ತುಮಕೂರು :
ಎತ್ತಿನಹೊಳೆ ಯೋಜನೆಯ ಬಫರ್ ಡ್ಯಾಂ ನಿರ್ಮಾಣ ವಿರೋಧಿಸಿ ಸೋಮವಾರ ಎತ್ತಿನಹೊಳೆ ಯೋಜನೆಯ ರೈತ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಈ ಯೋಜನೆಯಡಿ ಕೊರಟಗೆರೆ ತಾಲ್ಲೂಕು ಭೈರಗೊಂಡ್ಲು ಬಳಿ ಬಫರ್ ಡ್ಯಾಂ ನಿರ್ಮಾಣದ ಬದಲು ಪರ್ಯಾಯ ಕ್ರಮ ತೆಗೆದುಕೊಳ್ಳು ವಂತೆ ಸಲಹೆ ಕೊಟ್ಟಿದ್ದರೂ, ಅಧಿಕಾರಿಗಳು ನಿರ್ಲಕ್ಷ ಮಾಡಿ ಬಫರ್ ಡ್ಯಾಂ ನಿರ್ಮಾಣ ಮಾಡಲು ಹೊರಟಿರುವುದು ಖಂಡನಾರ್ಹ, ಈ ನಿರ್ಮಾಣ ನಿಲ್ಲಿಸಬೇಕು ಎಂದು ರೈತರು ಒತ್ತಾಯಿಸಿದರು.
ಬಫರ್ ಡ್ಯಾಂಗಾಗಿ ನಾವು ನಮ್ಮ ಹಳ್ಳಿಗಳನ್ನು ಖಾಲಿ ಮಾಡಿ ಹೋಗುವುದಿಲ್ಲ. ನಮ್ಮ ಹಿರಿಯರು ಬಾಳಿಬದುಕಿದ ನೆಲವನ್ನು ಮಾರಾಟ ಮಾಡುವುದಿಲ್ಲ. ಭೈರಗೊಂಡ್ಲು ಬಫರ್ಡ್ಯಾಂ ಕಟ್ಟಲು ಬಿಡುವುದಿಲ್ಲ ಎಂದು ಪ್ರತಿಭಟನಾ ರೈತರು ಹೇಳಿದರು.
ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಬಫರ್ ಡ್ಯಾಂ ನಿರ್ಮಾಣ ನಿಲ್ಲಿಸಬೇಕು ಎಂದು ಒತ್ತಾಯ ಮಾಡಿದರು.ಎತ್ತಿನಹೊಳೆ ಯೋಜನೆಯ ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಶಿವರಾಮಯ್ಯ, ಉಪಾಧ್ಯಕ್ಷ ವೆಂಕಟೇಶಮೂರ್ತಿ, ಪ್ರಧಾನ ಕಾರ್ಯದರ್ಶಿಚಿಕ್ಕತಿಮ್ಮಯ್ಯ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.