ತುಮಕೂರು :
2020-21ನೇ ಸಾಲಿನಲ್ಲಿ ಜಿಲ್ಲೆಯಲ್ಲಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಿವಿಧ ಕಾರ್ಯಕ್ರಮಗಳ ಅನುಷ್ಠಾನ ಸೇರಿದಂತೆ ಜಿಲ್ಲೆಯಲ್ಲಿ 34 ಇಲಾಖೆಗಳ ಮೂಲಕ ಕೈಗೊಳ್ಳಲಿರುವ ಪ್ರಸ್ತಾಪಿತ ಕಾರ್ಯಕ್ರಮಗಳು/ ಯೋಜನೆಗಳಿಗೆ ಅಗತ್ಯವಿರುವ 395504.50 ಲಕ್ಷ ರೂ.ಗಳ ಅನುದಾನದ ಕ್ರಿಯಾಯೋಜನೆಗೆ ಜಿಲ್ಲಾ ಯೋಜನಾ ಸಮಿತಿ ಒಪ್ಪಿಗೆ ನೀಡಿತು.
ತುಮಕೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ, ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಆಯಾಯ ಇಲಾಖೆಗಳ ಮೂಲಕ ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ ಕೈಗೊಳ್ಳಬೇಕಾಗಿರುವ ಕಾರ್ಯಕ್ರಮ/ ಯೋಜನೆಗಳು ಹಾಗೂ ಕೈಗೊಂಡಿರುವ ಯೋಜನೆಗಳ ಸಂಪೂರ್ಣ ಅನುಷ್ಟಾನಕ್ಕಾಗಿ ಅಗತ್ಯವಿರುವ ಅನುದಾನಗಳ ಬಗ್ಗೆ ಮಾಹಿತಿ ನೀಡಿದರು.
ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಕ್ಷೇತ್ರ ನೀರು ನಿರ್ವಹಣೆಯ ಕಾರ್ಯಕ್ರಮದಡಿ ತುಂತುರು ನೀರಾವರಿ ಘಟಕಗಳ ವಿತರಣೆಗೆ 2019-20ನೇ ಸಾಲಿನಲ್ಲಿ 1044.87 ಲಕ್ಷ ರೂ. ಆಯವ್ಯಯ ನೀಡಿದ್ದು, 515.97 ಲಕ್ಷ ರೂ. ಖರ್ಚು ಮಾಡಲಾಗಿದೆ. 2020-21ನೇ ಸಾಲಿನಲ್ಲಿ 1600 ಲಕ್ಷ ರೂ.ಗಳ ಅಗತ್ಯವಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಮ್ಮ ಇಲಾಖೆಗೆ ಸಂಬಂಧಿಸಿದ ಬೇಡಿಕೆ ಅನುದಾನದ ಕುರಿತು ಸಭೆಯಲ್ಲಿ ಮಂಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ತುಂತುರು ನೀರಾವರಿಯ ಬಗ್ಗೆ ರೈತರಿಗೆ ಹೆಚ್ಚಿನ ಅರಿವು ಮೂಡಿಸಬೇಕು ಹಾಗೂ ಈ ಬಗ್ಗೆ ರೈತರನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಮಾಡಬೇಕು. ಇಲ್ಲದಿದ್ದಲ್ಲಿ ಅನುದಾನ ಸಂಪೂರ್ಣವಾಗಿ ಸದ್ಭಳಕೆಯಾಗುವುದಿಲ್ಲ. ಕಳೆದ ಬಾರಿ ನೀಡಿರುವ ಅನುದಾನವನ್ನು ಸಂಪೂರ್ಣವಾಗಿ ಖರ್ಚು ಮಾಡದೆ, 2020-21ನೇ ಸಾಲಿನಲ್ಲಿ ಹೆಚ್ಚುವರಿ ಅನುದಾನ ಕೋರಿದರೆ, ಅದಕ್ಕೆ ಸೂಕ್ತ ಕಾರಣ (ಜೆಸ್ಟಿಫಿಕೇಷನ್) ನೀಡಬೇಕು ಎಂದು ಅವರು ತಿಳಿಸಿದರು.
