ತುಮಕೂರು:
ಧರ್ಮ, ಜಾತಿ ಅಥವಾ ಸಮುದಾಯಗಳ ನಡುವೆ ವೈಷಮ್ಯದ ಭಾವನೆಗಳನ್ನು ಬೆಳೆಸುವ ಕಾರ್ಯಕ್ರಮಗಳ ಪ್ರಸಾರ ಮಾಡುವ ಕೇಬಲ್ ಟಿವಿಗಳ ವಿರುದ್ಧ ನಿಯಮಾನುಸಾರ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಕೇಬಲ್ ಟೆಲಿವಿಷನ್ ನೆಟ್‍ವರ್ಕ್ ಜಿಲ್ಲಾ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಯಾವುದೇ ಕಾರ್ಯಕ್ರಮ, ಸಾರ್ವಜನಿಕ ಶಾಂತಿಗೆ ಭಂಗವುಂಟು ಮಾಡುವ ಸಂಭವವಿದ್ದರೆ ಸಾರ್ವಜನಿಕ ಹಿತದೃಷ್ಟಿಯಿಂದ ಕಾರ್ಯಕ್ರಮಗಳ ಪ್ರಸರಣವನ್ನು ನಿಷೇಧಿಸಬಹುದಾಗಿದೆ ಎಂದರು.
ಸ್ಥಳೀಯ ಮಟ್ಟದಲ್ಲಿ ಕೇಬಲ್ ಟೆಲಿವಿಷನ್ ಚಾನೆಲ್‍ಗಳು ಪ್ರಸಾರ ಮಾಡಿದ ವಿಷಯಗಳ ಬಗ್ಗೆ ಅಧಿಕೃತ ಅಧಿಕಾರಿಗಳು ನಿಗಾವಹಿಸಬೇಕು. ಅಲ್ಲದೇ ಅನಧಿಕೃತ ಅಥವಾ ನಕಲಿ ಚಾನೆಲ್‍ಗಳು ಕಾರ್ಯನಿರ್ವಹಿಸದಂತೆ ಮತ್ತು ಕೇಬಲ್ ಟೆಲಿವಿಷನ್ ಆಪರೇಟರ್‍ಗಳು ನಿಷ್ಪಕ್ಷಪಾತವಾಗಿ ಮತ್ತು ಯಾವುದೇ ಸಮುದಾಯಕ್ಕೆ ಭಂಗ ಉಂಟು ಮಾಡದಂತೆ ನೋಡಿಕೊಳ್ಳಬೇಕು ಎಂದು ಅವರು ನಿರ್ದೇಶನ ನೀಡಿದರು.
ಕೇಬಲ್ ಟೆಲಿವಿಷನ್ ಮೂಲಕ ಪ್ರಸಾರವಾಗುವ ಕಾರ್ಯಕ್ರಮಗಳ ಕುರಿತಂತೆ ದೂರುಗಳಿದ್ದಲ್ಲಿ ಸಾರ್ವಜನಿಕರು ನೇರವಾಗಿ ಆಯಾ ತಾಲ್ಲೂಕಿನ ತಹಶೀಲ್ದಾರರು ಅಥವಾ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿಗೆ ದೂರು ನೀಡಬಹುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ವರದಕ್ಷಿಣೆ ವಿರೋಧಿ ವೇದಿಕೆಯ ಕಾರ್ಯದರ್ಶಿ ಸಾ.ಚಿ.ರಾಜಕುಮಾರ್, ಡಾ: ಟಿ.ಆರ್.ಲೀಲಾವತಿ, ಸಾಮಾಜಿಕ ಕಾರ್ಯಕರ್ತೆ ರೇಣುಕಾ ಪರಮೇಶ್, ಮನಶಾಸ್ತ್ರಜ್ಞ ಡಾ: ಸತ್ಯನಾರಾಯಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡಿ. ಹಾಜರಿದ್ದರು.