ತುಮಕೂರು:

      ರಾಜ್ಯದಲ್ಲಿಯೇ ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ವಾಹನ ಸವಾರರು ರಸ್ತೆ ನಿಯಮಗಳನ್ನು ಪಾಲಿಸಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಆಯುಕ್ತ ಎನ್.ಶಿವಕುಮಾರ್ ಅವರು ಹೇಳಿದರು.

      ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಹಾಗೂ ತುಮಕೂರು ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಸಹಯೋಗದಲ್ಲಿಂದು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ರಾಜ್ಯದ ಮೊದಲ ರಸ್ತೆ ಸುರಕ್ಷತಾ ಜಾಗೃತಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ದೇಶದಲ್ಲಿ ರಸ್ತೆ ಅಪಘಾತಗಳಿಂದ ಹೆಚ್ಚು ಅಕಾಲಿಕ ಮರಣ ಹೊಂದುತ್ತಿದ್ದಾರೆ. ಈ ರೀತಿಯ ರಸ್ತೆ ಅಪಘಾತಗಳು ಜನರಿಗೆ ಭಯವನ್ನುಂಟು ಮಾಡುತ್ತಿವೆ. ರಸ್ತೆಯ ನಿಯಮಗಳನ್ನು ಮರೆತು ಇಷ್ಟಬಂದ ಹಾಗೆ ರಸ್ತೆಗಳನ್ನು ಉಪಯೋಗಿಸಿಕೊಳ್ಳುತ್ತಿರುವುದು ಅಪಘಾತಕ್ಕೆ ಕಾರಣ. ರಸ್ತೆ ಅಪಘಾತಗಳನ್ನು ತಡೆಟ್ಟುವಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಜಿಲ್ಲೆಯಿಂದ ಜಾಗೃತಿ ಅಭಿಯಾನನ್ನು ಆರಂಭಿಸಲಾಗುತ್ತಿದೆ. ಈ ಅಭಿಯಾನಕ್ಕೆ ಸರ್ಕಾರದ ಪ್ರಯತ್ನದೊಂದಿಗೆ ಸಾರ್ವಜನಿಕರು ಈ ಅಭಿಯಾನದಲ್ಲಿ ಭಾಗವಹಿಸಬೇಕು ಎಂದರು.

      ರಸ್ತೆ ಸುರಕ್ಷತಾ ನಿಯಮಗಳಿರುವುದು ನಮ್ಮೆಲ್ಲರ ಜೀವ ರಕ್ಷಣೆಗಾಗಿ ಆದ್ದರಿಂದ ಪತ್ರಿಯೊಬ್ಬರೂ ಆ ನಿಯಮಗಳನ್ನು ಪಾಲಿಸಬೇಕು ಎಂದರಲ್ಲದೇ ರಸ್ತೆ ಅಪಘಾತದಲ್ಲಿ ಯುವಕರೇ ಹೆಚ್ಚಾಗಿ ಮರಣ ಹೊಂದುತ್ತಿದ್ದಾರೆ. ರಸ್ತೆಯಲ್ಲಿ ಸಾಹಸ(ವೀಲಿಂಗ್)ಮಾಡಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಪೋಷಕರು ತಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನ ಚಲಾಯಿಸಲು ಅವಕಾಶ ಕೊಡಬಾರದು ಎಂದು ಅವರು ತಿಳಿಸಿದರು.

      ರಸ್ತೆ ಸುರಕ್ಷತಾ ಜಾಗೃತಿ ಕೋಶಗಳನ್ನು ತಾಲೂಕುವಾರು ಶಾಲಾ-ಕಾಲೇಜುಗಳಲ್ಲಿ ಸ್ಥಾಪಿಸಲಾಗುವುದು. ಈ ಕೋಶಗಳಿಗೆ ವಿದ್ಯಾರ್ಥಿಗಳು, ಸಾರ್ವಜನಿಕರು ಭೇಟಿ ನೀಡಿ ರಸ್ತೆ ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

