ತುಮಕೂರು  :

      ಬಡವರು, ಜನ ಸಾಮಾನ್ಯರಿಗೆ ಸರಳ ವಿವಾಹವಾಗಲು ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲೆಯ ಮೂರು ದೇಗುಲಗಳಲ್ಲಿ ಏಪ್ರಿಲ್ 26ರಂದು ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ ಎಂದು ಮುಜರಾಯಿ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

       ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ 100 “ಎ” ವರ್ಗದ ಆಯ್ದ ದೇವಾಲಯಗಳಲ್ಲಿ ಜನ ಸಾಮಾನ್ಯರ ಅನುಕೂಲಕ್ಕಾಗಿ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರತಿ ನವ-ಜೋಡಿಗೆ ಅಗತ್ಯತೆಗನುಣವಾಗಿ ವರನಿಗೆ ಹೂವಿನ ಹಾರ, ಪಂಚೆ, ಶರ್ಟ್ ಮತ್ತು ಶಲ್ಯಕ್ಕಾಗಿ 5000 ರೂ.ಗಳನ್ನು ಹಾಗೂ ವಧುವಿಗೆ ಹೂವಿನ ಹಾರ, ಧಾರೆ ಸೀರೆ ಮತ್ತು ರವಿಕೆ ಕಣಕ್ಕಾಗಿ 10,000 ರೂ.ಗಳನ್ನು ಮತ್ತು ವಧುವಿಗೆ ಚಿನ್ನದ ತಾಳಿ, 2 ಚಿನ್ನದ ಗುಂಡು(ಅಂದಾಜು 8 ಗ್ರಾಂ ತೂಕ ಅಂದಾಜು 40,000 ರೂ.ಗಳಲ್ಲಿ) ಒಟ್ಟು 55,000 ರೂ.ಗಳನ್ನು ಉಚಿತವಾಗಿ ನೀಡಲಾಗುವುದು. ಈ ವೆಚ್ಚವನ್ನು ಸಂಬಂಧಿಸಿದ ಮುಜರಾಯಿ ದೇವಾಲಯ ವತಿಯಿಂದ ಭರಿಸಲಾಗುವುದು.

       ಸಪ್ತಪದಿ ಪರಿಕಲ್ಪನೆಯಡಿ ನಡೆಯುವ ಈ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ನವ ಜೀವನಕ್ಕೆ ಕಾಲಿಡುವ ಜೋಡಿಗಳಿಗೆ ಕಂದಾಯ ಇಲಾಖೆ ವತಿಯಿಂದ ಆದರ್ಶ ವಿವಾಹ ಯೋಜನೆಯಡಿ ನೀಡುವ 10 ಸಾವಿರ ರೂ. ಬಾಂಡ್ ಸಹ ನೀಡಲಾಗುವುದು. ಜತೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 50 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುವುದು ಎಂದು ಅವರು ಹೇಳಿದರು.

     ಜಿಲ್ಲೆಯ ದೇವರಾಯನದುರ್ಗ, ಹುಲಿಯೂರು, ಎಡೆಯೂರು ದೇವಾಲಯಗಳಲ್ಲಿ ನಡೆಯುವ ಸಾಮಾಹಿಕ ವಿವಾಹಕ್ಕೆ ಆಗಮಿಸುವ ವಧು-ವರರು ಮತ್ತು ಅವರ ಬಂಧುಗಳಿಗೆ ಹಾಗೂ ಸಾರ್ವಜನಿಕರಿಗೆ ಊಟೋಪಚಾರ ಹಾಗೂ ಇತರೆ ಅವಶ್ಯಕ ವ್ಯವಸ್ಥೆಗಳನ್ನು ಮಾಡಲು ತಗಲುವ ವೆಚ್ಚಗಳನ್ನು ಸಂಬಂಧಿಸಿದ ದೇವಾಲಯದ ನಿಧಿಯಿಂದ ಭರಿಸಲಾಗುವುದು ಎಂದರು.

12 ಸಪ್ತಪದಿ ರಥ :

      ರಾಜ್ಯದ ಆಯ್ದ 12 ದೇವಾಲಯಗಳಿಂದ ಫೆ. 13 ರಂದು ಸಪ್ತಪದಿ ರಥ ಹೊರಡಲಿದೆ. ಈ ರಥದಲ್ಲಿ ಸಪ್ತಪದಿ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ, ಕರಪತ್ರಗಳು ಇರುತ್ತವೆ. ಈ ರಥ ಸುತ್ತಮುತ್ತಲಿನ ಹಳ್ಳಿಗಳಿಗೆ ತೆರಳಿ ಈ ಯೋಜನೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಿದೆ ಎಂದರು.

      ಅಕ್ಷಯ ತದಿಗೆಯಂದೇ ಸಾಮೂಹಿಕ ವಿವಾಹ:- ಏ. 26 ರಂದು ಅಕ್ಷಯ ತದಿಗೆ ಇರುವುದರಿಂದ ಒಳ್ಳೆಯ ಮುಹೂರ್ತ ನಿಗಧಿಯಾಗಿದ್ದು, ರಾಜ್ಯಾದ್ಯಂತ ಏಕಕಾಲದಲ್ಲಿ ಎ ದರ್ಜೆಯ 100 ದೇವಾಲಯಗಳಲ್ಲಿ ಈ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

(Visited 19 times, 1 visits today)