ತುಮಕೂರು :
ತಾತ್ಕಾಲಿಕ ಬಸ್ ನಿಲ್ದಾಣದ ಕಾಮಗಾರಿ ಕೊನೆಯ ಹಂತದಲ್ಲಿದ್ದು ಶೀಘ್ರದಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸ್ಥಳಾಂತರಿಸಲಾಗುವುದು ಎಂದು ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ತಿಳಿಸಿದರು.
ತಾತ್ಕಾಲಿಕ ಬಸ್ ನಿಲ್ದಾಣದ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಕೆಎಸ್ಆರ್ಟಿಸಿ ಬಸ್ ನಿಲ್ದಾಣವನ್ನು ಸಂಪೂರ್ಣವಾಗಿ ತೆರವುಗೊಳಿಸಿ 5 ಮಹಡಿಗಳುಳ್ಳ ಇಂಟಿಗ್ರೇಟೆಡ್ ಬಸ್ ನಿಲ್ದಾಣ ಮಾಡಲಾಗುವುದು. ನೂತನ ಸ್ಮಾರ್ಟ್ ಬಸ್ ನಿಲ್ದಾಣವಾಗುವವರೆಗೂ ಪರ್ಯಾಯವಾಗಿ ಕೆಎಸ್ಆರ್ಟಿಸಿ ಡಿಪೋದಲ್ಲಿ ತಾತ್ಕಾಲಿಕ ಬಸ್ನಿಲ್ದಾಣ ಮಾಡಲು ಕಾಮಗಾರಿ ನಡೆಸುತ್ತಿದ್ದು, ಸದರಿ ಕಾಮಗಾರಿ ಕೊನೆಯ ಹಂತದಲ್ಲಿದೆ ಎಂದರು.
ತಾತ್ಕಾಲಿಕ ಬಸ್ ನಿಲ್ದಾಣ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕಿಂತ ಕಡಿಮೆ ಸ್ಥಳಾವಕಾಶ ಹೊಂದಿದ್ದು, ಸಾರ್ವಜನಿಕರು ಸ್ಮಾರ್ಟ್ ಬಸ್ ನಿಲ್ದಾಣವಾಗುವರೆಗೂ ಸಹಕರಿಸಬೇಕು ಎಂದರಲ್ಲದೇ ಅಧಿಕಾರಿಗಳು ಮತ್ತು ಸ್ಮಾರ್ಟ್ ಸಿಟಿಯವರ ಸಹಕಾರದಲ್ಲಿ ಕಾಮಗಾರಿಗಳು ತುರ್ತಾಗಿ ನಡೆಯುತ್ತಿದೆ. ಬಸ್ಗಳ ಸಂಚಾರ ಮಾರ್ಗದ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಮಾರ್ಗದರ್ಶನ ನೀಡಿದ್ದಾರೆ ಎಂದು ಅವರು ಹೇಳಿದರು.
ನಗರದ ಕೆಎಸ್ಆರ್ಟಿಸಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರ ಕುಮಾರ್ ಮಾತನಾಡಿ, ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ಸುಮಾರು 400-500 ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಡಿಟಿಓ ಫಕ್ರುದ್ದೀನ್, ಕೆಸ್ಆರ್ಟಿಸಿ ಅಧಿಕಾರಿಗಳು, ಗುತ್ತಿಗೆದಾರರು ಸೇರಿದಂತೆ ಮತ್ತಿತರರು ಹಾಜರಿದ್ದರು.