ಚಿಕ್ಕನಾಯಕನಹಳ್ಳಿ :
ಆರೋಗ್ಯ ಇಲಾಖೆ ಹಾಗೂ ರೋಟರಿ ಸಹಯೋಗದಲ್ಲಿ ನಡೆದ ಪೊಲಿಯೋಲಸಿಕೆ ಕಾರ್ಯಕ್ರಮವನ್ನು ಸಚಿವ ಜೆ.ಸಿ. ಮಾಧುಸ್ವಾಮಿ ಮಗುವಿಗೆ ಪೋಲಿಯೋಹನಿ ಹಾಕುವ ಮೂಲಕ ಚಾಲನೆ ನೀಡಿದರು.
ಪಟ್ಟಣದ ಖಾಸಗಿ ಬಸ್‍ನಿಲ್ದಾಣದಲ್ಲಿ ಸಚಿವ ಜೆ.ಸಿ. ಮಾಧುಸ್ವಾಮಿ ಮಗುವಿಗೆ ಲಸಿಕೆ ಹಾಕುವ ಮೂಲಕ ತಾಲ್ಲೂಕಿನಾದ್ಯಂತ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಹಾಗೂ ರೋಟರಿ ಸಂಸ್ಥೆಯ ಪದಾಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.
ಸಮಯ ಪರಿಪಾಲಿಸದ ಆರೋಗ್ಯ ಸಿಬ್ಬಂದಿಯ ಮೇಲೆ ಹರಿಹಾಯ್ದ ಸಚಿವರು: ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡುವುದಕ್ಕಾಗಿ ಬೆಳಿಗ್ಗೆ 7-30ಕ್ಕೆ ಸಮಯ ನಿಗಧಿಪಡಿಸಿದಂತೆ ಸರಿಯಾಗಿ ಪಟ್ಟಣದ ಖಾಸಗಿಬಸ್ ನಿಲ್ದಾಣಕ್ಕೆ ಆಗಮಿಸಿದ ಸಚಿವರಿಗೆ ಖಾಲಿ ಖುರ್ಚಿ ಹಾಗೂ ಬಯಲು ಶಾಮಿಯಾನದ ಸ್ವಾಗತ ಸಿಕ್ಕಿತು.
ಒಂದಿಬ್ಬರು ಆರೋಗ್ಯ ಸಿಬ್ಬಂದಿ ಖಾಲಿಕೈಯಲ್ಲಿದ್ದರೆ, ಉಳಿದಂತೆ ಸಹಭಾಗಿತ್ವದ ರೋಟರಿ ಸಂಸ್ಥೆಯ ಸದಸ್ಯರು ಹಾಗೂ ಪುರಸಭೆಯ ಕೆಲವು ನೌಕರರು ಅಲ್ಲಿದ್ದರು.
ಇದನ್ನು ಕಂಡು ಸಿಡಿಮಿಡಿಗೊಂಡ ಸಚಿವರು 7-30ಕ್ಕೆ ಸರಿಯಾಗಿ ಬರುತ್ತೇನೆ, ಇಲ್ಲಿ ಮುಗಿಸಿಕೊಂಡು ತುಮಕೂರಿನಲ್ಲಿ 9ಕ್ಕೆ ಚಾಲನೆ ನೀಡಬೇಕಿದೆ ಎಂದು ಮೊದಲೇ ತಿಳಿಸಿ ಕಾರ್ಯಕ್ರಮ ನಿಗಧಿ ಮಾಡಿದ್ದರೂ ಆರೋಗ್ಯ ಇಲಾಖೆ ಸಿಬ್ಬಂದಿ ಸಮಯ ಪರಿಪಾಲನೆ ಮಾಡದೆ,ಈಗ ಪರದಾಡುತ್ತಿರುವುದಕ್ಕೆ ಆಕ್ಷೇಪಿಸಿ ಯಾರ್ರೀ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವುದು, ವಾಕ್ಸೀನ್ ಎಲ್ರೀ, ಮಕ್ಕಳುಗಳೆಲ್ರಿ, ಎಂದು ಪ್ರಶ್ನಿಸುತ್ತಿದ್ದಾಗ ಆರೋಗ್ಯ ಸಿಬ್ಬಂದಿ ಉತ್ತರಿಸಲು ತಡಬಡಾಯಿಸಿದರು.
ಸುಮಾರು 20 ನಿಮಿಷ ಕಾಯ್ದ ನಂತರ ಪೋಲಿಯೋ ವ್ಯಾಕ್ಸೀನ್‍ನ ಪೆಟ್ಟಿಗೆಹೊತ್ತು ಮಹಿಳಾ ಆರೋಗ್ಯ ಸಹಾಯಕಿ ಒಂದೆಡೆ ಬಂದರೆ, ಮತ್ತೊಂದೆಡೆಯಿಂದ ಇಬ್ಬರು ಮಕ್ಕಳೊಂದಿಗೆ ಪೋಷಕರು ಹಾಜರಾದರು. ತಕ್ಷಣ ಸಚಿವರು ಯಾರನ್ನೂ ಕಾಯದೆ ತಾವೇ ದೀಪಹಚ್ಚಿ ಉದ್ಘಾಟಿಸಿ, ಮತ್ತೆ ಕೆಲವರಿಂದ ದೀಪ ಹಚ್ಚಿಸಿದನಂತರ ಪೋಲಿಯೋ ಹನಿಯನ್ನು ಅಲ್ಲಿಗೆ ಬಂದಿದ್ದ ಎರಡೂ ಮಕ್ಕಳಿಗೆ ಹಾಕಿ ತುಮಕೂರಿನಡೆ ಹೊರಟೇ ಬಿಟ್ಟರು.
ನಂತರ ಆರೋಗ್ಯ ಸಿಬ್ಬಂದಿ ಸಚಿವರ ಆಕ್ಷೇಪಣೆಯ ಹಿನ್ನಲೆಯಲ್ಲಿ ತಮ್ಮತಮ್ಮಲ್ಲೆ ದೋಶಾರೋಪ, ಸಮರ್ಥನೆಗಳ ಚರ್ಚೆ ನಡೆಸುತ್ತಿದ್ದರು.