ತುಮಕೂರು :
ಖಾಸಗಿ ಶಾಲಾ ವಾಹನಗಳಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಕೊಂಡೊಯ್ಯುವುದು, ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ತಿಳಿಸಲು ಅನುಕೂಲವಾಗುವಂತೆ ಡಿಡಿಪಿಐ ಕಚೇರಿಯಲ್ಲಿ ಸಹಾಯವಾಣಿಯನ್ನು ಸ್ಥಾಪಿಸಬೇಕೆಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿಂದು ಹಮ್ಮಿಕೊಂಡಿದ್ದ ಶಾಲಾ ವಾಹನಗಳಲ್ಲಿ ಮಕ್ಕಳ ಸುರಕ್ಷತೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರಕು ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುವುದು ಕಡ್ಡಾಯವಾಗಿ ನಿಷೇಧಿಸಲಾಗಿದೆ ಆದರೂ ಗ್ರಾಮೀಣ ಭಾಗಗಳಲ್ಲಿ ಇದನ್ನು ಕಾಣುತ್ತಿದ್ದೇವೆ ಹಾಗೂ ಒಂದೇ ವಾಹನದಲ್ಲಿ ಹೆಚ್ಚು ಸಂಖ್ಯೆಯ ಮಕ್ಕಳನ್ನು ಕರೆದೊಯ್ಯವಂತಹ ಚಟುವಟಿಕೆಗಳು ಕಂಡು ಬಂದಲ್ಲಿ ಈ ದೂರುಗಳನ್ನು ದಾಖಲಿಸಿಕೊಳ್ಳಲು ಸಹಾಯವಾಣಿಯನ್ನು ಸ್ಥಾಪಿಸಬೇಕು ಎಂದರು.
ಈ ದೂರುಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಶಾಲೆಯ ಹಾಗೂ ವಾಹನಗಳ ವಿರುದ್ದ ಅಗತ್ಯ ಕ್ರಮ ವಹಿಸಬೇಕು ಹಾಗೂ ಈ ಕುರಿತಂತೆ ಜಾಗೃತಿ ಮೂಡಿಸಲು ಆಟೋ ಚಾಲಕರ ಸಂಘ, ಸರಕು ವಾಹನಗಳ ಚಾಲಕರ ಸಂಘ ಹಾಗೂ ಖಾಸಗಿ ಶಾಲೆಯವರನ್ನು ಆಗಾಗ ಸಭೆ ಕರೆದು ತಿಳುವಳಿಕೆ ನೀಡಬೇಕು ಎಂದು ಬಿಇಒ ಗಳಿಗೆ ಸೂಚನೆ ನೀಡಿದರು.
ಶಿಕ್ಷಣ ಸಂಸ್ಥೆಗಳೆಂದರೆ ಲಾಭದಾಯಕವಾಗಿ ನಡೆಸುವುದಲ್ಲ. ಜಿಲ್ಲೆಯಲ್ಲಿರುವ 251 ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚು ದಾಖಲಾತಿ ಇರುವ ಶಾಲೆಗಳಲ್ಲಿ ಶುಲ್ಕ ಹಾಗೂ ವಿವಿಧ ಮೂಲಭೂತ ಸೌಕರ್ಯಗಳಾದ ನೀರು, ಶೌಚಾಲಯ, ಆರೋಗ್ಯ ತಪಾಸಣೆ, ವಿಪತ್ತು ನಿರ್ವಹಣೆ, ಸಿಸಿ ಕ್ಯಾಮೆರಾ ಅಳವಡಿಕೆ ಕುರಿತಂತೆ ವಿವರವಾದ ಆಡಿಟ್ ಮಾಡಿಸಿ ವರದಿಯನ್ನು ನೀಡಬೇಕೆಂದು ಅವರು ತಿಳಿಸಿದರು. ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಸಾಮೂಹಿಕವಾಗಿ ನೀಡುವ ತಿಂಡಿತಿನಿಸು ಅಥವಾ ಊಟವನ್ನು ಪ್ರಾಂಶುಪಾಲರು ಅಥವಾ ಶಿಕ್ಷಕರು ಮೊದಲು ಸೇವಿಸಿ ಪರಿಶೀಲಿಸಿ ಸಮಸ್ಯೆ ಇಲ್ಲವೆಂದು ದೃಢೀಕರಿಸಿದ ನಂತರ ಮಕ್ಕಳಿಗೆ ನೀಡಬೇಕು. ಹಾಗೆಯೇ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ನೀಡುವ ಊಟವನ್ನು ರುಚಿ ಮತ್ತು ಶುಚಿ ಪರಿಶೀಲಿಸಿ ನೀಡಬೇಕೆಂಬ ಸುತ್ತೊಲೆಯ ಕುರಿತು ಆಗಾಗ ಮುಖ್ಯ ಶಿಕ್ಷಕರ ಗಮನಕ್ಕೆ ತರಬೇಕು ಎಂದು ಅವರು ತಿಳಿಸಿದರು.
ಸರ್ಕಾರಿ ಶಾಲೆಗಳಲ್ಲಿ ಶುದ್ದ ಕುಡಿಯುವ ನೀರು, ಶೌಚಾಲಯ, ಸುತ್ತಮುತ್ತಲ ಪರಿಸರ ಸ್ವಚ್ಛವಾಗಿಲ್ಲದ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಗ್ರಾಮಪಂಚಾಯ್ತಿಗಳಿಗೆ ಕೂಡಲೆ ತಿಳಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
ಶಾಲೆಗಳಲ್ಲಿ ಮಕ್ಕಳಿಗೆ ಸ್ಪೂರ್ತಿ ತುಂಬಲು ವಿವಿಧ ಇಲಾಖೆಗಳಲ್ಲಿ ವೃತ್ತಿಯಲ್ಲಿರುವ ವಿವಿಧ ಅಧಿಕಾರಿಗಳನ್ನು ವಾರಕ್ಕೊಮ್ಮೆ ಶಾಲೆಗೆ ಕರೆಸಿ ಅವರ ವೃತ್ತಿಯ ಕುರಿತಂತೆ ತಿಳಿಸುವಂತಹ ವ್ಯವಸ್ಥೆ ಮಾಡಿದಲ್ಲಿ ಮಕ್ಕಳಿಗೆ ವಿವಿಧ ವೃತ್ತಿಯ ಬಗ್ಗೆ ಪರಿಚಯವಾಗುವುದು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರಂಗಧಾಮಪ್ಪ, ಅಶ್ವಥನಾರಾಯಣ, ಪ್ರಭುಸ್ವಾಮಿ, ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಬಿಇಒಗಳು, ಪ್ರಾದೇಶಿಕ ಸಾರಿಗೆ ಕಚೇರಿಯ ಅಧೀಕ್ಷಕ ದೇವರಾಜು, ನೋಡಲ್ ಅಧಿಕಾರಿಗಳು ಸೇರಿದಂತೆ ಶಿಕ್ಷಣ ಇಲಾಖೆಯ ಪದಾಧಿಕಾರಿಗಳು ಹಾಜರಿದ್ದರು.