ತುಮಕೂರು:
ತುಮಕೂರು ನಗರ ಸೇರಿದಂತೆ ಜಿಲ್ಲೆಯಾಧ್ಯಂತ ಶಾಂತಿಯುತವಾಗಿ ಈದ್ ಮಿಲಾದ್ ಆಚರಿಸಲಾಗಿದ್ದು, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಸೂಕ್ತ ಭದ್ರತೆ, ಮುಂಜಾಗ್ರತಾ ಕ್ರಮಗಳು ಹಾಗೂ ಹಗಲಿರುಳೆನ್ನದೆ ನಾಗರೀಕ ಸಮಾಜದ ರಕ್ಷಣೆಗಾಗಿ ಶ್ರಮವಹಿಸಿದ ಜಿಲ್ಲಾಧಿಕಾರಿ ಡಾ. ಕೆ.ರಾಜೇಶ್ ಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಕೋನ ವಂಶಿಕೃಷ್ಣ ಅವರಿಗೆ ಇಡೀ ಜಿಲ್ಲೆಯ ಪರವಾಗಿ ಧನ್ಯವಾದಗಳನ್ನು ಹೇಳುತ್ತೇವೆ ಎಂದು ಉಮ್ಮತ್ ಸಂಘಟನೆಯ ಮುಖ್ಯಸ್ಥ ಹಾಗೂ ಅಲ್ಪಸಂಖ್ಯಾತರ ಮುಖಂಡ ನಿಸಾರ್ ಅಹಮದ್ ಹೇಳಿದರು.
ಶಾಂತಿಯುತ ಈದ್ ಮೀಲಾದ್ ಆಚರಣೆಗೆ ಶ್ರಮವಹಿಸಿದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಎಸ್ಪಿಯವರಿಗೆ ಶಾಲು ಹೊದಿಸಿ ಸನ್ಮಾನಿಸುವ ಮೂಲಕ ಧನ್ಯವಾದಗಳನ್ನು ಸಲ್ಲಿಸಿದರು.
ಕಲ್ಪತರು ನಾಡು ತುಮಕೂರು ಜಿಲ್ಲೆ ಶಾಂತಿಯ ನೆಲೆಬೀಡು, ಭಾತೃತ್ವಕ್ಕೆ ಹೆಸರುವಾಸಿ. ಎಂದಿಗೂ ಎಂಥಾ ಸಂದರ್ಭದಲ್ಲೂ ತುಮಕೂರು ಜಿಲ್ಲೆ ಐಕ್ಯತೆಯನ್ನು ಕಡಿದುಕೊಂಡಿಲ್ಲ. ಅಯೋಧ್ಯೆ ತೀರ್ಪು ಹೊರಬಿದ್ದ ನಂತರದ ದಿನ ನಡೆದ ಈದ್ ಮೀಲಾದ್ ಆಚರಣೆಯಲ್ಲಿ ಎಲ್ಲೂ ಸಹ ಭಾವೈಕ್ಯತೆಗೆ ಭಂಗವಾಗಲಿಲ್ಲ. ಇಂಥಾ ಸೂಕ್ಷ್ಮ ಸಂದರ್ಭದಲ್ಲಿ ಶಾಂತಿ ಹಾಗೂ ಸೌಹಾರ್ದದ ಈದ್ ಮೀಲಾದ್ ಆಚರಣೆಗೆ ಕಾರಣರಾದ ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್‍ಕುಮಾರ್ ಹಾಗೂ ಎಸ್ಪಿ ಡಾ. ಕೋನ ವಂಶಿಕೃಷ್ಣ ಅವರಿಗೆ ಇಡೀ ಜಿಲ್ಲೆಯ ಜನತೆಯ ಪರವಾಗಿ ತಾವು ಅಭಿನಂದಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಉಮ್ಮತ್ ಸಂಘಟನೆಯ ಆಸಿಫ್, ಸುಜಾದ್, ಸಿದ್ದೀಕ್ ಅಹಮದ್ ಹಾಗೂ ಮಹಮದ್ ಸಮೀರ್ ಇದ್ದರು.