ಮಧುಗಿರಿ:
ಸ್ಪರ್ಧೆಗಳು ಮಕ್ಕಳ ಜ್ಞಾನ ವಿಕಾಸಕ್ಕೆ ಮತ್ತು ಸುಪ್ತ ಪ್ರತಿಭೆ ಹೊರ ಸೂಸಲು ಉತ್ತಮ ವೇದಿಕೆ ಎಂದು ಹಿರಿಯ ಸಾಹಿತಿ ಪ್ರೊ.ಮ.ಲ.ನರಸಿಂಹಮೂರ್ತಿ ತಿಳಿಸಿದರು.
ಪಟ್ಟಣದ ನಿವೇದಿತಾ ಪಬ್ಲಿಕ್ ಶಾಲಾ ಆವರಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕ ಆಯೋಜಿಸಿದ್ದ ಭಗವದ್ಗೀತಾ ಕಂಠಪಾಠ ಸ್ಪರ್ಧೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಭಗವದ್ಗೀತೆ ಇಡೀ ಮಾನವ ಕುಲಕೋಟಿಗೆ ಮಾರ್ಗದರ್ಶನ, ಅನುಕಂಪ ಮತ್ತು ಪ್ರೀತಿ ತೋರುವುದೇ ನಿಜವಾದ ಧರ್ಮ ಎಂದು ಸಾರುತ್ತದೆ ಎಂದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ ಮಾತನಾಡಿ ಕನ್ನಡ ರಾಜ್ಯೋತ್ಸವ ನವಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೆ ನಿರಂತರವಾಗಿ ನಡೆಯುವ ನಿತ್ಯೋತ್ಸವವಾಗಬೇಕು, ಈ ನಿಟ್ಟಿನಲ್ಲಿ ಮಹಿಳಾ ಘಟಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ವಾರಕ್ಕೊಮ್ಮೆ ಶಾಲಾ ಕಾಲೇಜುಗಳಲ್ಲಿ ನಾಡುನುಡಿಗೆ ಸಂಬಂಧಿಸಿದ ವಿವಿಧ ಸ್ಪರ್ಧೆ ಹಾಗು ಉಪನ್ಯಾಸಗಳನ್ನು ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ತಾಲ್ಲೂಕು ಕ.ಸಾ.ಪ ಮಹಿಳಾ ಘಟಕದ ಅಧ್ಯಕ್ಷೆ ಶಾಂತಮ್ಮ ಮಾತನಾಡಿ ಕನ್ನಡ ಸಾಹಿತ್ಯಕ್ಕೆ ಎರಡು ಸಾವಿರ ವರ್ಷಕ್ಕೂ ಮಿಗಿಲಾದ ಇತತಿಹಾಸವಿದೆ, ಕನ್ನಡ ಶಿಕ್ಷಣ ಮಾಧ್ಯಮ ವಾಗಲಿ, ಕನ್ನಡದಲ್ಲಿ ಶಿಕ್ಷಣ ಪಡೆದರೆ ಉದ್ಯೋಗ ಸಿಗುತ್ತದೆ ಎಂಬ ಭರವಸೆ ಸಿಕ್ಕರೆ ಕನ್ನಡ ತಾನಾಗಿಯೇ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಬೇಕು ಎಂದರು.
ಪತ್ರಕರ್ತ ಬಂಡಿಚೌಡಯ್ಯ, ಸಂಗೀತ ಶಿಕ್ಷಕಿ ರಮಾಮಣಿ, ನಿವೇದಿತಾ ಶಾಲೆಯ ಮುಖ್ಯಸ್ಥೆ ಲತಾಉಮೇಶ್, ಶಿಕ್ಷಕಿ ಪ್ರಿಯಾಂಕ, ಸಮಾಜ ಸೇವಕಿ ಗಾಯತ್ರಿ ನಾರಾಯಣ್ ಮಾತನಾಡಿದರು. ತಾಲ್ಲೂಕು ಕಸಾಪ ಮಹಿಳಾ ಘಟಕದ ಪದಾಧಿಕಾರಿಗಳಾದ ಸಹನಾ ನಾಗೇಶ್, ಶಕುಂತಲಾ ಗುಂಡುರಾವ್, ವೀಣಾಶ್ರೀನಿವಾಸ್, ಸುಶೀಲಾ, ಲಕ್ಷ್ಮಿ, ಶಾರದರಾಮಮಚಂದ್ರ ಮುಂತಾದವರು ಉಪಸ್ಥಿತರಿದ್ದರು. ಸುಶೀಲಾ ಪ್ರಾರ್ಥಿಸಿದರು, ಪ್ರಿಯಾಂಕ ಸ್ವಾಗತಿಸಿದರು, ಗಾಯತ್ರಿ ನಾರಾಯಣ್ ವಂದಿಸಿದರು.