ಮಧುಗಿರಿ :
ಗ್ರಾಮಗಳು ಅಭಿವೃದ್ದಿ ಹೊಂದಬೇಕಾದರೆ ಗ್ರಾಮಸ್ಥರು ದ್ವೇಷ ಹಾಗೂ ರಾಜಕೀಯ ಬಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ತಾಲೂಕಿನ ರಂಟವಳಲು ಗ್ರಾಮದಲ್ಲಿನ ಅಂಬೇಡ್ಕರ್ ಭವನ ಹಾಗೂ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮಗಳಲ್ಲಿ ಜನರು ಚುನಾವಣೆಯ ಸಂದರ್ಭಗಳಲ್ಲಿ ಮಾತ್ರ ರಾಜಕೀಯ ಮಾಡಬೇಕು, ಉಳಿದ ದಿನಗಳಲ್ಲಿ ಎಲ್ಲರೂ ಒಗ್ಗಟ್ಟಾಗಿ ಪ್ರೀತಿ-ವಿಶ್ವಾಸ ದಿಂದ ಬದುಕಲು ಪ್ರಯತ್ನಿಸಿ ಎಂದು ಹೇಳಿದರು.
ಕುಮಾರಸ್ವಾಮಿ ನೇತೃತ್ವದ ಸರಕಾರ ಅಸ್ಥಿತ್ವದಲ್ಲಿದ್ದರೆ ಈ ಬಾರಿಯ ಬಜೆಟ್ನಲ್ಲಿ ಮಧುಗಿರಿ ಕಂದಾಯ ಜಿಲ್ಲೆಯಾಗಿ ಘೋಷಣೆಯಾಗುವ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆವು. ಕ್ಷೇತ್ರದ ಅಭಿವೃದ್ದಿಯಾಗ ಬೇಕೆಂದರೆ ಅನುದಾನ ಬಿಟ್ಟು ಕಂದಾಯ ಜಿಲ್ಲೆಯನ್ನಾಗಿ ಪರಿವರ್ತನೆ ಮಾಡುವುದು ಒಳಿತು. ಆದ್ದರಿಂದ ಈಗಿನ ಮುಖ್ಯಮಂತ್ರಿಗಳ ಗಮನ ಸೆಳೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವೆ ಎಂದ ಅವರು, ಎತ್ತಿನಹೊಳೆ ಯೋಜನೆಗೆ ದೊಡ್ಡೇರಿ ಹೋಬಳಿಯ 5 ಕೆರೆಗಳನ್ನು ಸೇರಿಸಲಾಗಿದ್ದು, ರೈತರು ಆತಂಕಪಡುವ ಅವಶ್ಯಕತೆ ಇಲ್ಲ ಎಂದರು.
ಹಲವು ರೈತರಿಗೆ ಸಾಗುವಳಿ ಚೀಟಿ ನೀಡಲಾಗಿದ್ದರೂ ಹದ್ದುಬಸ್ತು ಮಾಡಿಕೊಡದಿರುವುದರಿಂದ ಮುಂದಿನ ಪೀಳಿಗೆಗೆ ಸಂಕಷ್ಟವಾಗಲಿದ್ದು, ಪ್ರತ್ಯೇಕ ಪಹಣಿ ಮಾಡಿಕೊಡುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಿದರು.
ಕ್ಷೇತ್ರ.ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಡಾ.ಜಿ.ವಿಶ್ವನಾಥ್, ಉಪತಹಶೀಲ್ದಾರ್ ಮಂಜುನಾಥ, ಕಂದಾಯ ನಿರೀಕ್ಷಕ ಚೆನ್ನವೀರಪ್ಪ, ತಾಪಂ ಸದಸ್ಯೆ ಚಿಕ್ಕತಾಯಮ್ಮ, ಗ್ರಾಪಂ ಅಧ್ಯಕ್ಷೆ ಮಂಜಮ್ಮ, ಉಪಾಧ್ಯಕ್ಷ ಆರ್.ಕೃಷ್ಣಪ್ಪ, ಸದಸ್ಯರಾದ ಗೋವಿಂದರೆಡ್ಡಿ, ಸಿದ್ದಮ್ಮ, ಯೋಗೇಶ್, ಉಮಾ, ಪಾರ್ವತಮ್ಮ, ಚಂದ್ರಕಲಾ, ಲಕ್ಷ್ಮೀಪತಿ, ಪಿಡಿಒ ಡಿ.ಎಸ್.ಆನಂದ್, ಕಾರ್ಯದರ್ಶಿ ಅಶ್ವತ್ಥನಾರಾಯಣ, ಬಿಲ್ ಕಲೆಕ್ಟರ್ ಮುರುಳಿ, ಮುಖ್ಯಶಿಕ್ಷಕ ವೆಂಕಟರಾಮು, ಪಿಎಸೈ ನಾಗರಾಜು, ಇಂಜಿನೀಯರ್ ಕೃಷ್ಣಪ್ಪ, ಗುತ್ತಿಗೇದಾರ ತಿಮ್ಲಾಪುರ ರಮೇಶ್ ಹಾಗು ಮುಂತಾದವರು ಹಾಜರಿದ್ದರು.