ತೋಟಗಾರಿಕೆ ಇಲಾಖೆಯಡಿ 2020-21ನೇ ಸಾಲಿಗೆ ಪ್ರಸ್ತಾಪಿತ ಕಾರ್ಯಕ್ರಮಗಳಿಗೆ 8484.86 ಲಕ್ಷ ರೂ.ಗಳು ಹಾಗೂ ಹೆಚ್ಚುವರಿಯಾಗಿ 2866.90 ಲಕ್ಷ ರೂ.ಗಳ ಬೇಡಿಕೆ ಅನುದಾನದ ಬಗ್ಗೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಘು ಅವರು ಸಮಿತಿ ಸಭೆಯಲ್ಲಿ ಮಾಹಿತಿ ನೀಡಿದರು.
2020-21ನೇ ಸಾಲಿಗೆ ಸಮಾಜಕಲ್ಯಾಣ ಇಲಾಖೆ-8759ಲಕ್ಷ ರೂ., ಪಶುಪಾಲನಾ ಇಲಾಖೆ-4458.82 ಲಕ್ಷ ರೂ., ಸಾರ್ವಜನಿಕ ಶಿಕ್ಷಣ-109877.92 ಲಕ್ಷ ರೂ., ಆರೋಗ್ಯ ಇಲಾಖೆ-16690.65 ಲಕ್ಷ ರೂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ-18337.73 ಲಕ್ಷ ರೂ. ಹೇಮಾವತಿ ನಾಲಾ-113020 ಲಕ್ಷ ರೂ.ಗಳು ಸೇರಿದಂತೆ 34 ಇಲಾಖೆಗಳ ಒಟ್ಟು 395504.50 ಲಕ್ಷ ರೂ.ಗಳ ಪ್ರಸ್ತಾಪಿತ ಅನುದಾನ ಕ್ರಿಯಾಯೋಜನೆಗೆ ಜಿಲ್ಲಾ ಯೋಜನಾ ಸಮಿತಿ ಒಪ್ಪಿಗೆ ನೀಡಿತು.
ಇದರ ಜೊತೆಗೆ 2020-21ನೇ ಸಾಲಿಗೆ ಹೆಚ್ಚುವರಿಯಾಗಿ ಕೃಷಿ, ತೋಟಗಾರಿಕೆ, ಸಮಾಜ ಕಲ್ಯಾಣ, ಪಶುಪಾಲನಾ ಸೇರಿದಂತೆ ವಿವಿಧ 27 ಇಲಾಖೆಗಳ 115027.72 ಲಕ್ಷ ರೂ.ಗಳ ಪ್ರಸ್ತಾಪಿತ ಅನುದಾನಕ್ಕೆ ಸಮಿತಿಯಲ್ಲಿ ಚರ್ಚಿಸಿ ಒಪ್ಪಿಗೆ ಸೂಚಿಸಲಾಯಿತು.
ಅಟಲ್ ಭೂಜಲ್ ಯೋಜನೆಯಡಿ ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಮಧುಗಿರಿ, ಕೊರಟಗೆರೆ, ಶಿರಾ ಸೇರಿದಂತೆ 6 ತಾಲ್ಲೂಕುಗಳು ಆಯ್ಕೆಯಾಗಿದ್ದು, ಈ ಬಗ್ಗೆ ಸಮನ್ವಯ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾಪಂಚಾಯತ್ ಸದಸ್ಯರುಗಳಿಗೆ ತಾಲ್ಲೂಕುವಾರು ತರಬೇತಿ ನೀಡಬೇಕಾಗಿದೆ. ಇದಕ್ಕಾಗಿ ತಾಲ್ಲೂಕುವಾರು ದಿನಾಂಕಗಳನ್ನು ನಿಗಧಿಪಡಿಸಿ ಎಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಸಚಿವರು ಸೂಚನೆ ನೀಡಿದರು. ಸಭೆಯಲ್ಲಿ ಶಾಸಕರಾದ ಜಯರಾಮ್, ವಿಧಾನಪರಿಷತ್ ಶಾಸಕರಾದ ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್, ಜಿಲ್ಲಾ ಪಂಚಾಯತ್ ಸಿಇಓ ಶುಭಾಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೋನ ವಂಶಿಕೃಷ್ಣ, ಪಾಲಿಕೆ ಆಯುಕ್ತ ಭೂಬಾಲನ್ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.