ಮಧುಗಿರಿ :
ಲೋಕಸಭಾ ಚುನಾವಣೆಯಲ್ಲಿ ಜಿ.ಎಸ್.ಬಿ.ಗೆಲುವು ನನ್ನ ಸೋಲನ್ನು ಮರೆಸಿ ಮತ್ತೆ ಜನ ಸೇವೆ ಮಾಡಲು ಪುಷ್ಟಿ ನೀಡಿತು. ಈ ಬಾರಿ ಕ್ಷೇತ್ರಕ್ಕೆ ಯಾವ ಪಕ್ಷದಿಂದ ಬರುತ್ತೇನೆ ಎಂದು ತೀರ್ಮಾನಿಸಿಲ್ಲ. ನಾನು ಯಾವುದೇ ಪಕ್ಷದಿಂದ ನಿಂತರೂ ನಿಮ್ಮ ಸಹಕಾರ ಹಾಗೂ ಆಶಿರ್ವಾದವೇ ಮುಖ್ಯ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ನೂತನ ಟಿಡಿಸಿಸಿ ಬ್ಯಾಂಕಿನ 31ನೇ ಶಾಖೆಯ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಂದು ಕಡೆ ಅಭಿಮಾನಿಗಳ ಅಭಿಮಾನ ಇನ್ನೊಂದು ಕಡೆ ಮುಖಂಡರ ಒತ್ತಾಯ ಮಧುಗಿರಿಗೆ ಬರಬೇಕೆಂದು ನನ್ನ ಮೆಚ್ಚಿನ ಜನತೆ ಇರುವ ಈ ಕ್ಷೇತ್ರಕ್ಕೆ ಬರುತ್ತೇನೆ. ಆದರೆ ಕಾಂಗ್ರೆಸ್ಸಾ , ಬಿಜೆಪಿನಾ, ಬಿಎಸ್‍ಪಿ ನಾ ಅಥವಾ ಜೆಡಿಎಸ್ ಈ ಪಕ್ಷಗಳಲ್ಲಿ ಯಾವುದರಲ್ಲಿಯಾಗಲಿ ಸ್ಪರ್ಧಿಸಬಹುದು. ನಿಮ್ಮ ಅಭಿಮಾನ, ಪ್ರೀತಿಯ ಮುಂದೆ ಯಾವ ಪಕ್ಷವೆನ್ನುವುದು ಮುಖ್ಯವಲ್ಲ ಎಂದು ಮುಂದಿನ ತಮ್ಮ ಸ್ಪರ್ಧೆಯ ಬಗ್ಗೆ ರಾಜಕಾರಣದ ಗುಟ್ಟು ಬಿಡದೆ ಅಭಿಮಾನದ ಮಾತುಗಳನ್ನಾಡಿದರು.
ಅಧಿಕಾರ ಯಾರಿಗೂ ಶಾಶ್ವತವಲ್ಲ, ಅಧಿಕಾರ ಇದ್ದಾಗ ಜನರ ವಿಶ್ವಾಸ ಗಳಿಸುವುದು ಮುಖ್ಯ. ಬರುವ ದಾರಿಯಲ್ಲಿ ಎಲ್ಲಾ ಗ್ರಾಮಗಳಲ್ಲೂ ಅದ್ಭುತ ಸ್ವಾಗತ ಕೋರಿದ ಎಲ್ಲರಿಗೂ ಅಭಿನಂದನೆಗಳು. ಅಧಿಕಾರ ಇರಲಿ ಬಿಡಲಿ ನಿಮ್ಮ ಪ್ರೀತಿ ವಿಶ್ವಾಸ ಸದಾ ನಮ್ಮ ಮೇಲೆ ಇರಲಿ. ನನ್ನ ಅಧಿಕಾರಾವಧಿಯಲ್ಲಿ ಜಾತಿ ಹಾಗೂ ಪಕ್ಷಬೇದ ಮಾಡದೇ ಎಲ್ಲರಿಗೂ ಕೆಲಸ ಮಾಡಿದ್ದೇನೆ, ಎಲ್ಲರಿಗೂ ಸರಕಾರಿ ಸೌಲಭ್ಯ ಸಿಗುವಂತೆ ಕಾರ್ಯ ನಿರ್ವಹಿಸಿದ್ದೇನೆ. ಶಾಲಾ ವಿಧ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ನೀಡಿದ್ದೇವೆ. ಸುಮಾರು 25 ಸಾವಿರಕ್ಕೂ ಹೆಚ್ಚು ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಮನೆ ಮನೆಗೆ ತಲುಪಿಸಿದ್ದೇವೆ. ತಾಲೂಕಿನಲ್ಲಿ ಸುಮಾರು 164 ಕೋಟಿಗೂ ಹೆಚ್ಚು ಸಾಲ ಮನ್ನ ಆಗಿದೆ, ನಾನು ಬಡವರ ಪರ ಕೆಲಸ ಮಾಡುತ್ತಿದ್ದರೆ ಕೆಲವರು ನಮ್ಮ ಬ್ಯಾಂಕನ್ನು ಸೂಪರ್ ಸೀಡ್ ಮಾಡಲು ಯತ್ನಿಸಿದ್ದರು. ಆದರೆ ಇಂದು ಅವರೇ ಅಧಿಕಾರವು ಕಳೆದು ಜೀರೋ ಟ್ರಾಫಿಕು ಕಳೆದುಕೊಂಡು ಓಡಾಡುತ್ತಿದ್ದಾರೆ ಎಂದರು.
