ತುಮಕೂರು :
ನಗರದ ಶಿರಾಗೇಟ್‍ನ ಐ.ಡಿ.ಎಸ್.ಎಂ.ಟಿ. ಲೇಔಟ್‍ನಲ್ಲಿ ಆಗಿರುವ ಅಕ್ರಮಗಳ ಬಗ್ಗೆ ತುಮಕೂರು ಮಹಾನಗರ ಪಾಲಿಕೆಯ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿಸಮಿತಿ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆದಿದ್ದು, ಇವುಗಳನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ತೀರ್ಮಾನಿಸಲಾಗಿದೆ.
ಸಮಿತಿಯ ಹಿಂದಿನ ಅಧ್ಯಕ್ಷ ಲಕ್ಷ್ಮೀನರಸಿಂಹರಾಜು (3 ನೇ ವಾರ್ಡ್-ಅರಳಿಮರದ ಪಾಳ್ಯ-ಜೆಡಿಎಸ್) ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಏರ್ಪಟ್ಟಿದ್ದ ಸಮಿತಿಯ ಸಭೆಯಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ನಡೆದಿದ್ದು, ಪ್ರತ್ಯೇಕ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
ಐ.ಡಿ.ಎಸ್.ಎಂ.ಟಿ. ಯೋಜನೆಗಾಗಿ 108 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಭೂಸ್ವಾಧೀನಗೊಂಡ ಜಮೀನಿನ ಮಾಲೀಕರಿಂದ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ ಖಾಲಿನಿವೇಶನಗಳನ್ನು ಪರಿಶೀಲಿಸಿ, ಭೂಮಾಲೀಕರಿಗೆ ಹಂಚಿಕೆ ಮಾಡಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಸರೋಜಮ್ಮ ಎಂಬುವವರ ಹೆಸರಿನಲ್ಲಿ 2.38 ಎಕರೆ-ಗುಂಟೆ ಜಮೀನಿದ್ದು, ಅದರಲ್ಲಿ 2.35 ಎಕರೆ-ಗುಂಟೆ ಜಮೀನನ್ನು ಐಡಿಎಸ್‍ಎಂಟಿ ಯೋಜನೆಗೆ ಭೂಸ್ವಾಧಿನಪಡಿಸಿದ್ದು, ಉಳಿದ 0,3 ಗುಂಟೆ ಜಮೀನು ಈ ಲೇಔಟ್ ವ್ಯಾಪ್ತಿಯಲ್ಲಿ ಸೇರಿಕೊಂಡಿದೆ. ಇದನ್ನು ಗುರುತಿಸಿ ಕೊಡುವಂತೆ ಅರ್ಜಿದಾರರು ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಫಲಕಾರಿಯಾಗಿಲ್ಲ ಎಂಬ ಬಗ್ಗೆ ಚರ್ಚೆ ನಡೆದು, ಈ ಬಗ್ಗೆ ತುರ್ತಾಗಿ ಪರಿಶೀಲಿಸಿ ಉಳಿಕೆ ಭೂಮಿಯನ್ನು ಗುರುತಿಸಿಕೊಡುವಂತೆ ನಿರ್ದೇಶಿಸಲಾಯಿತು. ಇದೇ ರೀತಿ ರಾಜಣ್ಣ ಎಂಬುವವರ ತಂದೆಯವರ ಸಮಾಧಿ ಜಾಗವೂ ಈ ಲೇಔಟ್‍ನಲ್ಲಿ ಸೇರಿಹೋಗಿದ್ದು, ಆ ಸಮಾಧಿ ಜಾಗವನ್ನು ಸಂಬಂಧಿಸಿದವರಿಗೆ ಬಿಟ್ಟುಕೊಡಬೇಕೆಂದು ಸೂಚನೆ ನೀಡಲಾಯಿತು.
ಐ.ಡಿ.ಎಸ್.ಎಂ.ಟಿ. ಲೇಔಟ್‍ನಲ್ಲಿ ಹಂಚಿಕೆಯಾದ ನಿವೇಶನಗಳಲ್ಲಿ ಹೆಚ್ಚುವರಿ ಇರುವ ಜಾಗವನ್ನು ಗುರುತಿಸಲು ತುರ್ತಾಗಿ ಸರ್ವೆ ನಡೆಸುವಂತೆ ನಿರ್ದೇಶನ ನೀಡಲಾಯಿತು.