ತುಮಕೂರು :
ಪೋಷಕರು ವಿಜ್ಞಾನ ವಿಷಯವನ್ನು ಅಧ್ಯಯನ ಮಾಡಲು, ಕಲಿಯಲು ಮಕ್ಕಳಿಗೆ ವಿಶೇಷ ಪ್ರೋತ್ಸಾಹವನ್ನು, ಮಕ್ಕಳನ್ನು ಹುರಿದುಂಬಿಸುವ ಕೆಲಸವನ್ನು ಮಾಡುವಂತೆ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅವರು ಮನವಿ ಮಾಡಿದರು.
ತುಮಕೂರು ತಾಲ್ಲೂಕು ಬೆಳ್ಳಾವಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಮಕ್ಕಳ ವಿಜ್ಞಾನಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ ಕಲಿಕೆಗೆ ಇರುವ ಅವಕಾಶಗಳು, ಕಲಾ ವಿಷಯಗಳ ಕಲಿಕೆಯಲ್ಲಿ ಸಿಗುವುದಿಲ್ಲ, ವಿಜ್ಞಾನಕ್ಕೆ ದೇಶದಲ್ಲೆಡೆ ಮಾನ್ಯತೆ ಇದ್ದು, ಪೋಷಕರು ಮಕ್ಕಳಿಗೆ ವಿಜ್ಞಾನ ವಿಷಯ ಕಲಿಕೆಗೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ವಿಜ್ಞಾನ ಕಲಿಕೆಗೆ ಮುಂದಾಗುವುದು ಖಾಸಗಿ ಶಾಲೆಯ ಮಕ್ಕಳೇ, ಸರ್ಕಾರಿ ಶಾಲೆಯ ಮಕ್ಕಳಿಗೆ ವಿಜ್ಞಾನ ಕಲಿಕೆಯ ಸಾರ್ಮಥ್ಯವಿದ್ದರೂ, ಪೋಷಕರು ಪ್ರೋತ್ಸಾಹ ನೀಡುವುದಿಲ್ಲ, ಕಲಾ,ವಾಣಿಜ್ಯ ವಿಷಯಗಳನ್ನೇ ಸರ್ಕಾರಿ ಶಾಲೆಯ ಮಕ್ಕಳು ಆಯ್ಕೆ ಮಾಡಿಕೊಳ್ಳುತ್ತಾರೆ, ಸರ್ಕಾರಿ ಶಾಲೆಯ ಮಕ್ಕಳಿಗೆ ಸರಿಯಾದ ಪ್ರೋತ್ಸಾಹ ನೀಡಿದರೆ ವಿಜ್ಞಾನ ವಿಷಯದಲ್ಲಿ ಉತ್ತಮ ಸಾಧನೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.
ಮಕ್ಕಳ ವಿಜ್ಞಾನ ಹಬ್ಬದಂತಹ ಜಿಲ್ಲಾ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸ ಬೇಕಾದರೆ, ಅಧಿಕಾರಿಗಳು ಕಾಳಜಿವಹಿಸಬೇಕು, ಬೇರೆ ತಾಲ್ಲೂಕುಗಳಿಂದ ಆಗಮಿಸುವ ಮಕ್ಕಳಿಗೆ ಅಗತ್ಯ ಸೌಲಭ್ಯವನ್ನು ದೊರಕಿಸುವ ನಿಟ್ಟಿನಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದ ಅವರು, ಸರ್ಕಾರಿ ಅನುದಾನದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಆಗುತ್ತದೆಯೇ? ಅಧಿಕಾರಿಗಳು ಎಲ್ಲರ ಸಹಕಾರವನ್ನು ಪಡೆದು ಇಂತಹ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.
ಈ ಮಕ್ಕಳ ವಿಜ್ಞಾನಹಬ್ಬದ ಭಾಗವಹಿಸಿರುವ ಎಲ್ಲ ಮಕ್ಕಳಿಗೂ ಹಾಗೂ ಬೇರೆ ತಾಲ್ಲೂಕುಗಳಿಂದ ಆಗಮಿಸಿರುವ ಎಲ್ಲ ಪೋಷಕರಿಗೂ ಅಗತ್ಯವಾದ ವಸತಿ ಹಾಗೂ ಊಟದ ಸೌಲಭ್ಯವನ್ನು ವೈಯಕ್ತಿಕವಾಗಿ ಭರಿಸುವುದಾಗಿ ಹೇಳಿದ ಅವರು, ಮಕ್ಕಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ವೈಯಕ್ತಿಕವಾಗಿ ಅಗತ್ಯ ಸಹಕಾರವನ್ನು ನೀಡುವುದಾಗಿ ತಿಳಿಸಿದರು.
