ಬೆಂಗಳೂರು:
ಸೋಮವಾರ ವಿಧಿವಶರಾದ ಬಿಜೆಪಿಯ ದಿಗ್ಗಜ ನಾಯಕ,ಕೇಂದ್ರ ಸಚಿವ ಎಚ್.ಎನ್.ಅನಂತ್ ಕುಮಾರ್ ಅವರ ಅಂತಿಮ ಸಂಸ್ಕಾರ ಮಂಗಳವಾರ ಮಧ್ಯಾಹ್ನ ಗಣ್ಯಾತೀಗಣ್ಯರ ಸಮಕ್ಷಮ, ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ನಡೆಯಿತು.ಈ ವೇಳೆ ಪತ್ನಿ ತೇಜಸ್ವಿನಿ ಮತ್ತು ಪುತ್ರಿಯರಿಬ್ಬರು ತೀವ್ರ ಕಂಬನಿ ಮಿಡಿದರು.
ಅನಂತಕುಮಾರ್ ಸೋದರ ನಂದಕುಮಾರ್ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಸೇನಾ ಸಿಬ್ಬಂದಿ ಸರ್ಕಾರಿ ಗೌರವ ಸಲ್ಲಿಸಿದರು. ಪಕ್ಷಾತೀತವಾಗಿ ಪ್ರಮುಖ ರಾಜಕೀಯ ನಾಯಕರು, ಸಚಿವರು, ಶಾಸಕರು ಮತ್ತು ಅಭಿಮಾನಿಗಳು ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.
ಮುಂಜಾನೆ 7.30ಕ್ಕೆ ಬಸವನಗುಡಿಯಲ್ಲಿರುವ ಅನಂತಕುಮಾರ್ ಅವರ ಸ್ವಗೃಹ ‘ಸುಮೇರು’ವಿನಿಂದ ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಚೇರಿ ‘ಜಗನ್ನಾಥ ಭವನ’ಕ್ಕೆ ಪುಷ್ಪಾಲಂಕೃತ ಸೇನಾ ವಾಹನದಲ್ಲಿ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು. ಯಡಿಯೂರಪ್ಪ, ಈಶ್ವರಪ್ಪ ಸೇರಿದಂತೆ ಬಿಜೆಪಿ ಹಿರಿಯ ನಾಯಕರು ಪಕ್ಷದ ಕಚೇರಿಯಲ್ಲಿ ಗೌರವ ಸಲ್ಲಿಸಿದರು.
ಅಲ್ಲಿಂದ ನ್ಯಾಷನಲ್ ಕಾಲೇಜು ಮೈದಾನಕ್ಕೆ ಪಾರ್ಥಿವ ಶರೀರ ತರಲಾಯಿತು. ಅಲ್ಲಿ ಸಾವಿರಾರು ಸಾರ್ವಜನಿಕರು ನೆಚ್ಚಿನ ನಾಯಕನ ಅಂತಿಮ ದರ್ಶನ ಪಡೆದರು.
ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಶಿಷ್ಯ ಅನಂತ್ ಕುಮಾರ್ ಅವರ ಅಂತಿಮ ದರ್ಶನಕ್ಕೆ ಆಗಮಿಸಿದ್ದರು. ಅನಂತ್ ಕುಮಾರ್ ಅವರ ಪಾರ್ಥೀವ ಶರೀರ ಕಂಡು ಕಂಬನಿ ಮಿಡಿದರು. ಅನಂತ್ ಕುಮಾರ್ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಕೇಂದ್ರ ಸಚಿವರಾದ ರಾಜ್‌ನಾಥ್ ಸಿಂಗ್, ನಿರ್ಮಲಾ ಸೀತಾರಾಮನ್ , ಡಿ.ವಿ.ಸದಾನಂದ ಗೌಡ ಸೇರಿ 20 ಕ್ಕೂ ಹೆಚ್ಚು ಮಂದಿ ಅಂತಿಮ ಕ್ರಿಯೆಯಲ್ಲಿ ಹಾಜರಾಗಿ ಗೌರವ ಸಮರ್ಪಣೆ ಮಾಡಿದರು. ರಾಜ್ಯ ಸರ್ಕಾರದ ಪರವಾಗಿ ಸಚಿವ ಡಿ.ಕೆ.ಶಿವಕುಮಾರ್ ಅವರು ಅಂತಿಮ ನಮನ ಸಲ್ಲಿಸಿದರು.
ಚಾಮರಾಜಪೇಟೆ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನಡೆಯಿತು. ಸ್ಮಾರ್ಥ ಬ್ರಾಹ್ಮಣ ವಿಧಿಗಳಂತೆ ಅಂತಿಮ ಸಂಸ್ಕಾರ ನಡೆಯಿತು. ಶ್ರೀಗಂಧ, ಹಸುವಿನ ತುಪ್ಪ ಮೊದಲಾದ ದ್ರವ್ಯಗಳಿಂದ ಶರೀರವನ್ನು ದಹನ ಮಾಡಲಾಯಿತು. ಪುರೋಹಿತ ಶ್ರೀನಾಥ ಶರ್ಮಾ ಮಾರ್ಗದರ್ಶನದಲ್ಲಿ ಮಂತ್ರಘೋಷಗಳೊಂದಿಗೆ ಅಂತಿಮ ವಿಧಿ ಗಳನ್ನು ನಡೆಸಿದರು.
ಸಾರ್ವಜನಿಕರಿಗೆ ಅಂತಿಮ ವಿಧಿಗಳನ್ನು ವೀಕ್ಷಿಸುವ ಸಲುವಾಗಿ ಮೈದಾನದ ಹೊರಗೆ ಬೃಹತ್ ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಲಾಗಿದೆ. ರುದ್ರಭೂಮಿಯತ್ತ ಲಕ್ಷಾಂತರ ಜನರು ಹರಿದು ಬಂದಿದ್ದರು. ವ್ಯಾಪಕ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.