ತುಮಕೂರು :

      ಇತಿಹಾಸ ಪ್ರಸಿದ್ದ ಸಿದ್ದಗಂಗಾ ಮಠದಲ್ಲಿ ಫೆ. 12 ರಿಂದ ನಡೆಯಲಿರುವ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ನಗರದಾದ್ಯಂತ ಭಿಕ್ಷಾಟನೆ ನಡೆಸಿದರು.

      ಶ್ರೀಮಠದ ಸಂಪ್ರದಾಯದಂತೆ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಮಠಾಧ್ಯಕ್ಷರು ಭಿಕ್ಷಾಟನೆ ನಡೆಸುವ ಪದ್ದತಿ ನಡೆದು ಬಂದಿದ್ದು, ಲಿಂಗೈಕ್ಯ ಹಿರಿಯ ಶ್ರೀಗಳ ದಾರಿಯಲ್ಲೇ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಸಹ ಶ್ರೀಮಠವನ್ನು ಮುನ್ನಡೆಸುವ ಜತೆಗೆ ಜಾತ್ರಾ ಮಹೋತ್ಸವಕ್ಕೆ ದವಸ ಧಾನ್ಯ ಸಂಗ್ರಹಿಸಲು ನಗರದಾದ್ಯಂತ ಭಿಕ್ಷಾಟನೆ ನಡೆಸಿದರು.

      ಮೊದಲು ಸಿದ್ದಗಂಗಾ ಮಠದಿಂದ ಬಟವಾಡಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಚೇರಿಗೆ ಭಿಕ್ಷಾಟನೆಗೆ ಆಗಮಿಸಿದ ಶ್ರೀಗಳಿಗೆ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾದಪೂಜೆ ನೆರವೇರಿಸಿ ಭಕ್ತಿ ಸಮರ್ಪಿಸಿದರು.

      ಎಪಿಎಂಸಿ ಕಾರ್ಯದರ್ಶಿ ಡಿ.ಆರ್. ಪುಷ್ಪ, ಸಹಾಯಕ ಕಾರ್ಯದರ್ಶಿ ವೈ.ಎಂ. ಲಕ್ಷ್ಮೀಕಾಂತಯ್ಯ ಮತ್ತು ಸಿಬ್ಬಂದಿಗಳಾದ ಶಂಕರ್, ನಂದೀಶ್, ಹನುಮಂತರಾಜು, ಮಾಜಿ ಎಪಿಎಂಸಿ ಅಧ್ಯಕ್ಷ ಪಂಚಾಕ್ಷರಯ್ಯ, ಮಾಜಿ ಸದಸ್ಯ ಧನಿಯಕುಮಾರ್, ದೀಪಕ್, ಕೋರಿ ಮಂಜಣ್ಣ, ನಂಜುಂಡಪ್ಪ ಅವರು ಶ್ರೀಗಳ ಪಾದಪೂಜೆ ನೆರವೇರಿಸಿ ಎಪಿಎಂಸಿ ವತಿಯಿಂದ ಶ್ರೀಮಠದ ಜಾತ್ರಾ ಮಹೋತ್ಸವಕ್ಕೆ ಕಾಣಿಕೆ ನೀಡಿದರು.

      ನಂತರ ಎಪಿಎಂಸಿ ಗ್ರೈನ್ ಮರ್ಚೆಂಟ್ ಅಸೋಸಿಯೇಷನ್ ಕಚೇರಿಗೆ ತೆರಳಿದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರಿಗೆ ಅಸೋಸಿಯೇಷನ್ ಅಧ್ಯಕ್ಷ ಜಿ.ಹೆಚ್. ಪರಮಶಿವಯ್ಯ, ಕಾರ್ಯದರ್ಶಿ ಬೆಟ್ಟಯ್ಯ ಹಾಗೂ ಸದಸ್ಯರುಗಳು 10 ಸಾವಿರ ರೂ. ಚೆಕ್ ನೀಡುವ ಮೂಲಕ ಭಕ್ತಿ ಸಮರ್ಪಿಸಿದರು.
ನಂತರ ಶ್ರೀಗಳು ಎಪಿಎಂಸಿ ಯಾರ್ಡ್‍ನ ಆವರಣದಲ್ಲಿ ಪ್ರತಿಯೊಂದು ಅಂಗಡಿಗಳೂ ತೆರಳಿ ದವಸ ಧಾನ್ಯ ಸ್ವೀಕರಿಸಿದರು.

      ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಪ್ರತಿ ವರ್ಷವೂ ಕೂಡ ಶ್ರೀಮಠದ ಜಾತ್ರಾ ಮಹೋತ್ಸವಕ್ಕೆ ನಗರದ ಜನತೆಯಿಂದ ವಿಶೇಷ ರೀತಿಯಲ್ಲಿ ಸಹಕಾರ ದೊರೆಯುತ್ತಿದೆ. ಎಪಿಎಂಸಿ ಯಾರ್ಡ್, ಮಂಡಿ ಮರ್ಚೆಂಟ್ಸ್ ಸಂಘ ಸೇರಿದಂತೆ ನಗರದ ಅನೇಕ ಬೀದಿಗಳಲ್ಲಿ ಸಂಚರಿಸುತ್ತಾ ಭಿಕ್ಷಾಟನೆ ಮಾಡುವುದು ಮೊದಲಿನಿಂದಲೂ ನಡೆದು ಬಂದಿರುವ ಸಂಪ್ರದಾಯ. ಈ ಸಂಪ್ರದಾಯವನ್ನು ತಾವೂ ಸಹ ಮುಂದುವರೆಸಿಕೊಂಡು ಹೋಗುತ್ತಿದ್ದು, ಭಿಕ್ಷಾಟನೆ ಮೂಲಕ ಜಾತ್ರಾ ಮಹೋತ್ಸವಕ್ಕೆ ನಗರದ ಜನರಿಂದ ದವಸ ಧಾನ್ಯ ಸಂಗ್ರಹಿಸುತ್ತಿರುವುದಾಗಿ ಹೇಳಿದರು.

      ಎಪಿಎಂಸಿ ಯಾರ್ಡ್‍ನಲ್ಲಿ ಭಿಕ್ಷಾಟನೆ ನಡೆಸಿದ ನಂತರ ಶ್ರೀಗಳು ನಗರದ ವಿವಿಧೆಡೆ ಸಂಚರಿಸಿದಾಗ ಜನಸಾಮಾನ್ಯರು ಶ್ರೀಮಠಕ್ಕೆ ದವಸ ಧಾನ್ಯ, ನಗದು ಕೊಡುಗೆ ನೀಡಿ ಭಕ್ತಿ ಸಮರ್ಪಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

(Visited 25 times, 1 visits today)