ತುಮಕೂರು :
ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಗೆ ಹೊಂದಿಕೊಂಡಂತೆ ಇರುವ ಮಣಕುಪ್ಪೆಯಲ್ಲಿ ಚಿರತೆ ಬಾಲಕನನ್ನು ಹೊತ್ತೊಯ್ದು ಸಾಯಿಸುವುದಕ್ಕೆ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಶಾಸಕ ಗೌರಿಶಂಕರ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಜಿಲ್ಲಾ ಅರಣ್ಯಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಜಿಲ್ಲೆಯಲ್ಲಿ ಚಿರತೆ ಹಾವಳಿ ಮಿತಿಮೀರಿದ್ದು, ಊರುಗಳಿಗೆ ನುಗ್ಗಿ ಜಾನುವಾರುಗಳನ್ನು ಹೊತ್ತೊಯ್ಯುತ್ತಿದ್ದರು, ಅರಣ್ಯಾಧಿಕಾರಿಗಳು ಚಿರತೆ ಸೆರೆ ಹಿಡಿಯಲು ಯಾವುದೇ ಕ್ರಮವಹಿಸಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು ಜಿಲ್ಲಾ ಅರಣ್ಯಾಧಿಕಾರಿ ವಿರುದ್ಧ ಧಿಕ್ಕಾರವನ್ನು ಕೂಗಿದರು.
ಈ ವೇಳೆ ಮಾತನಾಡಿದ ಗ್ರಾಮಾಂತರ ಶಾಸಕ ಗೌರಿಶಂಕರ್ ಅವರು, ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬನ್ನಿಕುಪ್ಪೆಯಲ್ಲಿ ಚಿರತೆ ವೃದ್ಧೆಯ ಮೇಲೆ ದಾಳಿ ಮಾಡಿ ಸಾಯಿಸಿತ್ತು, ಆಗಲೇ ಅರಣ್ಯಾಧಿಕಾರಿಗಳಿಗೆ ಚಿರತೆಯನ್ನು ಹಿಡಿಯಲು ಕ್ರಮವಹಿಸುವಂತೆ ಮನವಿ ಮಾಡಿದ್ದರು ಸಹ ನಿರ್ಲಕ್ಷ್ಯವಹಿಸಿದ್ದರಿಂದ ಇಲ್ಲಿಯವರೆಗೆ ಮೂವರು ಸಾವನ್ನಪ್ಪುವಂತೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಚಿರತೆ ಹಾವಳಿಯಿಂದ ಮಕ್ಕಳು ಶಾಲೆಗಳಿಗೆ ಹೋಗಲು ಅಂಜುವಂತಹ ಸ್ಥಿತಿ ನಿರ್ಮಾಣವಾಗಿದೆ, ತೋಟಗಳಿಗೆ ಹೋಗಲು ಹೆದರುತ್ತಿದ್ದಾರೆ, ಅರಣ್ಯಾಧಿಕಾರಿಗಳು ಜನರ ನೆಮ್ಮದಿಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸ್‍ರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆಹಿಡಿಯಲು ಕ್ರಮವಹಿಸಬೇಕೆಂದು ಒತ್ತಾಯಿಸಿದರು.
ಅರಣ್ಯಾಧಿಕಾರಿಗಳು ಚಿರತೆಯನ್ನು ಹಿಡಿಯಲು ಗ್ರಾಮಸ್ಥರು ಸಹಕಾರ ನೀಡಬೇಕೆಂದು ಮನವಿ ಮಾಡಿದ ಅವರು, ಚಿರತೆ ಸೆರೆ ಹಿಡಿಯುವವರೆಗೂ ಎಚ್ಚರಿಕೆಯಿಂದ ಓಡಾಡುವಂತೆ ಸಾರ್ವಜನಿಕರಿಗೆ ಕರೆ ನೀಡಿದ ಅವರು, ಇಲ್ಲಿನ ಅಧಿಕಾರಿಗಳಿಗೆ ತಾಲ್ಲೂಕಿನಲ್ಲಿರುವ ಚಿರತೆಗಳ ಬಗ್ಗೆ ಗೊತ್ತಿಲ್ಲ, ಲಭ್ಯವಿರುವ ಬೋನುಗಳ ಬಗ್ಗೆಯೂ ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಲ್ಲೂಕಿನಲ್ಲಿ 16ಕ್ಕೂ ಹೆಚ್ಚು ಚಿರತೆಗಳು ಓಡಾಡುತ್ತಿದ್ದು, ಅವುಗಳನ್ನು ಹಿಡಿಯಲು ತಾಲ್ಲೂಕಿನಲ್ಲಿ ಬೋನುಗಳಿಲ್ಲ, ಅರಣ್ಯಾಧಿಕಾರಿಗಳು ಚಿರತೆಗಳ ಸಮಸ್ಯೆ ಇಲ್ಲದ ತಾಲ್ಲೂಕುಗಳಿಂದ ಬೋನುಗಳನ್ನು ತರಿಸಿ, ಚಿರತೆಗಳನ್ನು ಹಿಡಿಯಲು ಕ್ರಮವಹಿಸಬೇಕು ಎಂದ ಅವರು, ಹದಿನೈದು ದಿನಗಳ ಒಳಗೆ ಚಿರತೆ ಹಾವಳಿಯನ್ನು ನಿಯಂತ್ರಿಸದೇ ಇದ್ದರೆ, ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಮಾತನಾಡುವುದಾಗಿ ತಿಳಿಸಿದರು.
