ತುಮಕೂರು :
ನಗರದ ಬುದ್ದಿಜೀವಿಗಳು, ಪ್ರಜ್ಞಾವಂತರು ಹಾಗೂ ನಾಗರಿಕರ ಒತ್ತಾಸೆಯಂತೆ ರಾಜ್ಯ ಸರ್ಕಾರ ಮಹಾನಗರ ಪಾಲಿಕೆಯ ಆಯುಕ್ತರನ್ನಾಗಿ ದಕ್ಷ ಐಎಎಸ್ ಅಧಿಕಾರಿ ಟಿ. ಭೂಬಾಲನ್ ಅವರನ್ನು ಮತ್ತೆ ವರ್ಗಾವಣೆ ಮಾಡಿದ್ದು, ಇಂದು ಬೆಳಿಗ್ಗೆ ಭೂಬಾಲನ್ ಅವರು ಪಾಲಿಕೆಯ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು ಪಾಲಿಕೆ ಆಯುಕ್ತರಾಗಿ ಜನವರಿಯಿಂದ ಅವಕಾಶ ದೊರೆತಿದ್ದು, ಮಧ್ಯೆದಲ್ಲಿ ಚುನಾವಣೆ ನಿಮಿತ್ತ ಸರ್ಕಾರ ಗೋಕಾಕ್‍ಗೆ ವರ್ಗಾವಣೆ ಮಾಡಿತ್ತು. ನಾನು ಅಲ್ಲಿಗೆ ಹೋಗಿ ಯಶಸ್ವಿಯಾಗಿ ಚುನಾವಣೆ ನಡೆಸಿದ್ದೇನೆ. ಮತ್ತೆ ಸರ್ಕಾರ ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾಗಿ ನಿಯೋಜಿಸಿದೆ. ಹಾಗಾಗಿ ಚುನಾವಣಾ ಆಯೋಗ ಮತ್ತು ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು.
ಈ ಹಿಂದೆ ಕೈಗೊಂಡಿದ್ದ ಅಭಿವೃದ್ಧಿಗಳನ್ನು ಮುಂದುವರೆಸಲು ನಾನು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ.
ನಾನು ಇಲ್ಲಿಗೆ ಮತ್ತೆ ಆಯುಕ್ತರಾಗಿ ಬರಲು ಸಹಕರಿಸಿದ ಸಚಿವರು, ಶಾಸಕರು, ಎಲ್ಲ ಜನಪ್ರತಿನಿಧಿಗಳು ಹಾಗೂ ಪಾಲಿಕೆಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಪಾಲಿಕೆಯಲ್ಲಿ ಮತ್ತಷ್ಟು ಉತ್ತಮವಾಗಿ ಕೆಲಸ ಮಾಡಲು ಎಲ್ಲರೂ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ನಗರದ ಸ್ವಚ್ಚತೆ, ತೆರಿಗೆ ಸಂಗ್ರಹ ಕಾರ್ಯಗಳಿಗೆ ಜನಸಾಮಾನ್ಯರು ತಮಗೆ ಸಹಕಾರ ನೀಡಬೇಕು ಎಂದು ಅವರು ಹೇಳಿದರು.
ಟಿ. ಭೂಬಾಲನ್ ಅವರು ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಕೆಲ ಸಂಘಟನೆಗಳು ಕಾರ್ಯಕರ್ತರು ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದರು.
ಹಾಗೆಯೇ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪಾಲಿಕೆ ಸದಸ್ಯರುಗಳು ಸಹ ಆಯುಕ್ತರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಜನಸ್ನೇಹಿ ಅಧಿಕಾರಿ ಎಂದು ಭೂಬಾಲನ್ ನಗರದ ನಾಗರಿಕರಿಂದ ಪ್ರಶಂಸೆಗೆ ಒಳಗಾಗಿದ್ದಾರೆ. ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಹೆಚ್ಚುವರಿ ಹೊಣೆಗಾರಿಕೆ ವಹಿಸಿಕೊಂಡಿದ್ದರು.
ಈ ಹಿಂದೆ ಆಯುಕ್ತರಾಗಿದ್ದಾಗ ನಗರದ ಅಭಿವೃದ್ಧಿಗೆ ಅವರು ಕೈಗೊಂಡಿದ್ದ ದಿಟ್ಟ ಕ್ರಮಗಳು ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆಗೆ ಒಳಗಾಗಿದ್ದವು.
ಸೆಪ್ಟೆಂಬರ್ 22 ರಂದು ರಾಜ್ಯ ಸರ್ಕಾರ ಹಠಾತ್ತನೆ ಇವರನ್ನು ಬೆಳಗಾವಿಯ ಮಲಪ್ರಭ-ಘಟಪ್ರಭ ಯೋಜನೆಯ ವಿಶೇಷ ಜಿಲ್ಲಾಧಿಕಾರಿಗಳನ್ನಾಗಿ (ಭೂಸ್ವಾಧೀನ) ವರ್ಗಾಯಿಸಿತು. ತಕ್ಷಣವೇ ಇವರು ಆ ಹುದ್ದೆ ಸ್ವೀಕರಿಸಿದರು.
ಈ ವಿಷಯ ಕಾಡ್ಗಿಚ್ಚಿನಂತೆ ಹರಡಿ ಸಾರ್ವಜನಿಕರಿಂದ ಭಾರಿ ಪ್ರತಿರೋಧ ವ್ಯಕ್ತವಾಗಿತ್ತು.
ಸಾಮಾಜಿಕ ಜಾಲತಾಣಗಳಲ್ಲಂತೂ ಜನರು ಸರ್ಕಾರವನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು. ತುಮಕೂರು ಶಾಸಕರು ಮತ್ತು ಸಂಸದರು ಇದರಿಂದ ತೀವ್ರ ಮುಜುಗರಕ್ಕೊಳಗಾಗಿದ್ದರು.