ತುಮಕೂರು :
ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ-2020ಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಮತದಾರರ ಪಟ್ಟಿ ವೀಕ್ಷಕರು ಹಾಗೂ ಕಾರ್ಮಿಕ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಮಣಿವಣ್ಣನ್ ಅವರು ಜಿಲ್ಲೆಯ ಕೊರಟಗೆರೆ, ಮಧುಗಿರಿ ಹಾಗೂ ಪಾವಗಡ ತಾಲ್ಲೂಕಿನ ವಿವಿಧ ಗ್ರಾಮಗಳ ಮನೆಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಶೀಲನೆ ನಡೆಸಿದರು.
ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಇರಕಸಂದ್ರ ಕಾಲೋನಿ, ಮಧುಗಿರಿ ತಾಲೂಕಿನ ಕೆರೆಗಳ ಪಾಳ್ಯ ಹಾಗೂ ಪಾವಗಡ ತಾಲ್ಲೂಕಿನ ರಾಜವಂತಿ ಗ್ರಾಮದ ಮನೆಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿಯನ್ನು ಪರಿಶೀಲನೆ ನಡೆಸಿದರು.
ಕೊರಟಗೆರೆ ತಾಲೂಕಿನ ಮತಗಟ್ಟೆ ಸಂಖ್ಯೆ 199ರ ಮನೆಯೊಂದಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕುಟುಂಬವೊಂದು ಹಳೆಯ ಹಾಗೂ ಹೊಸ ಎಪಿಕ್ ಕಾರ್ಡುಗಳನ್ನು ಹೊಂದಿರುವುದು ವೀಕ್ಷಕರ ಗಮನಕ್ಕೆ ಬಂದಾಗ ಮತದಾರರು ಎರಡೆರಡು ಕಾರ್ಡು ಹೊಂದದೆ ವ್ಯಾಲಿಡ್ (ಮಾನ್ಯ) ಇರುವ ಎಪಿಕ್ ಕಾರ್ಡನ್ನೇ ಹೊಂದಿರಬೇಕು. ಅಧಿಕಾರಿಗಳು ಎಲ್ಲ ಮತದಾರರು ವ್ಯಾಲಿಡ್ ಕಾರ್ಡು ಹೊಂದಿರುವ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ರಾಜವಂತಿ ಗ್ರಾಮದ ಮತದಾರ ತಿಮ್ಮರಾಜು ಅವರ ಮನೆಗೆ ತೆರಳಿ ಮತದಾರರ ಸಂಖ್ಯೆ, ಮತದಾರರ ಗುರುತಿನ ಚೀಟಿ(ಎಪಿಕ್ ಕಾರ್ಡ್), ಮತ್ತಿತರ ಮಾಹಿತಿ ಪಡೆದ ಅವರು, ಮತದಾರರ ಹೆಸರು ಮತಪಟ್ಟಿಯಲ್ಲಿರುವ ಬಗ್ಗೆ ಪರಿಶೀಲಿಸಿದರು.
ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ 18ವರ್ಷ ಮೇಲ್ಪಟ್ಟ ಎಲ್ಲಾ ಅರ್ಹ ಮತದಾರರು ಕಡ್ಡಾಯವಾಗಿ ಎಪಿಕ್ ಕಾರ್ಡ್(ಹೊಸ ಮತದಾರರ ಗುರುತಿನ ಚೀಟಿ) ಹೊಂದಿರಬೇಕು. ಮತಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ರಾಜವಂತಿಯ ಬಿಎಲ್‍ಓ ಕರಿಯಣ್ಣ ಅವರ ಕಾರ್ಯವನ್ನು ಅವರು ಈ ಸಂದರ್ಭದಲ್ಲಿ ಶ್ಲಾಘಿಸಿದರು.
ಮಧುಗಿರಿ ಉಪವಿಭಾಗಾಧಿಕಾರಿಗಳ ಕಛೇರಿಗೆ ತೆರಳಿ ಬಡವನಹಳ್ಳಿ ಗ್ರಾಮದ ಮತದಾರರ ಪಟ್ಟಿ, ನಮೂನೆ-6, 6ಎ, 7, 8, 8ಎ ಮೂಲಕ ಸ್ವೀಕೃತ ಅರ್ಜಿ ಹಾಗೂ ವಿಲೇವಾರಿಯಾದ ಅರ್ಜಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಉಪವಿಭಾಗಧಿಕಾರಿ ಡಾ|| ಕೆ.ಆರ್.ನಂದಿನಿದೇವಿ, ತಹಶೀಲ್ದಾರುಗಳಾದ ಗೋವಿಂದರಾಜು, ನಂದೀಶ್ ಹಾಗೂ ವರದರಾಜು, ಜಿಲ್ಲಾಧಿಕಾರಿ ಕಛೇರಿಯ ಚುನಾವಣಾ ಶಿರಸ್ತೇದಾರ್ ನಾಗಭೂಷಣ್, ಮತ್ತಿತರರು ಹಾಜರಿದ್ದರು.