ತುಮಕೂರು:
ಕೇಂದ್ರ ಸರ್ಕಾರ ಜನಸಾಮಾನ್ಯರ ಆಹಾರ ಬಳಕೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಈರುಳ್ಳಿ ಬೆಲೆ ನಿಯಂತ್ರಣದಲ್ಲಿ ವಿಫಲವಾಗಿರುವುದನ್ನು ಖಂಡಿಸಿ, ಪಡಿತರ ವ್ಯವಸ್ಥೆಯಡಿ ನಿಯಂತ್ರಿತ ಬೆಲೆಯಲ್ಲಿ ಈರುಳ್ಳಿ ವಿತರಣೆ ಮಾಡುವಂತೆ ಆಗ್ರಹಿಸಿ ದಿನಾಂಕ:09-12-2019ರಂದು ತುಮಕೂರು ನಗರದ ಬಿಎಸ್‍ಎನ್‍ಎಲ್ ಕಚೇರಿ ಎದುರು ಸಿಪಿಎಂ ಮತ್ತು ಸಿಐಟಿಯು ಜಂಟಿಯಾಗಿ ಪ್ರತಿಭಟನೆ ನಡೆಸಿದವು.
ಸಿಪಿಐಎಂ ಮುಖಂಡ ಸೈಯದ್ ಮುಜೀಬ್ ಮಾತನಾಡಿ ಈರುಳ್ಳಿ ಬೆಲೆ ಏರಿಕೆಯಿಂದ ರೈತರಿಗೂ ಲಾಭವಿಲ್ಲ. ಬಳಸುವ ಜನಸಾಮಾನ್ಯರಿಗೂ ಸಂಕಷ್ಟ ತಂದಿದೊಡ್ಡಿರುವ ಈರುಳ್ಳಿ ಬೆಲೆ ನಿಯಂತ್ರಣದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು. ಈ ಹಿಂದೆ ವಿರೋಧ ಪಕ್ಷದಲ್ಲಿದ್ದಾಗ ಬೆಲೆ ಏರಿಕೆಯ ವಿರುದ್ಧ ದೊಡ್ಡ ದನಿ ಎತ್ತಿ ಅಧಿಕಾರಕ್ಕೆ ಬಂದ ಬಿಜೆಪಿಯ ದ್ವಿಮುಖ ನೀತಿ ಬಯಲಾಗಿದೆ ಎಂದು ಟೀಕಿಸಿದರು. ಕಾಳದಾಸ್ತಾನುಕೋರರನ್ನು ಮಟ್ಟಹಾಕಿ ಬೆಲೆ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಪ್ರಾಂತ ರೈತ ಸಂಘದ ಸಹಸಂಚಾಲಕ ಬಿ.ಉಮೇಶ್ ಬೆಲೆ ಏರಿಕೆ ನಿಯಂತ್ರಿಸಲು ಸರ್ಕಾರ ಯವ ಕ್ರಮ ಅನುಸರಿಸಿಲ್ಲ. ಎಲ್ಲಿಯೂ ಸಹ ಅಕ್ರಮ ಈರುಳ್ಳಿ ದಾಸ್ತಾನುಕೋರರ ಮೇಲೆ ದಾಳಿ ನಡೆಸಿಲ್ಲ. ಅಧಿಕಾರ ಹಿಡಿಯಲು ಇತರ ಪಕ್ಷಗಳ ಮೇಲೆ ಐಟಿ ದಾಳಿ ನಡೆಸುವ ಸರ್ಕಾರ ಜನಸಾಮಾನ್ಯರ ನೆರವಿಗೆ ಧಾವಿಸದಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಸಿಐಟಿಯು ತಾಲೂಕು ಅಧ್ಯಕ್ಷ ಷಣ್ಮುಗಪ್ಪ, ಖಜಾಂಚಿ ಎ.ಲೋಕೇಶ್ ಪ್ರತಿಭಟನಯನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿಭಟನೆಯಲ್ಲಿ ಕರ್ನ್ ಲಿಬರರಸ್ ಸಂಘದ ಪುಟ್ಟೇಗೌಡ, ರಾಜಣ್ಣ, ಸಿಐಟಿಯು ತಾಲೂಕು ಸಹಕಾರ್ಯದರ್ಶಿ ಶಿವಕುಮಾರ್ ಮೊದಲಾದವರು ಉಪಸ್ಥಿತರಿದ್ದರು.