ತುಮಕೂರು :
ಕೇಂದ್ರ ಸರ್ಕಾರದ ಸಿಎಎ ಮತ್ತು ಎನ್‍ಆರ್‍ಸಿ ಕಾಯ್ದೆಗಳನ್ನು ವಿರೋಧಿಸಿ ಪ್ರಗತಿಪರ ನಾಗರಿಕ ಸಂಘಟನೆಗಳ ಒಕ್ಕೂಟದಿಂದ ಇಂದು ಹಮ್ಮಿಕೊಂಡಿದ್ದ ಪ್ರತಿಭಟನೆ ನಡೆಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರೊಂದಿಗೆ ವಾಗ್ವಾದ ಮಾತಿನ ಚಕಮಕಿ ನಡೆಯಿತು.
ಪ್ರತಿಭಟನೆ ಸಜ್ಜಾಗಿದ್ದ ಮುಖಂಡರನ್ನು ಸುತ್ತುವರಿದ ನೂರಾರು ಪೊಲೀಸರು ನಿಷೇಧಾಜ್ಞೆ ಜಾರಿಯಲ್ಲಿದೆ. ಹೀಗಾಗಿ ಪ್ರತಿಭಟನೆ ಅವಕಾಶ ನೀಡುವುದಿಲ್ಲ ಎಂದರು. ಇದಕ್ಕೆ ಪ್ರಗತಿಪರ ನಾಗರಿಕ ಸಂಘಟನೆಗಳ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆಗ ಪೊಲೀಸರಿಗೂ-ಮುಖಂಡರ ನಡುವೆ ವಾಗ್ವಾದ ನಡೆಯಿತು.
ನಾಯಕರನ್ನು ಪೊಲೀಸರು ಸುತ್ತುವರಿಯುತ್ತಿದ್ದಂತೆಯೇ ಅಲ್ಲಲ್ಲಿ ಚದುರಿದಂತಿದ್ದ ಪ್ರತಿಭಟನಾಕಾರರು ಪೊಲೀಸರತ್ತ ಧಾವಿಸಿದರು. ಆಗ ಮೈಕ್ ಮೂಲಕ 144 ನಿಷೇಧಾಜ್ಞೆ ಜಾರಿಯಲ್ಲಿದೆ. ಗುಂಪು ಸೇರಬಾರದು ಎಂದು ಪ್ರತಿಭಟನಾಕಾರರನ್ನು ಪೊಲೀಸರು ಚದುರಿಸಿ ಕಳಿಸಿದರು.
ಬಳಿಕ ಪೊಲೀಸರು ಪಿಯುಸಿಎಲ್ ಜಿಲ್ಲಾಧ್ಯಕ್ಷ ಕೆ.ದೊರೈರಾಜ್, ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್. ರಾಮಯ್ಯ, ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಸ್ಲಂ ಜನಾಂದೋಲ ಸಂಚಾಲಕ ಎ.ನರಸಿಂಹಮೂರ್ತಿ, ಸಾಮಾಜಿಕ ಕಾರ್ಯಕರ್ತರಾದ ತಾಜುದ್ದೀನ್, ಅತೀಕ್ ಅಹಮದ್, ಸೈಯದ್ ಮುಜಪೀರ್, ಕರ್ನಾಟಕ ಪ್ರಾಂತ ಸಂಘದ ಸಹಸಂಚಾಲಕ ಬಿ.ಉಮೇಶ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಅವರನ್ನು ಪೊಲೀಸರು ಮಾತುಕತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಕರೆದೊಯ್ದರು.
