ತುಮಕೂರು :
ನಗರದಲ್ಲಿ ಜನವರಿ 2ರಂದು ನಡೆಯಲಿರುವ ಕೃಷಿ ಸಮ್ಮಾನ್ ಕಾರ್ಯಕ್ರಮದಲ್ಲಿ 16 ಮಹಿಳಾ ರೈತರು ಹಾಗೂ 16 ಪುರುಷ ರೈತರು ಸೇರಿದಂತೆ ಒಟ್ಟು 32 ರೈತ ಬಾಂಧವರಿಗೆ ಕೃಷಿ ಕರ್ಮಣ್ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಕ್ಕೆ ಪ್ರಧಾನ ಮಂತ್ರಿಗಳು ಆಗಮಿಸುವ ಹಿನ್ನೆಲೆಯಲ್ಲಿ ನಗರದ ಜೂನಿಯರ್ ಕಾಲೇಜು ಮೈದಾನದ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದರು.
ಕೇಂದ್ರ ಕೃಷಿ ಇಲಾಖೆಯಿಂದ ಕೃಷಿ ಸಮ್ಮಾನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳ ರೈತರಿಗೆ ಕೃಷಿ ಕರ್ಮಣ್ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ ಆಯ್ಕೆಯಲ್ಲಿ ಕರ್ನಾಟಕ 3ನೇ ಸ್ಥಾನ ಪಡೆದಿದೆ.
ರಾಜ್ಯದ ಪರವಾಗಿ ಈ ಪ್ರಶಸ್ತಿಯನ್ನು ರಾಜ್ಯದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ವೀಕರಿಸಲಿದ್ದಾರೆ ಎಂದರಲ್ಲದೇ ರಾಜ್ಯಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ರೈತರಿಗೆ ಈ ಪ್ರಶಸ್ತಿ ನೀಡಲಾಗುವುದು. ಈ ಕಾರ್ಯಕ್ರಮಕ್ಕೆ 3 ರಾಜ್ಯದ ಮುಖ್ಯಮಂತ್ರಿಗಳು ಹಾಗೂ 12 ರಾಜ್ಯದ ಕೃಷಿ ಮಂತ್ರಿಗಳು ಭಾಗವಹಿಸುವ ನಿರೀಕ್ಷೆ ಇದ್ದು, ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪ್ರಧಾನ ಮಂತ್ರಿಗಳು ಕೃಷಿ ಸಮ್ಮಾನ್ ಕಾರ್ಯಕ್ರಮಕ್ಕೂ ಮುನ್ನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಶ್ರೀಗಳ ಗದ್ದುಗೆ ದರ್ಶನ ಪಡೆಯಲಿದ್ದಾರೆ. ನಂತರ ಮಠದ ಮಕ್ಕಳೊಂದಿಗೆ ಕೆಲ ನಿಮಿಷಗಳ ಕಾಲ ಸಂವಾದ ನಡೆಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣಸವದಿ, ಸಚಿವ ವಿ.ಸೋಮಣ್ಣ, ಸಂಸದ ಜಿ.ಎಸ್.ಬಸವರಾಜು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.