ಬೆಂಗಳೂರು: 

      ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಬಿಜೆಪಿಯ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ಅನಂತ್​ ಕುಮಾರ್(59)​ ಅವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗ್ಗೆ ವಿಧಿವಶರಾಗಿದ್ದಾರೆ.

      ತೀವ್ರ ಅನಾರೋಗ್ಯ ಕಾರಣದಿಂದಾಗಿ ಕಳೆದ 20 ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗಿನ ಜಾವ ಸುಮಾರು 3 ಗಂಟೆ ಸಮಯದಲ್ಲಿ ಆಸ್ಪತ್ರೆಯಲ್ಲೆ ಕೊನೆಯುಸಿರೆಳೆದಿದ್ದಾರೆ. ಅನಂತ್​ ಕುಮಾರ್​ ಅವರು ಪತ್ನಿ ತೇಜಸ್ವಿನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.

      ಖಾಸಗಿ ಆಸ್ಪತ್ರೆಯಿಂದ ಲಾಲ್ ಬಾಗ್ ರಸ್ತೆಯಲ್ಲಿರುವ ಸುಮೇರ ನಿವಾಸಕ್ಕೆ ಅನಂತ್​ ಕುಮಾರ್​ ಅವರ ಪಾರ್ಥಿವ ಶರೀರ ರವಾನೆಯಾಗಿದೆ. ಸದ್ಯ ಕುಟುಂಬದವರಿಗೆ ಮಾತ್ರ ಮನೆಯಲ್ಲಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಬೆಳಗ್ಗೆ 9 ಗಂಟೆ ಸಮಯದ ನಂತರ ಪಾರ್ಥೀವ ಶರೀರದ ದರ್ಶನಕ್ಕೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸ್ಥಳಕ್ಕೆ ದಕ್ಷಿಣ ವಿಭಾಗ ಪೊಲೀಸರಿಂದ ‌ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಭಾರತೀಯ ಜನತಾ ಪಕ್ಷದ ನಾಯಕರಾಗಿದ್ದ ಅನಂತ್ ಕುಮಾರ್ ಒಬ್ಬ ಯಶಸ್ವಿ ರಾಜಕಾರಣಿ. ಕರ್ನಾಟಕದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿಯಾಗಿ ಜಯಗಳಿಸಿ, ಸಂಸದರಾಗಿ ಆಯ್ಕೆಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಕೇಂದ್ರ ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಖಾತೆಯನ್ನು ಅನಂತ್​ ಕುಮಾರ್​ ಅವರು ನಿರ್ವಹಿಸುತ್ತಿದ್ದರು.

 

(Visited 24 times, 1 visits today)