುಖ್ಯರಸ್ತೆ, ಅಡ್ಡರಸ್ತೆ, ಲಿಂಕ್ ರಸ್ತೆಯ ಪ್ರತಿಯೊಂದು ಯೋಜನೆಗಳನ್ನು ಸಂಗ್ರಹಿಸಲು ಮತ್ತು ಕಾಮಗಾರಿಗಳನ್ನು ವೀಕ್ಷಣೆ ಮಾಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಸ್ಮಾರ್ಟ್ ಸಿಟಿ ಯೋಜನೆ ಹಾಗೂ ಪಾಲಿಕೆಯಡಿ ಕೈಗೊಳ್ಳುವ ಪ್ರತಿ ಕಾಮಗಾರಿಯ ಸಂಪೂರ್ಣ ಮಾಹಿತಿಯನ್ನು ಜಿ.ಐ.ಎಸ್ ಮ್ಯಾಪಿಂಗ್‍ಗೆ ಅಳವಡಿಸಬೇಕು. ಸ್ಮಾರ್ಟ್‍ಸಿಟಿ, ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಗಳು ಕೈಗೊಳ್ಳುವ ಕಾಮಗಾರಿಗಳ ಬಗ್ಗೆ ಇಂಚಿಂಚೂ ಮಾಹಿತಿಯನ್ನು ಈ ಮ್ಯಾಪಿಂಗ್‍ನಲ್ಲಿ ಅಳವಡಿಸುವುದರಿಂದ ಯಾವ ಇಲಾಖೆ..? ಎಲ್ಲಿ..? ಯಾವ ಕಾಮಗಾರಿ ಕೈಗೊಂಡಿದೆ ಎಂಬುದರ ಬಗ್ಗೆ ಕ್ಷಣದಲ್ಲಿಯೇ ಮಾಹಿತಿ ಲಭ್ಯವಾಗುವುದಲ್ಲದೆ, ಸಾರ್ವಜನಿಕರಿಗೂ ಸಹ ಮಾಹಿತಿ ತಲುಪುತ್ತದೆ ಎಂದು ತಿಳಿಸಿದರು.
ಸ್ಮಾರ್ಟ್ ಸಿಟಿ ಹಾಗೂ ಪಾಲಿಕೆ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ನಿರೀಕ್ಷಿತ ಅವಧಿಯಲ್ಲಿ ಪೂರ್ಣಗೊಳ್ಳುತ್ತಿಲ್ಲ. ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂಬ ಸೂಚನಾಫಲಕವನ್ನು ಅಳವಡಿಸದಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಯುಜಿಡಿ, ಡಕ್ಟಿಂಗ್ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ತೆಗೆದ ಗುಂಡಿಗಳನ್ನು ಕಾಮಗಾರಿ ಮುಗಿದ ಕೂಡಲೇ ಮುಚ್ಚಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತುಮಕೂರು ಸ್ಮಾರ್ಟ್ ಸಿಟಿಯಲ್ಲಿ ಕೆಲಸ ಮಾಡುವ ಬಹುತೇಕ ಎಂಜಿನಿಯರ್‍ಗಳು, ಗುತ್ತಿಗೆದಾರರು ಇತರೆ ರಾಜ್ಯದವರಾಗಿದ್ದು, ಸ್ಥಳೀಯ ಸ್ಥಿತಿ-ಗತಿಗಳ ಬಗ್ಗೆ ಅವರಿಗೆ ಮಾಹಿತಿ ಇಲ್ಲದಿರುವುದರಿಂದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಅನಾನುಕೂಲವಾಗುತ್ತಿದೆ ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಅವರು ನಿಗಧಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಗುತ್ತಿಗೆ ಕರಾರನ್ನು ರದ್ದುಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ ಸ್ಮಾರ್ಟ್ ಸಿಟಿಯ ಕಾಮಗಾರಿಗಳಿಗೆ ತುಮಕೂರಿನ ಎಂಜಿನಿಯರಿಂಗ್ ಕಾಲೇಜುಗಳನ್ನು ಬಳಕೆ ಮಾಡಿಕೊಳ್ಳಬಹುದು. ಇದರಿಂದ ಸ್ಮಾರ್ಟ್ ಸಿಟಿಯಲ್ಲಿ ಹಣ ಉಳಿಯುತ್ತದೆ. ಈ ಹಣವನ್ನು ಇತರೆ ಕಾಮಗಾರಿಗಳಿಗೆ ಬಳಕೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ನಗರದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕಾರ್ಯಪಾಲಕ ಅಭಿಯಂತರರ ಮೇಲೆ ಕಾರ್ಯ ಒತ್ತಡ ಹೆಚ್ಚಾಗುತ್ತಿರುವುದರಿಂದ ಕಾಮಗಾರಿ ವಿಳಂಬವಾಗುತ್ತಿದೆ. ಈ ನಿಟ್ಟಿನಲ್ಲಿ ನಗರದಲ್ಲಿನ ಎಂಜಿನಿಯರಿಂಗ್ ಕಾಲೇಜುಗಳನ್ನು ಸಂಪರ್ಕಿಸಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಬೇಕೆಂದು ಸಲಹೆ ನೀಡಿದರಲ್ಲದೆ, ಇದರಿಂದ ವಿದ್ಯಾರ್ಥಿಗಳಿಗೆ ಸೇವಾನುಭವ ನೀಡಿದಂತಾಗುತ್ತದೆ. ಜೊತೆಗೆ ಹಣವೂ ಉಳಿತಾಯವಾಗುತ್ತದೆ ಎಂದು ಸಲಹೆ ನೀಡಿದರು.