ನಮ್ಮ ತಾಲ್ಲೂಕಿನ ಸರ್ಕಾರಿ ಶಾಲೆಯ ಮಕ್ಕಳಲ್ಲಿಯೂ ಪ್ರತಿಭೆ ಹಾಗೂ ಖಾಸಗಿ ಶಾಲೆಯ ಮಕ್ಕಳನ್ನು ಮೀರಿ ಸಾಧಿಸುವ ಶಕ್ತಿ ಇದೆ ಎಂಬುದನ್ನು ತೋರಿಸಬೇಕು, ಈ ನಿಟ್ಟಿನಲ್ಲಿ ಮಕ್ಕಳಿಗೆ ಸೌಲಭ್ಯವನ್ನು ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ ಅವರು, ಬೆಳ್ಳಾವಿಯ ಸರ್ಕಾರಿ ಇಂಗ್ಲೀಷ್ ಮಾಧ್ಯಮದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಬೋಧಿಸುತ್ತಿರುವ ಶಿಕ್ಷಕರ ವೇತನಕ್ಕಾಗಿ ವೈಯಕ್ತಿಕ 10 ಲಕ್ಷ ರೂ ನೀಡುವುದಾಗಿ ಹೇಳಿದ್ದೇ, ಅದರಂತೆ ಹಣವನ್ನು ನೀಡಿದ್ದೇನೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ನಮ್ಮ ತಾಲ್ಲೂಕಿನಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುವ ಮುನ್ನಾ ಶಾಸಕರೊಂದಿಗೆ ಚರ್ಚಿಸಿದರೆ, ಅದ್ದೂರಿಯಾಗಿ ಕಾರ್ಯಕ್ರಮವನ್ನು ರೂಪಿಸಬಹುದು, ನಮ್ಮ ತಾಲ್ಲೂಕಿಗೆ ಬರುವವರಿಗೆ ಉತ್ತಮ ಆತಿಥ್ಯವನ್ನು ನೀಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂಬುದನ್ನು ಅಧಿಕಾರಿಗಳು ಅರಿಯಬೇಕು ಎಂದ ಅವರು, ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಉತ್ತಮ ಕೋಚಿಂಗ್ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದರು.
ಒಂದು ವರ್ಷದ ವೇತನ: ಬೆಳ್ಳಾವಿ ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡುಗೆ ಸಹಾಯಕರು, ಶಾಸಕ ಗೌರಿಶಂಕರ್ ಅವರಿಗೆ ಕಡಿಮೆ ವೇತನ ನೀಡುತ್ತಿರುವ ಬಗ್ಗೆ ಮನವಿ ಮಾಡಿದಾಗ, ವೈಯಕ್ತಿಕವಾಗಿ 6 ಮಂದಿ ಅಡುಗೆ ಸಹಾಯಕರಿಗೆ ತಲಾ 500ರೂಗಳಂತೆ ಒಂದು ವರ್ಷದ ವೇತನವನ್ನು ನೀಡಿದರು.
ಕೆರೆಗಳಿಗೆ ಎತ್ತಿನಹೊಳೆ ನೀರು: ತುಮಕೂರು ತಾಲ್ಲೂಕು ಬೆಳ್ಳಾವಿ ಹೋಬಳಿಯಲ್ಲಿ ಬರುವ ಬೆಳ್ಳಾವಿ, ದೊಡ್ಡವೀರನಹಳ್ಳಿ, ದೊಡ್ಡೇರಿ, ಪಿ.ಗೊಲ್ಲಹಳ್ಳಿ, ಚೆನ್ನನಹಳ್ಳಿ, ಸೊರೇಕುಂಟೆ ಕೆರೆಗಳಿಗೆ 95.06ಎಫ್ಸಿಎಫ್ಟಿ ನೀರನ್ನು ಗುರುತ್ವಾಕರ್ಷಣೆಯಿಂದ ಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದು, ಎತ್ತಿನಹೊಳೆಯಿಂದಲೂ ಈ ಭಾಗದ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಡಿಡಿಪಿಐ ಕಾಮಾಕ್ಷಮ್ಮ, ಬಿಇಒ ರಂಗಧಾಮಯ್ಯ, ಮುಖಂಡರಾದ ಹಿರೇಹಳ್ಳಿ ಮಹೇಶ್, ಹನುಮಾನಾಯಕ್, ರಾಜು, ಡಾ.ರಾಧಾಕೃಷ್ಣ, ಜಗದೀಶ್, ಗಂಗಹನುಮಯ್ಯ, ಮೆಹಬೂಬ್ಪಾಷ, ಶಿವಣ್ಣ ಸೇರಿದಂತೆ ಇತರರಿದ್ದರು.