ತುಮಕೂರು:
ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಏಕರೂಪ ನಾಗರಿಕ ಕಾಯ್ದೆಯನ್ನು ವಿರೋಧಿಸಿ ಎಸ್ಡಿಪಿಐ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮುಫ್ತಿಯಾರ್ ಅವರು, ದೇಶದಲ್ಲಿ ಹಿಂದೂ ಮುಸ್ಲಿಂರು ಶಾಂತಿಯುತವಾಗಿ ಸಹಬಾಳ್ವೆ ನಡೆಸುತ್ತಿರುವಾಗ, ಕೇಂದ್ರ ಸರ್ಕಾರ ವಿಷ ಬೀಜವನ್ನು ಬಿತ್ತಲು ಮುಂದಾಗಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಒಪ್ಪಿರುವ ಕಾಯ್ದೆಯ ಪ್ರಕಾರ ಅಫ್ಘಾನಿಸ್ತಾನ, ಪಾಕಿಸ್ತಾನ ಸೇರಿದಂತೆ ಬೇರೆ ದೇಶಗಳಿಂದ ಭಾರತಕ್ಕೆ ಬಂದ ಮುಸ್ಲಿಂತೇರರಿಗೆ ಪೌರತ್ವ ನೀಡುವುದಾಗಿ ಹೇಳಿದ್ದು, ಭಾರತದಲ್ಲಿ ಮುಸ್ಲಿಂರನ್ನು ವಿಭಜಿಸಲು ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಭಾರತ ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮುಸ್ಲಿಂ ಸಮುದಾಯವನ್ನು ಕಡೆಗಣಿಸಿ, ಕೀಳು ಭಾವನೆಯಿಂದ ಮುಸ್ಲಿಂರಿಗೆ ಪೌರತ್ವವನ್ನು ನೀಡಲು ಒಪ್ಪದ ಕರಾಳ ಕಾನೂನು ಜಾರಿಗೆ ತಂದಿದೆ ಎಂದು ಆರೋಪಿಸಿದರು.
ಅಸ್ಸಾಂನಲ್ಲಿ ಎನ್‍ಆರ್ಸಿಯಲ್ಲಿ ಸಿಖ್ ಸಮುದಾಯಕ್ಕೆ ನೀಡುವ ಪೌರತ್ವವನ್ನು ಮುಸ್ಲಿಂರಿಗೆ ನೀಡುವುದಿಲ್ಲ ಎಂದು ಹೇಳುತ್ಗಾರೆ, ಅಸ್ಸಾಂನಲ್ಲಿ ನುಸುಳುಕೋರರ ಮೇಲೆ ಕ್ರಮ ಕೈಗೊಳ್ಳಲಿ ಅದನ್ನು ಬಿಟ್ಟು ಎಲ್ಲ ರಾಜ್ಯಗಳ ಮೇಲೆ ಕಾನೂನು ಹೇರುತ್ತಿರುವುದು ಸರಿಯಲ್ಲ ಎಂದರು.
ದೇಶದಲ್ಲಿ ಎಲ್ಲರಿಗೂ ಸಮಾನತೆಯನ್ನು ನೀಡಿರುವ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿರುವ ಕೇಂದ್ರ ಸರ್ಕಾರ, ದೇಶದಲ್ಲಿ ಮಹಿಳೆಯರು ಮತ್ತು ರೈತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ನಿಯಂತ್ರಿಸುವ ಕಡೆಗೆ ಗಮನಹರಿಸದೇ ಪೌರತ್ವ ಕಾಯ್ದೆ ಕಡೆ ಗಮನವನ್ನು ಕೇಂದ್ರಿಕರಿಸಿರುವುದು ಹಾಸ್ಯಾಸ್ಪದ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಶಬ್ಬೀರ್ ಅಹಮದ್, ಕಾರ್ಯದರ್ಶಿ ಫಾರೂಕ್, ಖಜಾಂಚಿ ಉಮ್ರುದ್ದೀನ್, ಮುಫ್ತಿಯಾರ್ ಅಹ್ಮದ್, ರಿಯಾನ್ ಖಾನ್, ಇತರರಿದ್ದರು.