ತುಮಕೂರು :
ಸಚಿವರಾಗಿ ಪ್ರಮಾಣ ಸ್ವೀಕರಿಸುವಾಗ ಮಾಡಿದ್ದ ವಚನವನ್ನು ಮರೆತು ಒಂದು ಸಮಾಜದ ಹಿತ ಕಾಯುವಲ್ಲಿ ನಿರತವಾಗಿರುವ ಕಾನೂನು ಮತ್ತು ಸಂಸದೀಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಕಾಗಿನೆಲೆ ಕನಕ ಗುರುಪೀಠದ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿಗಳಿಗೆ ಅವಮಾನವಾಗುವ ರೀತಿ ಮಾತನಾಡಿ ಇಡೀ ಕುರುಬ ಜನಾಂಗದ ಅಪಮಾನ ಮಾಡಿರುತ್ತಾರೆ, ಇಂಥವರು ಮಂತ್ರಿಯಾಗಿ ಮುಂದುವರಿಯುವುದು ರಾಜ್ಯಕ್ಕೆ ಹಿತವಲ್ಲ, ಜೆ.ಸಿ. ಮಾಧುಸ್ವಾಮಿಯವರು ಈ ಕೂಡಲೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ.ರಾಮಚಂದ್ರಪ್ಪ ಆಗ್ರಹಿಸಿದರು.
ಅವರು ನಗರದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡುತ್ತಾ, ಕನಕ ಗುರುಪೀಠದ ಶ್ರೀಗಳೋರ್ವರನ್ನು ಅಪಮಾನ ಮಾಡುವ ರೀತಿ ಮಾತನಾಡಿ ಇಡೀ ರಾಜ್ಯದ ಕುರುಬ ಸಮಾಜದವರನ್ನು ಕೆರಳಿಸಿರುವ ಸಚಿವ ಮಾಧುಸ್ವಾಮಿ ಈ ಕೂಡಲೆ ಬಹಿರಂಗವಾಗಿ ಶ್ರೀಗಳ ಕ್ಷಮೆಯಾಚಿಸಬೇಕು, ಇಲ್ಲವಾದಲ್ಲಿ ನ.25ರಂದು ತುಮಕೂರು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡು ನಂತರ ಬೆಂಗಳೂರು ಸೇರಿದಂತೆ ರಾಜ್ಯಾಧ್ಯಂತ ಉಗ್ರ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.
ಹುಳಿಯಾರು ಪಟ್ಟಣದಲ್ಲಿ ಅಂದಿನ ಗ್ರಾ.ಪಂ. ಠರಾವಿನಂತೆ 15 ವರ್ಷಗಳ ಹಿಂದೆಯೇ ಕನಕ ವೃತ್ತವನ್ನು ಸ್ಥಾಪಿಸಲಾಗಿತ್ತು. ಪ್ರತಿ ವರ್ಷವೂ ಅಲ್ಲಿಂದಲೇ ಕನಕ ಜಯಂತಿಯ ಉತ್ಸವವೂ ಆರಂಭವಾಗುತ್ತಿತ್ತು. ಇತ್ತೀಚೆಗೆ ರಸ್ತೆ ಕಾಮಗಾರಿ ಎಂದು ಅಲ್ಲಿದ್ದ ಕನಕವೃತ್ತದ ನಾಮಫಲಕವನ್ನು ತೆಗೆಯಲಾಗಿತ್ತು. ನಂತರ ಮತ್ತೆ ಅಲ್ಲಿ ಬೇರೊಂದು ಹೆಸರಿನ ನಾಮಫಲಕ ಹಾಕುವ ಮೂಲಕ ವೃತ್ತಕ್ಕಿದ್ದ ಕನಕರ ಹೆಸರನ್ನು ಅಳಿಸುವ ಕೆಲಸಕ್ಕೆ ಸಚಿವರು ಇಂಬು ನೀಡಿದ್ದರು. ಈ ಬಗ್ಗೆ ಸಂಧಾನ ಸಭೆ ನಡೆದ ಸಂದರ್ಭದಲ್ಲಿ ಸೇರಿದ್ದ ಕುರುಬ ಸಮಾಜದ ಮುಂಡರನ್ನೂ ಸೇರಿದಂತೆ ಕಾಗಿನೆಲೆ ಕನಕ ಗುರುಪೀಠದ ಹೊಸದುರ್ಗದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿಗಳಿಗೂ ಧಮಕಿ ಹಾಕಿರುತ್ತಾರೆ. ಒಂದು ಸಮುದಾಯದ ಹಿತ ಕಾಯುವುದೇ ನನ್ನ ಕರ್ತವ್ಯ, ನಿಮ್ಮ ಕೈಯಲ್ಲಿ ಏನಾಗುತ್ತೋ ಅದನ್ನು ಮಾಡಿ, ನಾನು ಈ ಜಿಲ್ಲೆಯ ಉಸ್ತುವಾರಿ ಸಚಿವನಾಗಿದ್ದು ನಿಮಗೆ ಯಾವ ರೀತಿ ಬುದ್ಧಿ ಕಲಿಸಬೇಕು ಎಂಬುದು ಗೊತ್ತು ಎಂದು ಹೇಳಿರುವುದಾಗಿ ರಾಮಚಂದ್ರಪ್ಪ ಆರೋಪಿಸಿದರು.
ಹುಳಿಯಾರಿನ ಸದರಿ ವೃತ್ತವನ್ನು ಕನಕ ವೃತ್ತವಾಗಿಸುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ. ಅಧಿಕಾರ ಬಂದೊಡನೆ ತಮ್ಮ ಜನಾಂಗದ ಸ್ವತ್ತಾಗಿಸಲು ಸಚಿವರು ಹೊರಟಿರುವುದು ಹಾಸ್ಯಾಸ್ಪದ, ಸಚಿವರಾಗಿ ಇಡೀ ರಾಜ್ಯದಲ್ಲಿನ ಎಲ್ಲಾ ಸಮುದಾಯಗಳ ಹೊಣೆ ಹೊರಬೇಕಾದವರು ಇಂಥಾ ಕೃತ್ಯಗಳಲ್ಲಿ ಭಾಗಿಯಾಗಬಾರದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದರಾಮಯ್ಯ ಸೇರಿದಂತೆ ಕುರುಬರ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.