ನನ್ನ ಅಧಿಕಾರಾವದಿಯಲ್ಲಿ ಗೋಶಾಲೆಗಳನ್ನು ತೆರೆದು ಉಚಿತ ಮೇವು ನೀಡುವುದರ ಜೊತೆಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಈಗ ಮೇವು ವಿಚಾರವು ದೊಡ್ಡ ದಂದೆಯಾಗಿದ್ದು, ಕಳ್ಳ ಬಿಲ್ಲುಗಳ ಕಾಳಸಂತೆಯಾಗಿದೆ ಎಂದರು. ಜಿಲ್ಲೆಯಲ್ಲಿನ ನೀರಿನ ಸಮಸ್ಯೆ ಉಂಟಾಗಲು ದೇವೇಗೌಡರ ಕುಟುಂಬವೇ ಕಾರಣ ಇದಕ್ಕೆ ಲೋಕಸಭಾ ಚುನಾವಣೆಯಲ್ಲಿ ಉತ್ತಮ ತೀರ್ಪು ನೀಡಿದ್ದೀರ. ಮುಂದಿನ ದಿನಗಳಲ್ಲಿ ಮಧುಗಿರಿಯಲ್ಲಿ ಜಿಲ್ಲಾ ಕೇಂದ್ರವನ್ನಾಗಿಸಲು ಹಾಗೂ ತಾಲೂಕಿನ 54 ಕೆರೆಗಳಿಗೆ ನೀರು ತುಂಬಿಸಲು ನನಗೆ ಮತ್ತು ಸಂಸದರಿಗೆ ಸಹಕಾರ ನೀಡಬೇಕು ಎಂದರು.ಗ್ರಾಮೀಣ ಭಾಗದ ರೈತರ ಅನುಕೂಲಕ್ಕಾಗಿ ಪ್ರತಿ ಹೋಬಳಿಯಲ್ಲಿ ಡಿಸಿಸಿ ಬ್ಯಾಂಕ್ ತೆರೆಯಲಾಗುತ್ತಿದ್ದು, ನೂತನವಾಗಿ ಪ್ರಾರಂಭವಾಗುತ್ತಿರುವ ಬ್ಯಾಂಕ್ ನಿಮ್ಮೆಲ್ಲರ ಆಸ್ತಿ, ಇಲ್ಲಿ ಪ್ರತಿನಿತ್ಯದ ವ್ಯವಹಾರ ನಡೆಸುವುದರಿಂದ ನಿಮ್ಮ ಬ್ಯಾಂಕ್ ಅಭಿವೃದ್ಧಿ ಹೊಂದುತ್ತದೆ. ಬ್ಯಾಂಕಿನಲ್ಲಿ ಚಿನ್ನಾಭರಣಗಳ ಮೇಲೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದ ಅವರು ಗ್ರಾಮೀಣ ಮಕ್ಕಳಲ್ಲಿ ಉತ್ತಮ ಪ್ರತಿಭೆಯಿದ್ದು, ಅವರಿಗೆ ಉತ್ತಮ ವಿದ್ಯಾಭ್ಯಾಸ ನೀಡಿಸುವುದು ಪೋಷಕರ ಆದ್ಯ ಕರ್ತವ್ಯ ಎಂದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಹೆಚ್ಚು ಕೆಲಸ ಮಾಡುವವರನ್ನು ಜನ ಸೋಲಿಸುತ್ತಾರೆ, ಆದರೆ ಬೆಂಗಳೂರಿನಲ್ಲಿ ಕುಳಿತುಕೊಂಡು ಆಡಳಿತ ನಡೆಸುವವರನ್ನು ಗೆಲ್ಲಿಸುತ್ತಾರೆ ಇದು ನಮ್ಮ ದುರ್ವಿಧಿ. ಮಧುಗಿರಿ ತಾಲೂಕು ಸಹಕಾರ ಕ್ಷೇತ್ರದಲ್ಲಿ ತುಂಬಾ ಮುಂದುವರೆದಿದೆ. ತಾಲೂಕಿನಲ್ಲಿ ಈಗಾಗಲೇ ಸುಮಾರು 160 ಕೋಟಿಗೂ ಹೆಚ್ಚು ಸಾಲ ಮನ್ನ ವಾಗಿದೆ. ಇದಕ್ಕೆ ಮೂಲಕಾರಣ ಕೆಎರ್ ಇಂತಹ ಅಭಿವೃದ್ಧಿಯ ಹರಿಕಾರನನ್ನು ಸೋಲಿಸಿ ಕ್ಷೇತ್ರದ ಜನತೆಯ ದೊಡ್ಡ ತಪ್ಪು ಮಾಡಿದ್ದಿರಾ, ಮುಂದಿನ ಸಲವಾದರೂ ಇಂತಹ ತಪ್ಪನ್ನೂ ಮಾಡದೆ ಅವರ ಕೈ ಬಲಪಡಿಸಿ ಎಂದ ಅವರು, 25 ನದಿಗಳ ನೀರು ಸಮುದ್ರದ ಪಾಲಾಗುತ್ತಿದ್ದು, ಅಂತಹ ನೀರನ್ನು ನಮ್ಮ ಜಿಲ್ಲೆಗೆ ತರುವುದು ನಮ್ಮ ಆದ್ಯ ಕರ್ತವ್ಯ. ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವುದೇ ನನ್ನ ಮೊದಲ ಗುರಿ ಎಂದರು.