ತುಮಕೂರು :
ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯ ಸೌಲಭ್ಯ ಪಡೆಯಲು ಜಿಲ್ಲೆಯ ಅರ್ಹ ಅಸಂಘಟಿತ ವಲಯದ ಕಾರ್ಮಿಕರನ್ನು ನೋಂದಣಿ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ಕುಮಾರ್ ಅವರು ಸೂಚಿಸಿದರು.
ಈಗಾಗಲೇ ಜಿಲ್ಲೆಯಲ್ಲಿ ನೋಂದಣಿ ಕಾರ್ಯ ಆರಂಭವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿ ಮಾಡಿಸಲು ವಿವಿಧ ಇಲಾಖೆಗಳ ಸಹಕಾರ ಅಗತ್ಯವಾಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕಾರ್ಮಿಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿನ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಶಾಲೆಗಳಲ್ಲಿ ಬಿಸಿಯೂಟ ತಯಾರಕರು, ಮಹಾನಗರ ಪಾಲಿಕೆ ವ್ಯಾಪ್ತಿಯ ಬೀದಿಬದಿ ವ್ಯಾಪಾರಿಗಳು, ಸಾರಿಗೆ ಇಲಾಖೆಯಡಿಯ ಖಾಸಗಿ ಬಸ್ ಚಾಲಕರು, ಮೀನುಗಾರಿಕೆ ಇಲಾಖೆಯ ತೀವ್ರ ಹಾಗೂ ಅರೆಕಾಲಿಕ ಮೀನುಗಾರರು, ಸಮಾಜ ಕಲ್ಯಾಣ ಇಲಾಖೆಯ ಚರ್ಮ ಉದ್ಯಮ ಕಾರ್ಮಿಕರು ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿದ್ದು, ತಕ್ಷಣವೇ ಈ ಎಲ್ಲಾ ಕಾರ್ಮಿಕರಿಗೂ ಈ ಯೋಜನೆಯ ಕುರಿತು ಅರಿವು ಮೂಡಿಸಿ ನೋಂದಣಿ ಮಾಡಿಸಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರತಿ ಮಾಹೆಯಲ್ಲಿ ಈ ಕುರಿತು ಪ್ರಗತಿ ಪರಿಶೀಲನೆ ನಡೆಸಲಾಗುವುದು. ನೋಂದಣಿ ಆಗಿರುವ ಕಾರ್ಮಿಕರ ಕುರಿತು ಸಭೆಗೆ ನಿಖರ ಮಾಹಿತಿಯನ್ನು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಡಿ.ಎಚ್ಓ ಡಾ. ಬಿ.ಆರ್. ಚಂದ್ರಿಕಾ, ಡಿಡಿಪಿಐ ಎಂ. ಆರ್. ಕಾಮಾಕ್ಷಮ್ಮ, ಜಿಲ್ಲಾ ಕಾರ್ಮಿಕಾಧಿಕಾರಿ ಸುಭಾಷ್ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.