ಚಿಕ್ಕನಾಯಕನಹಳ್ಳಿ :
ಭಾವೈಕ್ಯತೆ ಸಂಕೇತವಾಗಿರುವ ಪಟ್ಟಣದ ಶ್ರೀ ಹಜರತ್ ಸೈಯದ್ ಮೊಹಿದ್ದೀನ್ ಷಾ ಖಾದ್ರಿಯವರ (ತಾತಯ್ಯ)ನವರ 60 ನೇವರ್ಷದ ಉರುಸ್ (ಜಾತ್ರೆ) ಸೋಮವಾರದಿಂದ ಆರಂಭಗೊಂಡಿತು.
ಹಜರತ್ ಸೈಯದ್ ಷಾ ಖಾದ್ರಿಯವರು ಈ ಪ್ರಾಂತ್ಯದಲ್ಲಿ ತಾತಯ್ಯನವರೆಂದೆ ಪ್ರಸಿದ್ದಿಯೆನಿಸಿದ್ದು, ಅವರ ಕಾಲಮಾನದಲ್ಲಿ ಸಮಾಜಕ್ಕೆ ಪೂರಕವಾಗಿ ಲೆಕ್ಕವಿಲ್ಲದಷ್ಟು ಪವಾಡಗಳನ್ನು ನಡೆಸಿದ ಕಾರಣ ತಾತಯ್ಯನವರ ಬಗ್ಗೆ ನಂಬಿಕೆಗಳು ಅಂದಿನಿಂದ ಇಂದಿನವರೆಗೂ ಎರಡೂ ಧರ್ಮಿಯರ ಜನಮಾನಸದಲ್ಲಿ ಹಾಸುಹೊಕ್ಕಾಗಿದೆ. ಇದಕ್ಕೆ ಪೂರಕವಾಗಿ ಅವರ ಸಮಾಧಿ ಸ್ಥಳವನ್ನು ಅಭಿವೃದ್ದಿ ಪಡಿಸಿದ ಹಿಂದಿನವರು ಈ ಗೋರಿ ನಿರ್ಮಾಣದ ಸ್ಥಳಕ್ಕೆ ತಾತಯ್ಯನವರ ಮಠವೆಂದೆ À ಕಲ್ಲಿನಲ್ಲಿ ಕೆತ್ತಿಸಲಾಗಿದೆ.
ಹಿಂದೂ-ಮುಸ್ಲಿಂ ಧಾರ್ಮಿಕಭಾವವನ್ನು ಬೆಸೆಯುವಲ್ಲಿ ಪಟ್ಟಣದ ತಾತಯ್ಯನವರ ಗೋರಿ ಎರಡೂ ಧರ್ಮದವರ ಏಕೈಕ ಸಂಕೇತವೆನಿಸಿದ್ದು ಈವರೆಗೂ ಯಾವುದೇ ಕಳಂಕವಿಲ್ಲದೆ ಮುಂದುವರೆದಿರುವುದು ಇಲ್ಲಿನ ವಿಶೇಷವೆನಿಸಿದೆ. ಈ ಉರುಸ್ ಕಾರ್ಯಕ್ರಮಗಳು ಹಿಂದೂ ಮುಖಂಡರಿಂದಲೇ ಅದ್ದೂರಿಯಿಂದ ನಡೆದುಕೊಂಡು ಬರುತ್ತಿದೆ. ಇದಕ್ಕೆ ಉದಾಹರಣೆಯಂತೆ ಗೋರಿ ಕಮಿಟಿಯಲ್ಲಿರುವ 14 ಸದಸ್ಯರಲ್ಲಿ 6 ಮಂದಿ ಮಾತ್ರ ಮುಸ್ಲಿಮರಿದ್ದಾರೆ. ಎರಡೂ ಧರ್ಮದವರಿಂದ ಕಳೆದ 59ವರ್ಷದಿಂದ ಯಾವುದೇ ಘರ್ಷಣೆಗಳಿಲ್ಲದೆ ಅದ್ದೂರಿಯಿಂದ ನಡೆಯುತ್ತಿದೆ.
ಸೋಮವಾರ ಸಂಜೆ ಅಲಂಕೃತಗೊಂಡ ತಾತಯ್ಯನವರ ಉತ್ಸವ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿತು. ನಾಸಿಕ್‍ಡೋಲ್, ವಾದ್ಯವೃಂದ ತಂಡಗಳು ಉತ್ಸವದ ಜೊತೆಯಲ್ಲಿ ಸಾಗಿದವು. ಲಕ್ಷಾಂತರ ಭಕ್ತರು ತಾತಯ್ಯನವರ ದರ್ಗಕ್ಕೆ ತೆರಳಿ ಕಡ್ಲೆಸಕ್ಕರೆಯ ಹರಕೆ ತೀರಿಸುತ್ತಿದ್ದರು.
ಇದೇ ಸಂದರ್ಭದಲ್ಲಿ ಮನರಂಜನಾ ಕಾರ್ಯಕ್ರಮ ನಡೆಯಿತು. ಉತ್ಸವವನ್ನು ಸೇವಾಕರ್ತರಾದ ಪೈಲ್ವಾನ್ ರಮೇಶ್‍ಕುಮಾರ್ ಚಾಲನೆ ನೀಡಿದರು.
ಫೆ.25 ರಂದು ರಾತ್ರಿ 9ಕ್ಕೆ ಉರುಸ್ ಅಂಗವಾಗಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಜಿದ್ದಾಜಿದ್ದಿನ ಖವ್ವಾಲಿ ಕಾರ್ಯಕ್ರಮ ನಡೆಯಲಿದೆ. ಇದನ್ನು ಕಾನೂನು ಮತ್ತು ಸಂಸದೀಯ ಸಚಿವರಾದ ಜೆ.ಸಿ.ಮಾಧುಸ್ವಾಮಿ ಉದ್ಘಾಟಿಸುವರು. ಗೋರಿಕಮಿಟಿ ಅಧ್ಯಕ್ಷ ಟಿ. ರಾಮಯ್ಯ ಅಧ್ಯಕ್ಷತೆವಹಿಸುವರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ. ಬಸವರಾಜು ಖವ್ವಾಲಿಯ ಪ್ರಾಯೋಜಕತ್ವವನ್ನು ವಹಿಸಿದ್ದಾರೆ.
ಫೆ.27 ರಂದು ರಾತ್ರಿ 9ಕ್ಕೆ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ. ಮಾಜಿ ಸಚಿವ ಹಾಗೂ ಶಾಸಕರಾದ ಡಾ. ಜಿ. ಪರಮೇಶ್ವರ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮಾಜಿ ಶಾಸಕ ಸಿ.ಬಿ. ಸುರೇಶ್‍ಬಾಬು ಅಧ್ಯಕ್ಷತೆವಹಿಸುವರು. ತಾತಯ್ಯನವರ ಸಮಾಧಿ.