ತುಮಕೂರು:

      ತುಮಕೂರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಸಲಾಗುತ್ತಿರುವ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ ಎಸ್.ಎಸ್.ಎಲ್.ಸಿ./ಪಿ.ಯುಸಿ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿ ಶನಿವಾರ, ಭಾನುವಾರ ವಿಶೇಷ ಭೋದನಾ ತರಗತಿಗಳನ್ನು ನಡೆಸಿ ಶೇ. 90ರಷ್ಟು ಫಲಿತಾಂಶ ಹೆಚ್ಚಿಸಲು ಸಮಾಜ ಕಲ್ಯಾಣ ಇಲಾಖೆ ಆಯುಕ್ತರಾದ ಆರ್.ಎಸ್. ಪೆದ್ದಪ್ಪಯ್ಯ ತಿಳಿಸಿದರು.

      ತುಮಕೂರಿನ ಬಾಲಭವನದಲ್ಲಿಂದು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಅನುಷ್ಠಾನಗೊಳಿಸುತ್ತಿರುವ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಸಮಾಜಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯಗಳು ಅನ್ನ, ವಸತಿ ನೀಡುವ ಗಂಜಿಕೇಂದ್ರಗಳಾಗದೇ ವಿದ್ಯಾರ್ಥಿಗಳಿಗೆ ಕಠಿಣ ವಿಷಯಗಳಾದ ಗಣಿತ, ವಿಜ್ಞಾನ ಮತ್ತು ಇಂಗ್ಲೀಷ್ ವಿಷಯಗಳ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ತರಬೇತಿ ಕೇಂದ್ರಗಳನ್ನು ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಆಯಾ ವಿದ್ಯಾರ್ಥಿನಿಲಯಗಳ ಮೇಲ್ವೀಚಾರಕರ ನೇತೃತ್ವದಲ್ಲಿ ನಡೆಸಿ ಪ್ರಸಕ್ತ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಫಲಿತಾಂಶ ಕೇವಲ ಪಾಸ್ ಆಗಿ ಶೇ. ಇಷ್ಟು ಫಲಿತಾಂಶ ಬಂದಿದೆ ಎಂದು ಘೋಷಿಸುವ ಬದಲು ನವೋದಯ, ಕಿತ್ತೂರು ರಾಣಿ ಚನ್ನಮ್ಮ ವಸತಿಶಾಲೆಗಳ ಮಾದರಿಯಲ್ಲಿ ಪ್ರಥಮಶ್ರೇಣಿ ಮತ್ತು ಡಿಸ್ಟಿಂಗ್‍ಶನ್‍ನಲ್ಲಿ ತೇರ್ಗಡೆಯಾಗುವಂತೆ ಫಲಿತಾಂಶ ಹೆಚ್ಚಿಸಿ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳು ಸಾಮಾನ್ಯ ವರ್ಗದ ಮಕ್ಕಳೊಂದಿಗೆ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಬೇಕೆಂದು ಅವರು ಸಲಹೆ ನೀಡಿದರು.

      ಜಿಲ್ಲೆಯ ತುಮಕೂರು-1, ಚಿಕ್ಕನಾಯಕನಹಳ್ಳಿ-2, ಗುಬ್ಬಿ-1, ಕುಣಿಗಲ್-1, ಪಾವಗಡ-4, ಮಧುಗಿರಿ-1, ಕೊರಟಗೆರೆ-1, ತುರುವೇಕೆರೆ-1, ಶಿರಾ-3, ತಿಪಟೂರು-1 ತಾಲ್ಲೂಕು ಕೇಂದ್ರಗಳಲ್ಲಿ ಆಯ್ದ ವಿದ್ಯಾರ್ಥಿನಿಲಯಗಳಲ್ಲಿ 40 ವಿದ್ಯಾರ್ಥಿಗಳಿಗೆ ಒಂದರಂತೆ ತರಬೇತಿ ಕೇಂದ್ರಗಳನ್ನು ಎಲ್ಲಾ ಸೌಕರ್ಯಗಳೊಂದಿಗೆ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕೆಲಸವನ್ನು ಸಹಾಯಕ ನಿರ್ದೇಶಕರು ಹಾಗೂ ನಿಲಯದ ಮೇಲ್ವೀಚಾರಕರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಅದೇರೀತಿ 6-9ನೇ ತರಗತಿಯಲ್ಲಿರುವ ಮಕ್ಕಳಿಗೆ ಪರೀಕ್ಷೆ ಸಮೀಪಿಸುತ್ತಿರುವುದರಿಂದ ಯಾವುದೇ ರೀತಿಯಲ್ಲಿ ತರಗತಿಗಳಿಗೆ, ತರಬೇತಿಗೆ ಗೈರುಹಾಜರಾಗದಂತೆ ನೋಡಿಕೊಂಡು ಪರೀಕ್ಷೆಗಳಿಗೆ ಪೂರ್ವಸಿದ್ಧತೆ ಮಾಡಿಕೊಳ್ಳಲು ಓದು-ಬರಹದಲ್ಲಿ ಗಮನ ಹರಿಸುವಂತೆ ವಿದ್ಯಾರ್ಥಿಗಳ ಜೊತೆಗಿದ್ದು ನಿಗಾ ವಹಿಸಬೇಕೆಂದು ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.

