ಚಿಕ್ಕನಾಯಕನಹಳ್ಳಿ:

      ಸರ್ಕಾರಿ ಜಮೀನು ಒತ್ತುವರಿ, ನಕಲಿ ದಾಖಲೆ ಸೃಷ್ಠಿಸಿ ಭೂಕಬಳಿಕೆ ಮಾಡಿರುವವರ ವಿರುದ್ದ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕೆಂಬ ಸುತ್ತೋಲೆ ಜ.20 ರಂದು ಹೊರಡಿಸಿರುವ ಬೆನ್ನಲ್ಲೆ ತಾಲ್ಲೂಕಿನಲ್ಲೊಂದು ಅತಿಕ್ರಮಣ ಹಾಗೂ ಅಕ್ರಮ ಖಾತೆಯ ಪ್ರಕರಣ ಬೆಳಕಿಗೆ ಬಂದಿದೆ.

      ತಾಲ್ಲೂಕಿನ ಕಂದಿಕೆರೆ ಹೋಬಳಿ ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಸಾಲ್ಕಟ್ಟೆ ಗ್ರಾಮದ ಹರಿಜನ ಕಾಲೋನಿಯ ಪಕ್ಕದಲ್ಲಿರುವ ಸ.ನಂ. 104 ರಲ್ಲಿ 1.35 ಎಕರೆ ಸರ್ಕಾರಿ ಜಮೀನಿದೆ. ಈಜಾಗದಲ್ಲಿ ಒಂದು ಕಿರಿಯ ಪ್ರಾಥಮಿಕ ಶಾಲೆ, ಅಂಬೇಡ್ಕರ್ ಭವನ ಹಾಗೂ ಅಂಗನವಾಡಿ ಕಟ್ಟಡವಿದೆ.

       ಉಳಿದ ಸರ್ಕಾರಿ ಜಾಗದಲ್ಲಿ ಕಾಲೋನಿಯ ಸುಮಾರು 60ಕ್ಕೂ ಹೆಚ್ಚಿನ ಮಂದಿ ಹುಲ್ಲಿನ ಬಣವೆ, ತಿಪ್ಪೆಗುಂಡಿ ಹಾಗೂ ಕೊಪ್ಪಲುಗಳನ್ನು ಮಾಡಿಕೊಂಡಿದ್ದರು. ಆದರೆ ಮಳೆಗಾಲದಲ್ಲಿ ಮಳೆ ಬಂದಾಗ ಚರಂಡಿ ನೀರು ಶಾಲೆಯೆಡೆಯೇ ಹರಿದು ಬರುತ್ತಿತ್ತು, ಜೊತೆಗೆ ಸುತ್ತಮುತ್ತಲಿನ ಕಸಕಡ್ಡಿಗಳು ಗಾಳಿ ಬಂದಾಗ ಶಾಲೆಯ ಒಳಕ್ಕೆ ಬಂದು ಬೀಳುತ್ತಿತ್ತು. ಇದರಿಂದ ಮಕ್ಕಳ ಶಿಕ್ಷಣಕ್ಕೆ ಸಾಕಷ್ಟು ತೊಡಕುಂಟಾಗುತ್ತಿತ್ತು. ಇದಲ್ಲದೆ ಶಾಲೆಗೆ ಆಟದ ಮೈದಾನ ಅವಶ್ಯಕತೆಯಿದ್ದ ಕಾರಣ ಕಾಲೋನಿಯರೆಲ್ಲರೂ ಸೇರಿ ಕೊಪ್ಪಲು, ತಿಪ್ಪೆಗಳನ್ನು ಹಾಕಿಕೊಂಡಿರುವ ಎಲ್ಲರೂ ತೆರವುಗೊಳಿಸಿ ಶಾಲಾ ಮೈದಾನಕ್ಕೆ ಬಿಟ್ಟುಕೊಡಬೇಕೆಂಬ ಎಲ್ಲರ ತೀರ್ಮಾನಕ್ಕೆ ಒಪ್ಪಿ ಎಲ್ಲರೂ ತೆರವುಗೊಳಿಸಿದರು. ಆದರೆ ಅದೇ ಕಾಲೋನಿವಾಸಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಹಾಲಿ ಸದಸ್ಯರು ಮತ್ತು ಅವರ ಭಾವಮೈದುನ ಇಬ್ಬರು ಮಾತ್ರ ತಮ್ಮ ಒತ್ತುವರಿ ತೆರವುಗೊಳಿಸದೆ ಹಾಗೆ ಉಳಿಸಿದ್ದರು.

      ಇದನ್ನು ಪ್ರಶ್ನಿಸಿದ ಊರಿನವಿವರಿಗೆ ಹಾಲಿ ಸದಸ್ಯರು ಧಮಿಕಿ ಹಾಕಿದ್ದಾರೆ.ತಮಗೆ ಸಚಿವರ ಬೆಂಬಲವಿದೆ ಎಂದು ಎಲ್ಲರನ್ನೂ ಹೆದರಿಸಿ ಕಳುಹಿಸಿದ್ದಾರೆ. ಹಾಲಿ ಸದಸ್ಯ ತಾವು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ 30*40 ಅಳತೆಯ ಎರಡು ಜಾಗಗಳನ್ನು ತಮ್ಮ ಹೆಸರಿಗೆ ಹಾಗೂ ತಮ್ಮ ಭಾವಮೈದುನನ ಹೆಸರಿಗೆ ಅಕ್ರಮಖಾತೆ ಮಾಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

