ತುಮಕೂರು:
ಇತಿಹಾಸ ಪ್ರಸಿದ್ದ ಗೂಳೂರು ಶ್ರೀ ಮಹಾಗಣಪತಿ ವಿಸರ್ಜನಾ ಮಹೋತ್ಸವ ನ. 30 ಮತ್ತು ಡಿ. 1 ರಂದು ಅತ್ಯಂತ ವೈಭವಯುತವಾಗಿ ನಡೆಯಲಿದೆ.
ನ. 30 ರಂದು ರಾತ್ರಿ 10 ಗಂಟೆಗೆ ಗೂಳೂರಿನಲ್ಲಿ ಮಾಮೂಲಿನಂತೆ ವಿದ್ಯುದ್ದೀಪಗಳಿಂದ ಅಲಂಕೃತವಾದ ಭವ್ಯ ಹೂವಿನ ಮಂಟಪದಲ್ಲಿ ಶ್ರೀ ಮಹಾಗಣವತಿ ಉತ್ಸವ ಜರುಗಲಿದೆ.
ನ. 30 ರಂದು ಸಂಜೆ 7 ಗಂಟೆಗೆ ಜಾತ್ರೆಗೆ ಬರುವ ಭಕ್ತಾದಿಗಳಿಗಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ರಾತ್ರಿ 8 ಗಂಟೆಗೆ ಶ್ರೀ ಚೌಡೇಶ್ವರಿ, ಗಣೇಶ, ಆಂಜನೇಯ, ಸುಬ್ರಹ್ಮಣ್ಯ ದೇವಾಲಯದಲ್ಲಿ ವಿಶೇಷ ಅಲಂಕಾರ ಹಮ್ಮಿಕೊಳ್ಳಲಾಗಿದೆ.
ಗೂಳೂರು ಗಣಪತಿ ಜಾತ್ರೆಯ ಅಂಗವಾಗಿ ಅನೇಕ ವೈಭವ ಮನರಂಜನೆಗಳ ಜತೆಗೆ ಹಿಂದಿನ ಕರ್ನಾಟಕದ ಗತವೈಭವವನ್ನು ಬಿಂಬಿಸುವ ಐತಿಹಾಸಿಕ ಹಿನ್ನೆಲೆಯನ್ನು ಸಾರುವ ಚಿತ್ರದುರ್ಗದ ಮದಕರಿ ಪಾಳೆಯಗಾರನ ವೇಷಭೂಷಣದ ಕುಣಿತ ಸಹ ಏರ್ಪಡಿಸಲಾಗಿದೆ.
ಅಂದು ರಾತ್ರಿ ವಿದ್ಯುತ್ ದೀಪಾಲಂಕೃತ ಹೂವಿನ ವಾಹನದೊಂದಿಗೆ ಬಾಣ, ಬಿರುಸು, ಮದ್ದಿನ ಮರ ಮತ್ತು ಮನರಂಜನಾ ಕಾರ್ಯಕ್ರಮದೊಂದಿಗೆ ಗ್ರಾಮದ ರಾಜಬೀದಿಗಳಲ್ಲಿ ಗಣಪತಿಯ ಮೆರವಣಿಗೆ ನಡೆಸಿ ಡಿ. 1 ರಂದು ಸಂಜೆ ಗೂಳೂರಿನ ಕೆರೆಯಲ್ಲಿ ಶ್ರೀ ಸ್ವಾಮಿಯನ್ನು ವಿಸರ್ಜಿಸಲಾಗುವುದು ಎಂದು ಶ್ರೀ ಗೂಳೂರು ಮಹಾಗಣಪತಿ ಭಕ್ತ ಮಂಡಳಿಯ ಅಧ್ಯಕ್ಷ ಜಿ.ಎಸ್. ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ. 30 ಮತ್ತು ಡಿ. 1 ರಂದು ಎರಡು ದಿನಗಳ ಕಾಲ ನಡೆಯಲಿರುವ ಗೂಳೂರು ಗಣೇಶ ಜಾತ್ರೆಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಜಾತ್ರೆಯ ನಂತರ ಶ್ರೀ ಮಹಾಗಣಪತಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಡಿ.2 ರಂದು ಬೆಳಿಗ್ಗೆ 11 ಗಂಟೆಗೆ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕ ಪ್ರದರ್ಶನವನ್ನು ಗೂಳೂರಿನಲ್ಲಿ ಏರ್ಪಡಿಸಲಾಗಿದೆ.