ತುರುವೇಕೆರೆ :
ತಾಲೂಕು ಮಾವಿನಹಳ್ಳಿ ಅಂಗನವಾಡಿ ಕಾರ್ಯಕರ್ತೆ ಪದ್ಮ ಅವರ ಮೇಲೆ ಪ್ರಕಾಶ್ ಮತ್ತು ಗ್ರಾಮ ಪಂಚಾಯಿತಿ ಸದಸ್ಯ ದೇವರಾಜ್ ಸೇರಿದಂತೆ ಗುಂಪೊಂದು ತೀವ್ರ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಕಾರ್ಯಕರ್ತೆ ಪದ್ಮ ಅವರನ್ನು ಅವರ ತೋಟದ ಮನೆಯಲ್ಲಿ ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಪದ್ಮಾ ಅವರ ಕೈಬೆರಳು ಕತ್ತರಿಸಿ ಹೋಗಿವೆ. ತೀವ್ರ ಗಾಯಗೊಂಡಿರುವ ಪದ್ಮಾ ಅವರನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಂಗನವಾಡಿ ಕಾರ್ಯಕರ್ತೆ ಪದ್ಮಾ ಅವರು ಮಾವಿನಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಪಕ್ಕದ ಮಾಲೆ ಗ್ರಾಮದ ಪ್ರಕಾಶ್ ಮತ್ತು ಪತ್ನಿಯ ನಡುವೆ ನಡೆದ ಜಗಳದಲ್ಲಿ ಪದ್ಮಾ ಕೌನ್ಸಿಲಿಂಗ್ ನಡೆಸಿದ್ದರು. ಈ ಸಂಬಂಧ ಪ್ರಕಾಶ್ ಕೌನ್ಸಿಲಿಂಗ್‍ನಲ್ಲಿ ತನ್ನ ಪರ ನಿಲ್ಲಬೇಕು ಎಂದು ಅಂಗನವಾಡಿ ಕಾರ್ಯಕರ್ತೆ ಪದ್ಮಾ ಮೇಲೆ ಒತ್ತಡ ಹೇರಿದ್ದರು. ಹೀಗಾಗಿ ಪ್ರಕಾಶ್ ಮಾತನ್ನು ಪದ್ಮಾ ಕೇಳಿರಲಿಲ್ಲ ಎನ್ನಲಾಗಿದೆ.
ಹೀಗಾಗಿ ಇಂದು ಮುಂಜಾನೆ 5 ಗಂಟೆ ಸಮಯದಲ್ಲಿ ಪದ್ಮಾ ವಾಸವಿದ್ದ ತೋಟದ ಮನೆಗೆ ಪ್ರಕಾಶ್, ಗ್ರಾಮ ಪಂಚಾಯಿತಿ ಸದಸ್ಯ ದೇವರಾಜ್ ತನ್ನ ಗುಂಪನ್ನು ಕಟ್ಟಿಕೊಂಡು ಬಂದು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತೋಟದಲ್ಲಿ ಅಟ್ಟಾಡಿಸಿಕೊಂಡು ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರೈಲ್ ಆಗಿದೆ. ಹೀಗಾಗಿ ಮಹಿಳೆಯರ ನೆರವಿಗೆ ಬರುವ ಅಂಗನವಾಡಿ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಹಲ್ಲೆಕೋರರನ್ನು ರೌಡಿ ಪಟ್ಟಿಗೆ ಸೇರಿಸಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ಒತ್ತಾಯಿಸಿದೆ.