      ನಿಲಯದ ಮೇಲ್ವೀಚಾರಕರು ಮಕ್ಕಳಿಗಾಗಿ ನಾನಿದ್ದೇನೆ ನನಗಾಗಿ ಮಕ್ಕಳು ಇಲ್ಲ ಎಂಬ ಮನೋಭಾವನೆಯನ್ನು ರೂಢಿಸಿಕೊಂಡು ತಮ್ಮ ಕರ್ತವ್ಯವನ್ನು ಚಾಚುತಪ್ಪದೇ ಮಾಡಬೇಕು. ನೋಡಲ್ ಅಧಿಕಾರಿಗಳು ಪರೀಕ್ಷಾ ಸಿದ್ಧತೆಯ ಬಗ್ಗೆ ಮೇಲ್ವೀಚಾರಣೆ ನಡೆಸಬೇಕು. ರಾಜ್ಯದ ತುಮಕೂರು ಜಿಲ್ಲೆಗೆ ಪ್ರಥಮ ಬಾರಿಗೆ ಫಲಿತಾಂಶ ಸುಧಾರಣೆ ಯೋಜನೆಯ ಅನುಷ್ಠಾನದ ಬಗ್ಗೆ ಆಯುಕ್ತರು ಸಭೆ ನಡೆಸಿ ಮಾರ್ಗದರ್ಶನ ಮಾಡಿದರು. ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಈ ಯೋಜನೆಯ ಅನುಷ್ಠಾನಕ್ಕೆ ಕ್ರಮ ಜರುಗಿಸಲಾಗುವುದೆಂದು ಅವರು ಹೇಳಿದರು.

      ತುಮಕೂರು ಜಿಲ್ಲೆಯಲ್ಲಿ 100 ವಿದ್ಯಾರ್ಥಿನಿಲಯಗಳಿದ್ದು, ಎಲ್ಲಾ ವಿದ್ಯಾರ್ಥಿನಿಲಯಗಳಲ್ಲೂ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಫಲಿತಾಂಶ ವೃದ್ಧಿಸುವಲ್ಲಿ ಇಲಾಖೆಯ ಎಲ್ಲಾ ಅಧಿಕಾರಿಗಳು ಸಹಕಾರ ಮತ್ತು ಸಂಯೋಗದೊಂದಿಗೆ ಕಾರ್ಯನಿರ್ವಹಿಸಬೇಕೆಂದು ಅವರು ಸೂಚಿಸಿದರು.
ವಿದ್ಯಾರ್ಥಿನಿಲಯಗಳ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಇಲಾಖೆ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು, ಅನುದಾನವನ್ನು ಸಹ ನೀಡಲಾಗುವುದು ಎಂದು ಭರವಸೆ ನೀಡಿದರು. ವಿದ್ಯಾರ್ಥಿನಿಲಯದಲ್ಲಿ ದೀರ್ಘಗೈರುಹಾಜರಾಗಿರುವ ವಿದ್ಯಾರ್ಥಿಗಳ ಪೂರ್ವಪರ ಮಾಹಿತಿಯನ್ನು ಶಾಲೆಯ ಶಿಕ್ಷಕರಿಂದ ಪಡೆದು ಅವರ ಪೋಷಕರಿಗೆ ಮತ್ತು ಬಾಲಕಿಯರಾಗಿದ್ದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮೇಲ್ವೀಚಾರಕರು ಮಾಹಿತಿ ನೀಡಬೇಕೆಂದರಲ್ಲದೇ ಬಯೋಮೆಟ್ರಿಕ್ ಕಡ್ಡಾಯವಾಗಿ ಜಾರಿಗೊಳಿಸುವಂತೆ ಅವರು ತಿಳಿಸಿದರು.

      ಸಭೆಯಲ್ಲಿ ಜಿಲ್ಲಾ ನೋಡಲ್ ಅಧಿಕಾರಿ ಬಿ.ಟಿ. ಮಂಜುನಾಥ್, ಜಂಟಿ ನಿರ್ದೇಶಕ ಎಚ್.ಎಸ್. ಪ್ರೇಮನಾಥ್ ಹಾಗೂ ಎಲ್ಲಾ ತಾಲ್ಲೂಕುಗಳ ಸಹಾಯಕ ನಿರ್ದೇಶಕರು, ಅಧೀಕ್ಷಕರು, ನಿಲಯದ ಮೇಲ್ವೀಚಾರಕರು ಉಪಸ್ಥಿತರಿದ್ದರು.

(Visited 24 times, 1 visits today)