       ಈ ಬಗ್ಗೆ ಪಂಚಾಯಿತಿಗೆ , ತಹಸೀಲ್ದಾರ್‍ರಿಗೆ ಗ್ರಾಮಸ್ಥರೆಲ್ಲರೂ ಸಹಿ ಹಾಕಿ ದೂರು ನೀಡಿದಾಗ ಹೊಸದಾಗಿ ಸರ್ವೆ ಮಾಡಿ ಇದು ಸಂಪೂರ್ಣ ಸರಕಾರಿ ಜಾಗವೆಂದು ಧೃಡಪಟ್ಟಿದ್ದರೂ ಅಕ್ರಮ ಖಾತೆಯನ್ನು ರದ್ದುಗೊಳಿಸಿಲ್ಲ. ಸರ್ಕಾರಿ ಅಧಿಕಾರಿಗಳೂ ಅಕ್ರಮ ಖಾತೆಯಾಗಲು ಸಹಕರಿಸಿರುವ ಕಾರಣ ತಮ್ಮ ಹುಳುಕುಗಳೂಸಹ ಬೆಳಕಿಗೆ ಬರುತ್ತದೆ ಎಂಬ ಕಾರಣಕ್ಕೆ ಜಾಣಮೌನವಹಿಸಿದ್ದಾರೆ. ಕಾನೂನು ಸಚಿವರ ಕ್ಷೇತ್ರದಲ್ಲಿಯೇ ಕಾನೂನು ಬಾಹಿರ ಕೃತ್ಯಗಳು ನಡೆದಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಾತ್ರಕ್ಕೆ ಸರ್ಕಾರಿ ಜಾಗವನ್ನು ಅಕ್ರಮವಾಗಿ ಖಾತೆ ಮಾಡಲು ಅವಕಾಶವಿದಯೇ ಎಂದು ಗ್ರಾಮಸ್ಥರು ಪ್ರಶ್ನಿಸಿ, ಇದು ಅಕ್ರಮವೇ ಆಗಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

      ಸರ್ಕಾರಿ ಜಾಗ ಶಾಲೆಯ ಆಟದ ಮೈದಾನಕ್ಕೆ ಅನುಕೂಲವಾಗಲಿ ಎಂದು ಎಲ್ಲರೂ ಒಮ್ಮತದಿಂದ ತಮ್ಮ ಒತ್ತುವರಿಯನ್ನು ತೆರವುಗೊಳಿಸಿದ್ದರೂ, ನನಗೆ ಅಧಿಕಾರಿಗಳ ಹಾಗೂ ಶಾಸಕರ ಬೆಂಬಲವಿದೆ ಎಂಬ ಕಾರಣಕ್ಕೆ ಹಾಲಿ ಗ್ರಾಮ ಪಂಚಾಯಿತಿ ಸದಸ್ಯ ತನ್ನ ಒತ್ತುವರಿ ತೆರವುಗೊಳಿಸದೆ ಅಕ್ರಮ ಖಾತೆ ಮಾಡಿಸಿಕೊಂಡು ಜಪ್ಪಯ್ಯ ಎಂದು ಪಟ್ಟುಹಿಡಿದು ಕೂತಿದ್ದಾರೆ. ಈ ಇಬ್ಬರ ಒತ್ತುವರಿ ಹಾಗೂ ಅಕ್ರಮ ಖಾತೆ ರದ್ದುಗೊಳಿಸಿ ತಪ್ಪಿತಸ್ಥರನ್ನು ಶಿಕ್ಷಿಸದಿದ್ದರೆ ನಾವುಸಹ ಉಳಿದ ಜಾಗದಲ್ಲಿ ಮತ್ತೆ ಕೊಟ್ಟಿಗೆ, ಕೊಪ್ಪಲುಗಳನ್ನು ಹಾಕಿಕೊಳ್ಳುತ್ತೇವೆ ಎಂದು ಅಲ್ಲಿನ ಕಾಲೋನಿ ನಿವಾಸಿಗಳು ಹೇಳಿಕೆಯಿತ್ತಿದ್ದಾರೆ.

      ಈಗ ಸರ್ಕಾರ ಹೊಸ ಸುತೋಲೆಯನ್ನು ಹೊರಡಿಸಿ ಎಲ್ಲಿ ಸರ್ಕಾರಿ ಜಮೀನು ಕಬಳಿಕೆಯಾಗಿದೆಯೂ ಅದೆಲ್ಲವನ್ನು ನಿಧ್ರ್ಯಾಕ್ಷಣ್ಯವಾಗಿ ಕ್ರಮ ಜರುಗಿಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮಕ್ಕೆ ಆದೇಶಿಸಲಾಗಿದೆ. ಈಗಲಾದರೂ ಸಾಲ್ಕ್ಟಟ್ಟೆ ಕಾಲೋನಿಯಲ್ಲಿ ನಡೆದಿರುವ ಭೂ ಅಕ್ರಮದ ಮೇಲೆ ಸೂಕ್ತ ಕ್ರಮ ಜರುಗಿಸಬೇಕು, ಇಲ್ಲವೇ ಎಲ್ಲರೂ ಸೇರಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದೆಂದು ಗ್ರಾಮಸ್ಥರು ಹೇಳಿಕೆಯಿತ್ತಿದ್ದಾರೆ.
 

(Visited 28 times, 1 visits today)