ಅಜ್ಜಗೊಂಡನಹಳ್ಳಿ ಕಸ ವಿಲೇವಾರಿ ಘಟಕಕ್ಕೆ ಸಂಬಂಧಿಸಿದಂತೆ ಸಂಸದರು ಪಾಲಿಕೆ ಎಂಜಿನಿಯರ್‍ಗೆ ಪ್ರಶ್ನಿಸಿದಾಗ ಉತ್ತರಿಸಿದ ಎಂಜಿನಿಯರೊಬ್ಬರು ಪ್ರತಿದಿನ 100 ಟನ್ ಕಸ ಸಂಗ್ರಹವಾಗುತ್ತಿದ್ದು, ಅದರಲ್ಲಿ ಒಣ ಕಸ ಹಾಗೂ ಹಸಿ ಕಸವನ್ನು ವೈಜ್ಞಾನಿಕವಾಗಿ ಬೇರ್ಪಡಿಸಲಾಗುತ್ತಿದೆ. ಇದರಿಂದ 4 ಟನ್‍ವರೆಗೆ ಗೊಬ್ಬರ ತಯಾರಾಗುತ್ತಿದೆ ಎಂದು ಮಾಹಿತಿ ನೀಡಿದರು.
ಅದೇ ರೀತಿ ಡಿಜಿಟಲ್ ಇಂಡಿಯಾ ಯೋಜನೆಯ ಪ್ರಕಾರ ಎಲ್ಲಾ ಮಾಹಿತಿಗಳನ್ನು ಜಿಐಎಸ್ ಮಾಡಿಸಲಾಗಿದೆಯೇ..? ಎಂದು ಸಂಸದರು ಪ್ರಶ್ನಿಸಿದಾಗ ಅದಕ್ಕೆ ಉತ್ತರಿಸಿದ ಟೂಡಾ ಆಯುಕ್ತ ಯೋಗಾನಂದ್ ಅವರು, ಈಗಾಗಲೇ ಸ್ಮಾರ್ಟ್ ಸಿಟಿಯ ಎಬಿಡಿ ಏರಿಯಾದಲ್ಲಿ ಸರ್ವೇ ಕಾರ್ಯ ನಡೆಸಿ ಕಟ್ಟಡಗಳ ಮಾಹಿತಿಯನ್ನು ಜಿ.ಐ.ಎಸ್.ಗೆ ಅಳವಡಿಸಲಾಗಿದೆ. ಎಬಿಡಿ ಏರಿಯಾ ಹೊರತುಪಡಿಸಿ ಪಾಲಿಕೆಯ ಉಳಿದ ಎಲ್ಲಾ ವಾರ್ಡುಗಳ ಸರ್ವೇ ಕಾರ್ಯವನ್ನು ಸ್ಮಾರ್ಟ್ ಸಿಟಿ ವತಿಯಿಂದ ಕೈಗೊಳ್ಳಲಾಗುತ್ತಿದೆ ಎಂದರು.
