ತುಮಕೂರು :
ಮನೆ ಬಾಡಿಗೆ ಭತ್ಯೆ, ಪ್ರಯಾಣ ಭ್ಯತೆ ನಿಲ್ಲಿಸಿರುವುದನ್ನು ಖಂಡಿಸಿ, ಕನಿಷ್ಠ ವೇತನ ಬಾಕಿ ನೀಡುವುದು, ಪ್ರೋತ್ಸಾಹಧನ ಮುಂದುವರೆಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಫಿಟ್‍ವೆಲ್ ಟೂಲ್ಸ್ ಅಂಡ್ ಫೋರ್ಜಿಂಗ್ ಕಾರ್ಮಿಕರ ಸಂಘದ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಅಂತರಸನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯ ಮುಂದೆ ಪ್ರತಿಭಟನೆ ನಡೆಸಿದರು.
ಕಾರ್ಮಿಕರಿಗೆ ನ್ಯಾಯಯುತವಾಗಿ ಸಿಗಬೇಕಾದ ರಜೆಗಳನ್ನು ನೀಡದೆ ಕಿರುಕುಳ ನೀಡಲಾಗುತ್ತಿದೆ. ಉತ್ಪಾದನಾ ಆಧಾರದಲ್ಲಿ ಕೊಡುತ್ತಿದ್ದ ಪ್ರೋತ್ಸಾಹ ಧನವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದು ಅದನ್ನು ಮುಂದುವರಿಸಬೇಕು. 2108, 2019ನೇ ಸಾಲಿನ ವಾರ್ಷಿಕ ಬೋನಸ್ 20ರಷ್ಟು ನೀಡಬೇಕು. ಎಕ್ಸ್‍ಗ್ರೇಸಿಯಾ ಶೇ.5ರಷ್ಟು ನೀಡಬೇಕು, 200 ಮಂದಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಎಲ್ಲಾ ಕಾರ್ಮಿಕರಿಗೂ ನೇಮಕಾತಿ ಆದೇಶ ನಿಡಬೇಕು. ಸೇವಾ ಭದ್ರತೆ ಒದಗಿಸಬೇಕು.ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನಮ್ಮ ಬೇಡಿಕೆಗಳ ಕುರಿತು ಫಿಟ್‍ವೆಲ್ ಟೂಲ್ಸ್ ಅಂಡ್ ಫೋರ್ಜಿಂಗ್ ಆಡಳಿತ ಮಂಡಳಿಯವರ ಗಮನಕ್ಕೆ ತಂದಿದೆ. ಆದರೂ ಇದರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸಿಲ್ಲ.
ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದ 15 ಮಂದಿ ಕಾರ್ಮಿಕರನ್ನು ಕಾನೂನುಬಾಹಿರವಾಗಿ ತೆಗೆದುಹಾಕಿರುವುದು ಖಂಡನೀಯ. ಅವರನ್ನು ಕೂಡಲೇ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಸುಜಿತ್ ನಾಯಕ್ ಮಾತನಾಡಿ, ನವೆಂಬರ್ 29ರಂದು ನಡೆದ ಸಭೆಯಲ್ಲಿ ಆಡಳಿತ ಮಂಡಳಿ ನಿರ್ದೇಶಕ ಅನಂತ್, ಸೆನ್ಸಾರ್ ಕಂಪನಿಯ ಮಧುಕುಮಾರ್, ರಾಘವೇಂದ್ರ ಉಪಸ್ಥಿತರಿದ್ದರು. ಆಗ ಸಿಐಟಿಯು ಮುಖಂಡರಾದ ಮೀನಾಕ್ಷಿ ಸುಂದರಂ, ಎನ್.ಕೆ.ಸುಬ್ರಮಣ್ಯ ಮತ್ತು ಸುಜಿತ್ ನಾಯಕ್, 12 ಬೇಡಿಕೆಗಳ ಪಟ್ಟಿಯನ್ನು ನೀಡಿದಾಗ, ಸಮಸ್ಯೆಗಳನ್ನು ಬಗೆಹರಿಸುವುದಾಗಿ ಮೌಖಿಕವಾಗಿ ಭರವಸೆ ನೀಡಿದ್ದಿರಿ. ಆದರೆ ಇದುವರೆಗೂ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನವರಿ 5, 2020ರಂದು ಮುಷ್ಕರದ ನೋಟಿಸ್ ನೀಡಿತು. ಆದರೂ ಆಡಳಿತ ಮಂಡಳಿ ಕಿವಿಗೆ ಹಾಕಿಕೊಳ್ಳಲಿಲ್ಲ. ಹೀಗಾಗಿ ಮೊದಲ ಹಂತವಾಗಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ವ್ಯಕ್ತಪಡಿಸಿದೆವು. ಎರಡನೇ ಹಂತದಲ್ಲಿ ಕಾರ್ಖಾನೆಯ ಮುಂದೆ ಘೋಷಣೆ ಕೂಗಿ ಕಪ್ಪುಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾಗಿದ್ದೇವೆ. ಆದರೂ ಆಡಳಿತ ಮಂಡಳಿ ನಮ್ಮ ಬೇಡಿಕೆಗಳಿಗೆ ಸ್ಪಂದಿಸಲಿಲ್ಲ. ಈ ಹಿನ್ನೆಲೆಯಲ್ಲಿ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಬೇಕಾದ ಅನಿವಾರ್ಯತೆ ಬಂದಿದೆ ಎಂದು ಸುಜಿತ್ ಹೇಳಿದರು.
ಆಡಳಿತ ಮಂಡಳಿಯ ಬೇಜವಾಬ್ದಾರಿತನ, ಮತ್ತು ನಿರ್ಲಕ್ಷ್ಯತನದಿಂದ ಕಾರ್ಮಿಕರ ಹಿತಕ್ಕೆ ಧಕ್ಕೆಯಾಗಿದೆ. ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಮಿಕ ಮುಖಂಡರನ್ನು ಮಾತುಕತೆಗೆ ಆಹ್ವಾನ ನೀಡಬೇಕು. ಬೇಡಿಕೆಗಳ ಈಡೇರಿಕೆಗೆ ಆಡಳಿತ ಮಂಡಳಿ ಮುಂದಾಗಬೇಕು.
ಇಲ್ಲದೆ ಹೋದರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಫಿಟ್‍ವೆಲ್ ಟೂಲ್ಸ್ ಅಂಡ್ ಫೋರ್ಜಿಂಗ್ ಕಾರ್ಮಿಕರ ಸಂಘದ ಅಧ್ಯಕ್ಷ ವೈ.ಎನ್. ಮುತ್ತುರಾಜು, ಖಜಾಂಚಿ ಎಚ್.ಆರ್. ಸಂಪತ್‍ಕುಮಾರ್, ಮುಖಂಡರಾದ ರಾಮಕೃಷ್ಣಯ್ಯ, ಶಶಿಧರ, ಚಂದ್ರಶೇಖರ್, ನರಸಿಂಹಮೂರ್ತಿ, ಯೋಗೀಶ್, ಪಾಂಡುಕುಮಾರ್, ರಂಗನಾಥ್, ವೈ.ಎನ್. ಹರೀಶ್ ಮೊದಲಾದವರು ಹಾಜರಿದ್ದರು.