ಕೊರಟಗೆರೆ :
ತಾಲ್ಲೂಕಿನ ಸರ್ಕಾರಿ ಗೋಮಾಳ, ಗುಂಡು ತೋಪು, ರಾಜಕಾಲುವೆ ಹಾಗೂ ಕೆರೆ ಒತ್ತುವರಿ ತೆರವುಗೊಳಿಸು ವಂತೆ ಒತ್ತಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಫೆ.3 ರಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಮಿಕೊಂಡಿರುವುದಾಗಿ ಸಂಘದ ಅಧ್ಯಕ್ಷ ಸಿದ್ದರಾಜು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ ಗೋಮಾಳ, ಗುಂಡು ತೋಪು ಕೆರೆ ಒತ್ತುವರಿಯ ಬಗ್ಗೆ ರೈತ ಸಂಘ ಮಾಹಿತಿ ನೀಡಿ ತೆರವು ಗೊಳಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಸಹ ತಾಲ್ಲೂಕು ಅಧಿಕಾರಿಗಳು ಯಾವುದೇ ಕ್ರಮ ವಹಿಸುತ್ತಿಲ್ಲ. ಸರ್ಕಾರಿ ಭೂಮಿ ಖಾಸಗಿ ಬಲಿಷ್ಟ ವ್ಯಕ್ತಿಗಳ ಪಾಲಾಗುತ್ತಿದ್ದರೂ ಅಧಿಕಾರಿಗಳು ಕಂಡು ಕಾಣದಂತೆ ಕುಳಿತಿದ್ದಾರೆ.
ಎತ್ತಿನಹೊಳೆ ಯೋಜನೆ ಅವೈಜ್ಞಾನಿಕವಾಗಿದ್ದು, ರೈತರಿಗೆ ಅಲ್ಪಸ್ವಲ್ಪ ಹಣ ನೀಡಿ ಕಾಲುವೆ ಮಾಡುತ್ತಿದ್ದಾರೆ. ಬೆಸ್ಕಾಂ ಇಲಾಖೆ ಅಧೀಕಾರಿಗಳು ರೈತರಿಗೆ ಸರಿಯಾದ ರೀತಿಯಲ್ಲಿ ಸ್ಪಂಧಿಸುತ್ತಿಲ್ಲ. ಈ ಎಲ್ಲಾ ಕಾರಣಗಳನ್ನು ಮುಂದಿಟ್ಟುಕೊಂಡು ಫೆ.3 ರಂದು ಪಟ್ಟಣದ ಕೆಎಸ್‍ಆರ್ಟಿಸಿ ಬಸ್ ನಿಲ್ದಾಣದಿಂದ ಮುಖ್ಯ ರಸ್ತೆಯಲ್ಲಿ ಬೃಹತ್ ಶಾಂತಿಯುತ ಮೆರವಣಿಗೆ ನಡೆಸಿ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಪುಟ್ಟರಾಜು, ರುದ್ರೇಶ್, ಲಕ್ಷ್ಮನಾಯ್ಕ, ವೆಂಕಟೇಶ್, ಈರಣ್ಣ, ಮಲ್ಲೇಶ, ಶಿವರಾಜು, ಶಿವಕುಮಾರ, ಪ್ರಸನ್ನಕುಮಾರ್, ನಂಜುಡಯ್ಯ, ಚೇತನ್ ಕುಮಾರ್, ರವಿಕುಮಾರ್ ಇತರರು ಇದ್ದರು.