ತುಮಕೂರು :
ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಮಾಹಿತಿಯನ್ನು ಒಂದೇ ಬೆಸ್‍ಲೈನ್ ಲೇಯರ್‍ಗಳಲ್ಲಿ ಅಪ್‍ಲೋಡ್ ಮಾಡಲು ಇಲಾಖಾವಾರು ಸಂಪೂರ್ಣ ಮಾಹಿತಿ ಒದಗಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಇಲಾಖಾ ಕಾರ್ಯಕ್ರಮಗಳ ಲೇಯರ್ಸ್‍ಗಳನ್ನು ಸಿದ್ಧಪಡಿಸುವ ಸಂಬಂಧ ತಾಂತ್ರಿಕ ತಜ್ಞರೊಂದಿಗೆ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿರುವ ಬೋರ್‍ವೆಲ್, ನದಿ, ಕೆರೆ, ಕಟ್ಟೆ ಕೊಳವೆಬಾವಿ, ತೆರೆದ ಬಾವಿ, ಹಳ್ಳ, ಕಾಲುವೆ ಸೇರಿದಂತೆ ಎಲ್ಲಾ ಜಲಮೂಲಗಳ ಮಾಹಿತಿಯನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಜಿಲ್ಲೆಯಲ್ಲಿರುವ ಅಂಗನವಾಡಿ ಕೇಂದ್ರಗಳು, ಅಂಗನವಾಡಿಗೆ ಬರುವ ಮಕ್ಕಳ ಸಂಖ್ಯೆ ಮತ್ತು ಮಾತೃಪೂರ್ಣ ಯೋಜನೆ ಸೌಲಭ್ಯ ಪಡೆಯುತ್ತಿರುವ ಗರ್ಭಿಣಿಯರ ವಿವರಗಳ ಮಾಹಿತಿಯನ್ನು ನೀಡಬೇಕು ಎಂದರಲ್ಲದೇ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬಾಡಿಗೆ/ಸ್ವಂತ ಕಟ್ಟಡದಲ್ಲಿರುವ ಹಾಸ್ಟೆಲ್‍ಗಳು ಹಾಗೂ ಸೌಲಭ್ಯ ಪಡೆದಿರುವ ವಿದ್ಯಾರ್ಥಿಗಳ ವಿವರಗಳನ್ನು ಒದಗಿಸಬೇಕು ಎಂದರು.
ಆರೋಗ್ಯ ಇಲಾಖೆಯು ಜಿಲ್ಲೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಪ್ರಯೋಗಾಲಯ, ಟ್ರಾಮಾಕೇರ್, ಆ್ಯಂಬುಲೆನ್ಸ್ ಲೋಕೇಶನ್, ಹೊರ/ಒಳ ರೋಗಿಗಳ ವಿವರ ಹಾಗೂ ಪ್ರವಾಸೋದ್ಯಮ ಇಲಾಖೆಯು ಪ್ರವಾಸಿ ತಾಣಗಳ ಛಾಯಾಚಿತ್ರಗಳನ್ನೊಳಗೊಂಡ ಮಾಹಿತಿಯನ್ನು ನೀಡಬೇಕು. ಅಲ್ಲದೇ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಯು ಜಿಲ್ಲೆಯಲ್ಲಿರುವ ಕೃಷಿ ಹೊಂಡ ಹಾಗೂ ಎಷ್ಟು ಹೆಕ್ಟೇರ್‍ನಲ್ಲಿ ಬೆಳೆ ಬೆಳೆದಿದ್ದಾರೆ ಎಂಬ ಮಾಹಿತಿ ನೀಡಲು ನಿರ್ದೇಶನ ನೀಡಿದರು.
ಪಶು ಸಂಗೋಪನೆ ಇಲಾಖೆಯು ಜಿಲ್ಲೆಯಲ್ಲಿರುವ ಪಶು ಆಸ್ಪತ್ರೆ, ಮೇವು ಕೇಂದ್ರಗಳು, ಜಾನುವಾರಗಳ ಸಂಖ್ಯೆಯ ವಿವರಗಳನ್ನು ನೀಡಬೇಕು. ರಾಜ್ಯದಲ್ಲಿಯೇ ಮೊದಲ ಬಾರಿಗೆ ಜಿ.ಪಿ.ಎಸ್ ಮ್ಯಾಪಿಂಗ್ ಯೋಜನೆಯನ್ನು ತುಮಕೂರು ಜಿಲ್ಲೆಯಲ್ಲಿ ಪ್ರಾರಂಭಿಸಿದ್ದು, ಜಿಲ್ಲೆಯ ಇಲಾಖೆಗಳಡಿ ಕೈಗೊಂಡಿರುವ ಯೋಜನೆಗಳು, ಕಾಮಗಾರಿಗಳ ವಿವರಗಳನ್ನು ಡಿಸೆಂಬರ್ 17ರಂದು ನಡೆಯುವ ಸಭೆಯೊಳಗಾಗಿ ಸಂಪೂರ್ಣ ಮಾಹಿತಿಯನ್ನು ನೀಡಿ ಸಹಕರಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್, ಪ್ರಾಜೆಕ್ಟ್ ಸೈಂಟಿಸ್ಟ್ ಮೊಹಮ್ಮದ್ ಸಲೀಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಸ್.ನಟರಾಜ್, ಡಿಹೆಚ್‍ಓ ಡಾ|| ಚಂದ್ರಿಕಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.