ತುಮಕೂರು:
ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ, ಪೊಲೀಸ್ ಹಾಗೂ ಕಾನೂನು ಸೇವೆ ಸೇರಿದಂತೆ ಸಮಾಲೋಚನೆ ಮತ್ತು ತಾತ್ಕಾಲಿಕ ವಸತಿ ಒದಗಿಸುವ ಕೇಂದ್ರ ಸರ್ಕಾರದ ಸಖಿ (ಒನ್ ಸ್ಟಾಪ್ ಸೆಂಟರ್) ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ|| ರಾಕೇಶ್ ಕುಮಾರ್ ಇಂದು ಭೇಟಿ ನೀಡಿ ಕೇಂದ್ರದಲ್ಲಿ ದಾಖಲಾಗಿರುವ ಪ್ರಕರಣಗಳು ಹಾಗೂ ಕೇಂದ್ರದ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ತುಮಕೂರು ಸಾರ್ವಜನಿಕ ಆಸ್ಪತ್ರೆಯ ಮೊದಲನೇ ಮಹಡಿಯಲ್ಲಿ ಇಂದಿನಿಂದ ಪ್ರಾರಂಭಿಸಲಾಗಿರುವ ಸಖಿ ಕೇಂದ್ರವನ್ನು ಪರಿಶೀಲಿಸಿದ ನಂತರ ಕೇಂದ್ರದ ಕಟ್ಟಡವು ತುಂಬಾ ಕಿರಿದಾಗಿದ್ದು, ಸಮಾಲೋಚನೆಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಬೇಕೆಂದು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚಿಸಿದರು.
ಸಖಿ (ಒನ್ ಸ್ಟಾಪ್ ಸೆಂಟರ್) ಕೇಂದ್ರವನ್ನು ರಾಜ್ಯ ಸರ್ಕಾರದ ವತಿಯಿಂದ 2015-16ನೇ ಸಾಲಿನಿಂದ ವಿಶೇಷ ಚಿಕಿತ್ಸಾ ಘಟಕ ಯೋಜನೆಯಡಿ ಗೆಳತಿ ಎಂಬ ಹೆಸರಿನಲ್ಲಿ ನಡೆಸಲಾಗುತ್ತಿತ್ತು.ದೀ ಕೇಂದ್ರದಲ್ಲಿ ಈವರೆಗೆ 302 ಪ್ರಕರಣಗಳು ದಾಖಲಾಗಿದ್ದು, ವಿವಿಧ ಸೇವೆಗಳನ್ನು ನೀಡಲಾಗುತ್ತಿದೆ. ಸಖಿ (ಒನ್ ಸ್ಟಾಪ್ ಸೆಂಟರ್) ಕೇಂದ್ರಕ್ಕೆ ಅವಶ್ಯವಿರುವ ಕಟ್ಟಡವನ್ನು ನಿರ್ಮಿಸಲು 37.00ಲಕ್ಷ ರೂ.ಗಳ ಅನುದಾನ ಕೋರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸ್ಥಳದಲ್ಲಿ ಹಾಜರಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಎಸ್.ನಟರಾಜ್ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಭೇಟಿಯ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ|| ವೀರಭದ್ರಯ್ಯ, ತುಮಕೂರು (ಗ್ರಾಮಾಂತರ) ಶಿಶು ಅಭಿವೃದ್ದಿ ಯೋಜನಾಧಿಕಾರಿ ಶ್ರೀಧರ್.ಎಂ.ಎಸ್., ಸಖಿ ಕೇಂದ್ರದ ಸಮಾಲೋಚಕರು ಹಾಗೂ ಸಮಾಜ ಕಾರ್ಯಕರ್ತರು, ಮತ್ತಿತರರು ಹಾಜರಿದ್ದರು.