ಅಕ್ರಮ ಗಣಿಗಾರಿಕೆ ಎಚ್ಚರಿಕೆ: ತುಮಕೂರು ತಾಲ್ಲೂಕಿನಲ್ಲಿ ಡೀಮ್ಡ್ ಅರಣ್ಯದೊಳಗೆ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದ್ದು, ಈ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಡೀಮ್ಡ್ ಅರಣ್ಯದೊಳಗೆ ಗಣಿಗಾರಿಕೆ ನಡೆಯುತ್ತಿರುವುದರಿಂದ ವನ್ಯಜೀವಿಗಳು ನಗರದತ್ತ ಬರುವಂತಾಗಿದೆ, ಈ ನಿಟ್ಟಿನಲ್ಲಿ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಎಚ್ಚರಿಕೆ ನೀಡಿದ ಅವರು, ಅಕ್ರಮವಾಗಿ ಗಣಿಗಾರಿಕೆ ನಡೆಸುವವರನ್ನು ಜೈಲಿಗೆ ಕಳುಹಿಸುವುದಾಗಿ ಹೇಳಿದರು.
ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಅರಣ್ಯಾಧಿಕಾರಿಗಳು ಚಿರತೆ ದಾಳಿಯ ಬಗ್ಗೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆದು ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದ ಅವರು, ಈಗಾಗಲೇ ಚಿರತೆ ದಾಳಿಯಾದ ಕಡೆ ಕ್ಯಾಮೆರಾ ಟ್ರ್ಯಾಪ್ ಅಳವಡಿಸಲಾಗಿದ್ದು, ಜನರು ಓಡಾಡಬೇಕಾದರೆ ಎಚ್ಚರಿಕೆ ವಹಿಸುವಂತೆ ತಿಳಿಸಿದರು.
ಉಪವಿಭಾಗಾಧಿಕಾರಿ ಶಿವಕುಮಾರ್ ಅವರಿಗೆ ಚಿರತೆಯನ್ನು ಶೀಘ್ರ ಸೆರೆ ಹಿಡಿಯುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತಕುಮಾರ್,ಯುವಘಟಕದ ಅಧ್ಯಕ್ಷ ಹಿರೇಹಳ್ಳಿ ಮಹೇಶ್,ಗೂಳೂರುಹೋಬಳಿ ಜೆಡಿಎಸ್ ಅಧ್ಯಕ್ಷ ಪಾಲನೇತ್ರಯ್ಯ, ವಿಎಸ್‍ಎಸ್‍ಎನ್ ಅಧ್ಯಕ್ಷ ಕೆಂಪಹನುಮಣ್ಣ, ಜೆಡಿಎಸ್ ಮುಖಂಡರಾದ ಕೋಡಿಮುದ್ದನಹಳ್ಳಿಪ್ರಕಾಶ್, ಎಂ ಆರ್ ಮಂಜುನಾಥ್,ಸಿರಿವರಬೋರೇಗೌಡ, ಮಸ್ಕಲ್ ಅಶ್ವತ್ಥನಾರಾಯಣ,ವಕೀಲ ಕಾಮೇಗೌಡ, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗೌರಮ್ಮ,ಹರಳೂರು ಗ್ರಾಮಪಂಚಾಯ್ತಿ ಅಧ್ಯಕ್ಷೆ ಶಾಂತ ಸುರೇಶ್, ಐಟಿ ಘಟಕದ ಅಧ್ಯಕ್ಷ ಎಂ.ಎನ್ ಗೌಡ.ನಾಗರತ್ನಮ್ಮ,ಸತ್ಯವತಿಸುರೇಶ್,ಪುಷ್ಪಕರೇರಂಗಯ್ಯ ಉಪಸ್ಥ್ತಿತರಿದ್ದರು