ರಿಂಗ್ ರಸ್ತೆ ಅಭಿವೃದ್ಧಿ ಸಂಬಂಧಿಸಿದಂತೆ 19ಲಕ್ಷ ರೂ. ವೆಚ್ಚದಲ್ಲಿ ಗಿಡಗಳನ್ನು ನೆಡಲು ಯೋಜನೆ ರೂಪಿಸಲಾಗಿದ್ದು, ಈ ಪೈಕಿ ಗಿಡ ನೆಡಲು ಈಗಾಗಲೇ 6ಲಕ್ಷ ರೂ.ಗಳ ವೆಚ್ಚ ಮಾಡಲಾಗಿದೆ. ಆದರೆ ನೆಟ್ಟಿರುವ ಗಿಡಗಳು ಕಾಣದೆ ಕುರುಚಲು ಗಿಡಗಳು ಮಾತ್ರ ಕಾಣುತ್ತಿವೆ ಎಂದು ಸಂಸದರು ಸಂಬಂಧಿಸಿದ ಎಂಜಿನಿಯರೊಬ್ಬರ ವಿರುದ್ಧ ಕೋಪಗೊಂಡಾಗ ಉತ್ತರಿಸಿದ ಎಂಜಿನಿಯರ್ ಈಗಾಗಲೇ ಎಲ್ಲ ಕಡೆ ಗಿಡಗಳನ್ನು ಬೆಳೆಸಲಾಗಿದೆ. ಮಳೆ ಬಂದಿದ್ದ ಕಾರಣ ಕುರುಚಲು ಗಿಡಗಳನ್ನು ಕಟಾವು ಮಾಡಲು ಸಾಧ್ಯವಾಗಿಲ್ಲ. ಮಳೆ ನಿಂತಿರುವುದರಿಂದ ಕುರುಚಲು ಗಿಡಗಳನ್ನು ತೆಗೆಯಲಾಗುವುದು ಎಂದು ಮಾಹಿತಿ ನೀಡಿದರು.
ನಗರದಲ್ಲಿ ಕಸ ವಿಲೇವಾರಿ ಬಗ್ಗೆ ಮಾತನಾಡಿದ ಸಂಸದರು ಹಾಗೂ ಶಾಸಕರು ದಿನೇ ದಿನೇ ಕಟ್ಟಡ ನಿರ್ಮಾಣದ ತ್ಯಾಜ್ಯ ಹೆಚ್ಚಾಗುತ್ತಿದೆ. ಕಸವನ್ನು ವಿಲೇವಾರಿ ಮಾಡಲು ಸಮಸ್ಯೆ ಏನು? ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಪಾಲಿಕೆಯ ಪ್ರಭಾರ ಆಯುಕ್ತ ಸಿ.ಎಲ್.ಶಿವಕುಮಾರ್ ಅವರಿಗೆ ಸೂಚಿಸಿದಾಗ, ಹಸಿಕಸ, ಒಣಕಸ ವಿಲೇವಾರಿ ಮಾತ್ರ ಪಾಲಿಕೆ ವ್ಯಾಪ್ತಿಗೆ ಸೇರುತ್ತದೆ. ಕಟ್ಟಡ ನಿರ್ಮಾಣ ಕಾಮಗಾರಿಯ ತ್ಯಾಜ್ಯವನ್ನು ರಾತ್ರೋ ರಾತ್ರಿ ಕೆಲ ಕಟ್ಟಡ ಮಾಲೀಕರು/ಗುತ್ತಿಗೆದಾರರು ಕೆರೆ, ಸರ್ಕಾರಿ ಜಾಗಗಳಲ್ಲಿ ಅಕ್ರಮವಾಗಿ ಎಸೆಯುತ್ತಿದ್ದಾರೆ ಎಂದು ಸಂಸದರ ಗಮನಕ್ಕೆ ಆಯುಕ್ತರು ತಂದರು. ಮನೆ ಕಟ್ಟಲು ಗುತ್ತಿಗೆದಾರರಿಗೆ ಅನುಮತಿ ನೀಡುವಾಗಲೇ ಅವರಿಂದ ಠೇವಣಿ ಹಣವನ್ನು ಪಡೆಯಬೇಕು. ಒಂದು ವೇಳೆ ಆ ಗುತ್ತಿಗೆದಾರ ಕೆರೆಗೆ ಮಣ್ಣು ಸುರಿದಾಗ ಆತನು ಕಟ್ಟಿದ್ದ ಹಣದಿಂದಲೇ ಅದನ್ನು ಸ್ವಚ್ಛ ಮಾಡುವ ಕೆಲಸ ಕೈಗೊಳ್ಳಬೇಕು ಎಂದು ಸಂಸದರು ಸಲಹೆ ನೀಡಿದರು.
ಸಭೆಯಲ್ಲಿ ದಿಶಾ ಸಮಿತಿ ಸದಸ್ಯ ಕುಂದರನಳ್ಳಿ ರಮೇಶ್, ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.