ತುಮಕೂರು :
ಕಲೆ, ಸಾಹಿತ್ಯ, ಸಂಸ್ಕøತಿ ಹಾಗೂ ಸ್ಥಳೀಯ ಜಾನಪದ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಮೂಡಲಪಾಯ ಯಕ್ಷಗಾನ ಅಕಾಡೆಮಿ ಸ್ಥಾಪನೆಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತೇನೆ. ಈ ಸಂಬಂಧ ಸಂಬಂಧಪಟ್ಟ ಸಚಿವರೊಂದಿಗೂ ಮಾತನಾಡಿ ಒತ್ತಾಯಿಸುತ್ತೇನೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಭರವಸೆ ನೀಡಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಸಂಘ ಮತ್ತು ಕರ್ನಾಟಕ ಜಾನಪದ ಪರಿಷತ್ತು ತುಮಕೂರು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಮೂಡಲಪಾಯ ಯಕ್ಷಗಾನ ಪರಂಪರೆ-ಪುನಶ್ಚೇತನ ವಿಚಾರ ಸಂಕಿರಣ ಮತ್ತು ಭಾಗವತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶಗೌಡ ಮನವಿ ಸ್ವೀಕರಿಸಿದ ಸಚಿವರು ಮೂಡಲಪಾಯ ಯಕ್ಷಗಾನ ಅಕಾಡೆಮಿ ಸ್ಥಾಪನೆಗೆ ನೆರವು ನೀಡುವುದಾಗಿ ಹೇಳಿದರು.
ಕಲೆ ಸಾಹಿತ್ಯ, ಭಾಷೆ ಮತ್ತು ಸಂಸ್ಕøತಿಗೆ ಪೂರಕವಾಗಿ ಶಕ್ತಿತುಂಬುವ ಕೆಲಸ ಮಾಡಿದರೆ ಸಂಸ್ಕಾರವಂತರು ಸೃಷ್ಟಿಯಾಗುತ್ತಾರೆ ಎಂದು ನಂಬಿದ್ದೇನೆ. ಈಗಿನ ಸಂದರ್ಭದಲ್ಲಿ ಸಂಸ್ಕಾರವಂತರು ಬೇಕಾಗಿದ್ದಾರೆ. ಹೀಗಾಗಿ ಯುವಜನಕ್ಕೆ ಖುಷಿ ನೀಡುವ ಮಜಾ ಕೊಡುವ ಸ್ಥಿತಿ ನಿರ್ಮಾಣ ಮಾಢುವ ಜವಾಬ್ದಾರಿ ಕಲಾವಿದರ ಮೇಲಿದೆ. ಹಳೆಯ ಜಾನಪದ ಕಲೆಗಳನ್ನು ಹೊಸದಾಗಿ ಕಟ್ಟಬೇಕು. ಆಗ ಇಂದಿನ ಪೀಳಿಗೆಯೂ ನೋಡುತ್ತದೆ. ಎಲ್ಲರನ್ನು ಒಳಗೊಳ್ಳುವ ಪ್ರಕ್ರಿಯೆ ಇದಾಗುತ್ತದೆ. ಇದಕ್ಕೆ ಸರ್ಕಾರವೂ ಪ್ರೋತ್ಸಾಹ ನೀಡುತ್ತದೆ ಎಂದರು.
ಮುಖವೀಣೆ, ಮೂಡಲಪಾಯ ಕಲೆಯನ್ನು ಉಳಿಸಿಕೊಂಡು ಹೋಗುವುದು ದೊಡ್ಡ ಸಾಧನೆ. ಸರ್ಕಾರ ಇದಕ್ಕೆ ಪೋಷಣೆ ನೀಡಿದರೆ ಹೆಚ್ಚು ಅನುಕೂಲವಾಗುತ್ತದೆ. ಮೂಡಲಪಾಯ ಯಕ್ಷಗಾನ ಜೀವಂತ ಕಲೆ. ಇದು ಗಂಡುಕಲೆ. ಮಹಿಳೆಯರಿಗೆ ಒಮ್ಮೆ ಹೇಳಿದ್ದೆ. ತಾಳಕ್ಕೆ ನೀವು ಕಾಲು ಹಾಕುತ್ತೀರ. ಪುರುಷರು ಕುಣಿಯುತ್ತಾರೆ. ಪುರುಷರು ಕಾಲು ಹಾಕುವ ಶೈಲಿಯೇ ಬೇರೆ. ಮಹಿಳೆಯರು ಹಾಕುವ ರೀತಿಯ ಬೇರೆ ಎಂದು ಹೇಳಿದರು.