      ಜಿಲ್ಲಾಧಿಕಾರಿ ಡಾ|| ಕೆ.ರಾಕೇಶ್‍ಕುಮಾರ್ ಅವರು ಮಾತನಾಡಿ, ರಸ್ತೆ ಸುರಕ್ಷತಾ ಜಾಗೃತಿ ಕೇಂದ್ರವನ್ನು ಸ್ಥಾಪಿಸುತ್ತಿರುವ ಮುಖ್ಯ ಉದ್ದೇಶವೆಂದರೆ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ. ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಯವರು ನಡೆಸಿರುವ ಸಮೀಕ್ಷೆ ಪ್ರಕಾರ ವಾಹನ ಚಾಲಕನ ಅಜಾಗರೂಕತೆಯಿಂದ ರಸ್ತೆ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ ಎಂದರು.

      ರಸ್ತೆ ಅಪಘಾತ ತಡೆಗಟ್ಟಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಆರ್‍ಟಿಓಗಳ ಸಹಯೋಗದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಬ್ಲಾಕ್‍ಸ್ಪಾಟ್ಸ್‍ಗಳನ್ನು ಗುರುತಿಸಲು ಕ್ರಮವಹಿಸಲಾಗುತ್ತಿದೆ ಎಂದರಲ್ಲದೇ ವಾಹನ ಚಾಲಕರು ರಸ್ತೆ ನಿಯಮ, ಕಾನೂನು ಕಾಯ್ದೆಗಳನ್ನು ಪಾಲಿಸಬೇಕು ಎಂದು ಅವರು ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೋನವಂಶಿಕೃಷ್ಣ ಮಾತನಾಡಿ, ದೇಶದಲ್ಲಿ ಪ್ರತಿ ವರ್ಷ 1.5 ಲಕ್ಷ ಜನರು ಅಪಘಾತದಿಂದ ಮರಣ ಹೊಂದುತ್ತಿದ್ದಾರೆ. ಅಲ್ಲದೇ ಶೇ.90ರಷ್ಟು ವಾಹನ ಸವಾರರು ರಸ್ತೆ ನಿಯಮ ಪಾಲಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ರಸ್ತೆ ಸುರಕ್ಷತೆಯ ಬಗ್ಗೆ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಹೆಲ್ಮೆಟ್ ಧರಿಸದೇ ಹಾಗೂ ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ ಎಂದು ಅವರು ತಿಳಿಸಿದರು. ಜೂನಿಯರ್ ಕಾಲೇಜು ಆವರಣದಲ್ಲಿ ಉದ್ಘಾಟನೆಗೊಂಡಿರುವ ರಸ್ತೆ ಸುರಕ್ಷತಾ ಜಾಗೃತಿ ಕೇಂದ್ರದಲ್ಲಿ ರಸ್ತೆ ಸುರಕ್ಷತೆಯನ್ನು ಬಿಂಬಿಸುವ ಫಲಕಗಳು, ವಿಡಿಯೋ ಚಿತ್ರಗಳಿದ್ದು, ಇದನ್ನು ಕಾಲೇಜು ವಿದ್ಯಾರ್ಥಿಗಳು ವೀಕ್ಷಿಸಬಹುದಾಗಿದೆ.

      ಈ ಸಂದರ್ಭದಲ್ಲಿ ಕರ್ನಾಟಕ ರಸ್ತೆ ಸುರಕ್ಷತಾ ಪ್ರಾಧಿಕಾರದ ಹೆಚ್ಚುವರಿ ಆಯುಕ್ತ ನರೇಂದ್ರ ಹೊಳ್ಕರ್, ಡಿಹೆಚ್‍ಓ ಡಾ|| ಚಂದ್ರಿಕಾ, ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜು, ಪದವಿ ಪೂರ್ವ ಕಾಲೇಜು ಉಪನಿರ್ದೇಶಕಿ ಲಲಿತಾಕುಮಾರಿ, ಪ್ರಾಚಾರ್ಯರ ಜೈರಾಮ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

(Visited 26 times, 1 visits today)