ಎಎಸ್‍ಪಿ ನೇತೃತ್ವದಲ್ಲಿ ಮಾತುಕತೆ ನಡೆಯಿತು. ಪ್ರತಿಭಟಟನೆ ನಮ್ಮ ಹಕ್ಕು ಅದನ್ನು ಹತ್ತಿಕ್ಕುವುದು ಸರಿಯಲ್ಲ. ಸಂವಿಧಾನಬದ್ದವಾಗಿರುವ ಪ್ರತಿಭಟನೆಯ ಹಕ್ಕನ್ನು ನಿಷೇಧಾಜ್ಞೆ ಜಾರಿಗೊಳಿಸಿ ಬೆದರಿಸಿರುವುದು ಖಂಡನೀಯ. ಪ್ರತಿಭಟನೆ ನಡೆಸಲು ನಮಗೆ ಅವಕಾಶ ನೀಡಬೇಕು ಎಂದು ನಾಯಕರು ಪಟ್ಟುಹಿಡಿದರು. ನಂತರ ಅಪರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸಿ ಅಂಗೀಕರಿಸಿ ಕಾಯ್ದೆಯನ್ನಾಗಿ ಜಾರಿಗೆ ತರಲು ಹೊರಟಿದೆ. ಸಿಎಎ-2019 ಕಾಯ್ದೆಯಂತೆ ಆಫ್ಘಾನಿಸ್ತಾನ, ಪಾಕಿಸ್ಥಾನ ಮತ್ತು ಬಾಂಗ್ಲಾದೇಶ ದಿಂದ ಬಂದಿರುವ ಅಲ್ಪಸಂಖ್ಯಾತರಾದ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯದವರು ಡಿಸೆಂಬರ್ 31, 2014ರ ಮೊದಲು ಭಾರತಕ್ಕೆ ಬಂದು ಕೇವಲ ಐದು ವರ್ಷ ನೆಲೆಸಿದ್ದರೆ ಅವರನ್ನು ಅಕ್ರಮ ವಲಸಿಗರೆಂದು ಪರಿಗಣಿಸದೆ ಪೌರತ್ವ ನೀಡಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಆದಿವಾಸಿಗಳು, ದಲಿತರು, ಬಡವರು, ನಿರಾಶ್ರಿತರು, ದೊಡ್ಡ ಯೋಜನೆಗಳಿಂದ ಸ್ಥಳಾಂತರಗೊಂಡವರು, ವಲಸೆ ಕಾರ್ಮಿಕರು, ಅಲೆಮಾರಿ ಬುಡಕಟ್ಟು ಸಮುದಾಯಗಳು, ಕಳ್ಳಸಾಗಾಣಿಕೆಯಾದವರು, ಮದುವೆ ನಂತರ ಗಂಡನ ಮನೆಗೆ ಹೋದ ಮಹಿಳೆಯರು ಸೇರಿದಂತೆ ಇವರೆಲ್ಲರೂ ಎನ್.ಆರ್.ಸಿ. ಪೌರತ್ವದ ಆಧಾರಕ್ಕಾಗಿ ಬೇಕಾಗುವ 50 ವರ್ಷಗಳ ದಾಖಲೆಗಳನ್ನು ಪಡೆಯುವುದು ಕಷ್ಟಸಾಧ್ಯವೇ ಸರಿ. ಅಷ್ಟೇ ಅಲ್ಲ ಶ್ರೀಲಂಕಾ ತಮಿಳರು, ಮ್ಯಾನ್ಮಾರಿನ ರೊಹಿಂಗ್ಯಾ ಸಮುದಾಯ, ಚೀನದಿಂದ ಬಂದಿರುವ ಬೌದ್ಧರು, ಬಾಂಗ್ಲಾದೇಶದ ಜಾತ್ಯತೀತ ವಿಚಾರವಾದಿಗಳು, ಪಾಕಿಸ್ತಾನದ ಆಹ್ಮದಿಯಾ ಸಮುದಾಯ ಮತ್ತು ಎಲ್ಲಾ ದೇಶಗಳ ಜಾತ್ಯತೀತರನ್ನು ಈ ಕಾಯ್ದೆಯಿಂದ ಹೊರಗಿಡಲಾಗಿದೆ. ಕೇಂದ್ರ ಸರ್ಕಾರದ ಈ ಕ್ರಮ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಸಂವಿಧಾನ ಆರ್ಟಿಕಲ್ 14 ಮತ್ತು 21ರ ಪ್ರಕಾರ ಸಮಾನತೆ ಮತ್ತು ಬದುಕುವ ಹಕ್ಕನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಆದರೆ ಈಗ ಜಾರಿಗೊಳ್ಳುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‍ಆರ್‍ಸಿ ಕಾಯ್ದೆ ಮೂಲಭೂತ ಹಕ್ಕುಗಳು, ನೈಸರ್ಗಿಕ ಹಕ್ಕುಗಳು ಮತ್ತು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ.
ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿರುವಂತೆ ಭಾರತ ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ದೇಶವೆಂದು ಘೋಷಿಸಲಾಗಿದೆ. ಸಿಎಎ ಮತ್ತು ಎನ್.ಆರ್.ಸಿ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿರುವ ಆಶಯಗಳಿಗೆ ಧಕ್ಕೆಯುಂಟು ಮಾಡುತ್ತದೆ. ಭಾರತೀಯರ ನಂಬಿರುವ ‘ವಸುದೈವಂ ಕುಟುಂಬಕಂ’ ಮತ್ತು ‘ಸರ್ವೇಜನೋ ಸುಖಿನೋಭವಂತು’ ‘ಮಾನವ ಕುಲಂ ತಾನೊಂದೇ ವಲಂ’ ‘ಸರ್ವಜನಾಂಗದ ಶಾಂತಿಯ ತೋಟ’ ‘ಧಾರ್ಮಿಕ ಸಹಿಷ್ಣತೆ’, ‘ಭ್ರಾತೃತ್ವ’ ‘ಸೋದರತೆ ತತ್ವಗಳು ಮಾನವೀಯತೆಯನ್ನೇ ಸಾರುತ್ತವೆ. ಹಿಂದೂ, ಮುಸ್ಲೀಂ, ಕ್ರಿಶ್ಛಿಯನ್, ಬೌದ್ದ ಸಿಖ್, ಪಾರ್ಸಿ, ಜೈನ ಸೇರಿದಂತೆ ಹಲವು ಧರ್ಮಗಳ ಜನರು ಪರಸ್ಪರ ಯಾರಿಗೂ ತೊಂದರೆಯಾಗದಂತೆ ಸೋದದರಂತೆ ಜೀವಿಸುತ್ತಾ ಬಂದಿದ್ದಾರೆ. ಇಂತಹ ವೈವಿಧ್ಯಮಯ ಭಾಷೆ, ಧರ್ಮ, ಆಚಾರ-ವಿಚಾರಗಳ ಪರಂಪರೆಯನ್ನು ಹೊಂದಿರುವ ಭಾರತ ದೇಶದಲ್ಲಿ ಎಲ್ಲರೂ ನೋವು ಸಂಕಟಪಡುವಂತಹ ಘಟನೆಗಳು ನಡೆಯುತ್ತಿದ್ದು ಸಿಎಎ ಮತ್ತು ಎನ್‍ಆರ್‍ಸಿ ಜಾರಿಯಿಂದ ಜನತೆ ಘಾಸಿಗೊಂಡಿದೆ. ಜಾತಿ, ಧರ್ಮ, ಲಿಂಗ, ಜನ್ಮಸ್ಥಳ, ವರ್ಣದ ಆಧಾರದ ಮೇಲೆ ತಾರತಮ್ಯ ಮಾಡಬಾರದೆಂಬುದು ಸಂವಿಧಾನ ಸಮಗೆ ಒದಗಿಸಿಕೊಟ್ಟಿರುವ ಮೂಲಭೂತ ಹಕ್ಕು. ಆದರೆ ಈಗಿನ ಸಿಎಎ ಮತ್ತು ಎನ್.ಆರ್‍ಸಿ ಧರ್ಮದ ಆಧಾರದ ಮೇಲೆ ರಚಿತವಾಗಿದ್ದು ಜನರ ನೆಮ್ಮದಿಗೆ ಭಂಗ ತಂದಿದೆ. ಈಗಾಗಲೇ ಅಸ್ಸಾಂನಲ್ಲಿ ಎನ್‍ಆರ್‍ಸಿ ಯಿಂದ 19 ಲಕ್ಷ ಮಂದಿ ಪೌರತ್ವದಿಂದ ವಂಚಿತರಾಗಿದ್ದಾರೆ. ಅವರಲ್ಲಿ 12 ಲಕ್ಷ ಮಂದಿ ಹಿಂದೂಗಳು ಸೇರಿದ್ದಾರೆ. ಇದೇ ದೇಶದಲ್ಲಿ ಹುಟ್ಟಿ ಬೆಳೆದು ಮರಣದ ಸಮೀಪದಲ್ಲಿರುವ ಜನರು ಪೌರತ್ವವನ್ನು ಸಾಬೀತುಪಡಿಸಲು ದಾಖಲೆಗಳಿಗಾಗಿ ಕಚೇರಿಗಳಿಗೆ ಅಲೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದೆಯೂ ಇದೇ ಪರಿಸ್ಥಿತಿ ದೇಶಾದ್ಯಂತ ಉದ್ಭವವಾಗಲಿದೆ. ಈ ಹಿನ್ನೆಲೆಯಲ್ಲಿ ಸಿಎಎ ಮತ್ತು ಎನ್‍ಆರ್‍ಎ ಕಾಯ್ದೆ ಜಾರಿಗೊಳಿಸಬಾರದೆಂದು ತಮ್ಮಲ್ಲಿ ಮನವಿ ಮಾಡುತ್ತೇವೆ ಎಂದರು.