ಬೆಳ್ಳಿತೆಗೆ ಮತ್ತು ಟಿವಿ ಜಗತ್ತಿನಲ್ಲಿ ಪ್ರಾಚೀನ ಕಲೆ ಮರೆಯಾಗಿದೆ. ಇದು ಕಾಲಚಕ್ರ ಇದ್ದಂತೆ. ಒಂದಲ್ಲ ಒಂದು ದಿನ ಪ್ರಾಚೀನ ಕಲೆಗೆ ಹೆಚ್ಚಿನ ಮಹತ್ವ ಬರುತ್ತದೆ. ಅದಕ್ಕಾಗಿ ಕಲಾವಿದರು ಕಲೆಯನ್ನು ಉಳಿಸುವ ಮತ್ತು ಹೊಸ ಕಾಲಕ್ಕೆ ನಾವೀನ್ಯಗೊಳಿಸುವ ಕೆಲಸ ಮಾಡಬೇಕು. ಇದಕ್ಕೆ ಸರ್ಕಾರ ಪ್ರೋತ್ಸಾಹ ಕೊಡಬೇಕು ಎಂದರು. ತುಮಕೂರು ಜಿಲ್ಲೆ ಕಲೆಗೆ ಹೆಸರುಪಡೆದಿದೆ. ಗುಬ್ಬಿ ವೀರಣ್ಣನವರ ನಾಡಿನಲ್ಲಿ ಕಲೆಗೆ ಹಿನ್ನಡೆಯಾದಂತೆ ಕಂಡುಬರುತ್ತಿದೆ. ಹೀಗಾಗಿ ಕಲೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿ ತುಮಕೂರು ಜಿಲ್ಲೆಯಲ್ಲಿ 800ಕ್ಕೂ ಹೆಚ್ಚು ಮಂದಿ ಮೂಡಲಪಾಯ ಯಕ್ಷಗಾನ ಕಲಾವಿದರು ಇದ್ದಾರೆ. ತುಮಕೂರು ನಗರದಲ್ಲೇ 150ಕ್ಕೂ ಭಾಗವತರು, ಮುಖವೀಣೆಯವರು ಇದ್ದಾರೆ. ಹೀಗಾಗಿ ಮೂಡಲಪಾಯ ಯಕ್ಷಗಾನ ಅಕಾಡೆಮಿ ಸ್ಥಾಪಿಸುವಂತೆ ಕನ್ನಡ ಮತ್ತು ಸಂಸ್ಕøತಿ ಸಚಿವರಿಗೆ ಮನವಿ ಮಾಡಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರ ಮೇಲೆ ಒತ್ತಡ ಹೇರಬೇಕು ಎಂದು ಮನವಿ ನೀಡಿದರು.
ವಿಶ್ವವಿದ್ಯಾಲಯಗಳು ಸ್ಥಳೀಯ ಕಲೆ, ಇತಿಹಾಸ, ಸಂಸ್ಕøತಿ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು.
ಜಿಲ್ಲೆಗೊಂದು ವಿಶ್ವವಿದ್ಯಾಲಯಗಳು ಆಗಿವೆ. ಪ್ರಾದೇಶಿಕ ಸಂಸ್ಕøತಿ, ವೈಶಿಷ್ಟ್ಯಗಳನ್ನು ಇತಿಹಾಸವನ್ನು ಕಟ್ಟಿಕೊಡುವ ಜವಾಬ್ದಾರಿ ವಿವಿಗಳ ಮೇಲಿದೆ. ಆದರೆ ಇಂತಹ ಕಾರ್ಯವನ್ನು ಮಾಡಲು ವಿಶ್ವವಿದ್ಯಾಲಯಗಳು ಮುಂದೆ ಬರುತ್ತಿಲ್ಲ. ತುಮಕೂರು ವಿಶ್ವವಿದ್ಯಾಲಯವೂ ಇಂತಹ ಕೆಲಸ ಮಾಡಲು ಹಿಂದೇಟು ಹಾಕುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಅರಳಗುಪ್ಪೆ ನಂಜಪ್ಪ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ.ಹೆಗಡೆ, ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಟಿ.ತಿಮ್ಮೇಗೌಡ, ಬಿ.ಮರುಳಯ್ಯ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ ಸ್ವಾಗತಿಸಿದರು. ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಚಿಕ್ಕಣ್ಣ ಯಣ್ಣೇಕಟ್ಟೆ ಕಾರ್ಯಕ್ರಮ ನಿರೂಪಿಸಿದರು.