ಮಧುಗಿರಿ :
ಬೆಂಗಳೂರಿನ ಜೈಲಿನಲ್ಲಿದ್ದು ಕೊಂಡೆ ಶ್ರೀಮಂತರ ರಿಂದ ಹಣ ವಸೂಲಿ ಮಾಡುವ ದಂದೆಯಲ್ಲಿ ತೊಡಗಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಸ್ಥಳೀಯ ನ್ಯಾಯಾಲಯದ ಅನುಮತಿ ಮೇರೆಗೆ ಮಧುಗಿರಿ ಕಸಬ ವ್ಯಾಪ್ತಿಯ ಸೋಂಪುರದ ವಾಸಿ ಹಾಗೂ ತುಮಕೂರು ಮಾಜಿ ಮೇಯರ್ ರವಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಲ್ಲೇಶ್ನನ್ನು ಬಿಗಿ ಭದ್ರತೆಯಲ್ಲಿ ಕರೆ ತಂದು ಮಧುಗಿರಿ ಪೋಲಿಸರು ಸ್ಥಳ ತನಿಖೆಯನ್ನು ಸೋಮವಾರ ಸಂಜೆ ನಡೆಸಿದರು.
ಇತ್ತೀಚೆಗೆ ಪಟ್ಟಣದ ವೆಂಕಟ ರವಣ ಸ್ವಾಮಿ ದೇವಾಲಯದ ರಸ್ತೆಯ ಸಮೀಪ ಪುರಸಭಾ ಸದಸ್ಯರ ಮನೆಯ ಮುಂದೆ ನಿಲ್ಲಿಸಿದ್ದ ಇನೂವಾ ಕಾರಿಗೆ ರಾತ್ರಿ ವೇಳೆಯಲ್ಲಿ ಪೆಟ್ರೋಲ್ ಬಾಂಬ್ ಎಸೆದು ಹಾನಿ ಮಾಡಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಭಂಧಿಸಿದಂತೆ 3 ಜನ ಆರೋಪಿಗಳನ್ನು ಬಂಧಿಸುವಲ್ಲಿ ಮಧುಗಿರಿ ಪೋಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿ ಮಲ್ಲೇಶ್ ಕೃತ್ಯ ಎಸಗಲು ಬೆಂಗಳೂರಿನ ಪರಪ್ಪನ ಆಗ್ರಹಾರದ ಜೈಲಿನಲ್ಲಿದ್ದು ಕೊಂಡು ಸಂಚು ರೂಪಿಸಿದ್ದು 3 ಜನ ಆರೋಪಿಗಳ ಮುಖಾಂತರ ಲಕ್ಷಾಂತರ ರೂಪಾಯಿಗಳಿಗೆ ದೂರವಾಣಿ ಕರೆ ಮಾಡುವುದರ ಮೂಲಕ ಬೇಡಿಕೆ ಇಟ್ಟಿದ್ದ ಎನ್ನಲಾಗುತ್ತಿದೆ. ಪುರಸಭಾ ಸದಸ್ಯ ಎಂ.ಎಲ್.ಗಂಗರಾಜು ರವರ ಆಳಿಯ ರವಿಕಾಂತ್ ಎನ್ನುವವರ ದೂರವಾಣಿಗೆ ಆರೋಪಿಗಳು ಕರೆ ಮಾಡಿ ಬೆದರಿಸಿದ್ದು ರವಿಕಾಂತ್ ಹಣ ಕೊಡಲು ನಿರಾಕಸಿದ್ದರ ಹಿನ್ನೆಲೆಯಲ್ಲಿ ಇತ್ತೇಚೆಗೆ ಅವರ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರಿಗೆ ಬಾಟಲಿಗಳಲ್ಲಿ ಪೆಟ್ರೋಲ್ ಹಾಕಿ ಕಾರಿಗೆ ಎಸೆದು ಹಾನಿ ಮಾಡಿ ಪರಾರಿಯಾಗಿದ್ದಾರೆಂದು ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪೋಲೀಸ್ ವರಿಷ್ಟಾಧಿಕಾರಿ ಕೋನ ವಂಶಿಕೃಷ್ಣ ಹಾಗೂ ಎ ಎಸ್ ಪಿ ಉದೇಶ್ ಮಾರ್ಗದರ್ಶನದಲ್ಲಿ ಮಧುಗಿರಿಯ ಡಿವೈಎಸ್ಪಿ ಎಂ.ಪ್ರವೀಣ್ ನೇತೃತ್ವದಲ್ಲಿ ಆರೋಪಿಗಳ ಪತ್ತೆಗಾಗಿ ತಂಡವನ್ನು ರಚಿಸಿದ್ದರು. ಮಧುಗಿರಿ ಪ್ರಭಾರ ಸಿ ಪಿ ಐ ನದಾಫ್, ಪಿ ಎಸ್ ಐ ಕಾಂತರಾಜು ಪ್ರಕರಣ ದಾಖಲಿಸಿ ಕೊಂಡು ಆರೋಪಿಗಳಾದ ಗೌರಿಬಿದನೂರು ಮೂಲದ ನಿಖಿಲ್ ಆಲಿಯಾಸ್ ಟೋನಿ, ಮಧುಗಿರಿ ಪಟ್ಟಣದ ವಾಸಿ ನಾಗೇಂದ್ರ, ಹಾಗೂ ಲಿಂಗೇನಹಳ್ಳಿಯ ವಾಸಿ ಲಕ್ಷೀಕಾಂತ್ ಎನ್ನುವವರನ್ನು ಮಧುಗಿರಿ ಪೋಲೀಸರು ಬಂಧಿಸಿದ್ದಾರೆ.