ತುಮಕೂರು :
ಅಧಿಕಾರಿಗಳ ಕಿರುಕುಳಕ್ಕೆ ನೊಂದ ಕೆಎಸ್ಆರ್ಟಿಸಿ ಚಾಲಕ ಅಧಿಕಾರಿಗಳೆದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ ಪ್ರಕರಣ ನಗರದ ಕೆಎಸ್ಆರ್ಟಿಸಿ ಕಚೇರಿಯಲ್ಲಿ ನಡೆದಿದೆ. ವಿಷ ಸೇವಿಸಿದ ಚಾಲಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಷ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಾಲಕ ಮಹಮದ್ ಕಮ್ಮಾರ್, ವಿಷ ಸೇವನೆಗೆ ಮೊದಲು ಅಧಿಕಾರಿಗಳ ಕಿರುಕುಳದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.ಗುಬ್ಬಿ ತಾಲ್ಲೂಕು ಕೆ.ಜಿ.ಟೆಂಪಲ್ ಗ್ರಾಮದ ಮಹಮದ್ ಕಮ್ಮಾರ್ ಕೆಎಸ್ಆರ್ಟಿಸಿಯಲ್ಲಿ ಚಾಲಕರಾಗಿ ಸೇವೆಯಲ್ಲಿದ್ದಾರೆ. ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ರಜೆ ಕೋರಿದ್ದಕ್ಕೆ ಅಧಿಕಾರಿಗಳು ರಜೆ ನಿರಾಕರಿಸಿದ್ದರು ಎನ್ನಲಾಗಿದೆ.
ಇದರ ಜೊತೆ ಅಧಿಕಾರಿಗಳ ಕಿರುಕುಳ ನೀಡುತ್ತಿದ್ದರೆಂದು ಆರೋಪ ಮಾಡಿ ಪತ್ರದಲ್ಲಿ ವಿವರಿಸಿದ್ದಾರೆ. ಮಂಗಳವಾರ ಮಧ್ಯಾಹ್ನ ಕೆಎಸ್ಆರ್ಟಿಸಿ ಕಚೇರಿಯಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್ ಎದುರೇ ಮಹಮದ್ಕಮ್ಮಾರ್ ಕ್ರಿಮಿನಾಶಕ ದ್ರಾವಣ ಕುಡಿದು ಆತ್ಮಹತ್ಯೆಗೆ ಪ್ರಯತ್ನ ಮಾಡಿದರು. ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ಮಹಮದ್ ಕಮ್ಮಾರ್ ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದರು. ಚಿಕಿತ್ಸೆ ನಂತರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜಿಲ್ಲಾ ಆಸ್ಪತ್ರೆ ಶಸ್ತ್ರಚಿಕಿತ್ಸಕ ಡಾ. ಟಿ.ವೀರಭದ್ರಯ್ಯ ಅವರು ಮಹಮದ್ ಕಮ್ಮಾರ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಬೆಳೆಗೆ ಸಿಂಪಡಿಸುವ ಆರ್ಗನೋ ಪಾಸ್ಪರಸ್ ಎಂಬ ಕ್ರಿಮಿ ನಾಶಕ ದ್ರಾವಣವನ್ನು ಸೇವಿಸಿದ್ದಾರೆ. ಚಿಕಿತ್ಸೆ ನೀಡಿ, 24 ಗಂಟೆಗಳ ಆರೋಗ್ಯ ನಿಗಾವಹಿಸಲಾಗಿದೆ ಎಂದು ಡಾ. ವೀರಭದ್ರಯ್ಯ ಹೇಳಿದರು.ಈ ಸಂಬಂಧ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ತನಿಖೆಗೆ ಒತ್ತಾಯ:
ಚಾಲಕ ಮಹಮದ್ ಕಮ್ಮಾರ್ ವಿಷ ಸೇವನೆಗೆ ಕೆಎಸ್ಆರ್ಟಿಸಿಯ ಹಿರಿಯ ಅಧಿಕಾರಿಗಳ ಕಿರುಕುಳವೇ ಕಾರಣ. ಸಂಸ್ಥೆಯಲ್ಲಿ ಸಿಬ್ಬಂದಿಗಳಿಗೆ ಈ ರೀತಿಯ ಕಿರುಕುಳ ನೀಡುವ ಪ್ರಕರಣಗಳು ನಡೆಯುತ್ತಿವೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಸಂಘಟನೆ ಸಿಐಟಿಯು ಒತ್ತಾಯಿಸಿದೆ.
ಬೆಳೆಗೆ ಸಿಂಪಡಿಸುವ ಆರ್ಗನೋ ಪಾಸ್ಪರಸ್ ಎಂಬ ಕ್ರಿಮಿ ನಾಶಕ ದ್ರಾವಣ ಸೇವಿಸಿದ್ದಾರೆ. ಚಿಕಿತ್ಸೆ ನೀಡಿ, 24 ಗಂಟೆಗಳ ಆರೋಗ್ಯ ನಿಗಾವಹಿಸಲಾಗಿದೆ.
-ಡಾ. ವೀರಭದ್ರಯ್ಯ, ಜಿಲ್ಲಾ ಶಸ್ತ್ರಚಿಕಿತ್ಸಕರು.