ತುಮಕೂರು:
ಬ್ಯಾಂಕ್ ನಿವೃತ್ತರ ಪಿಂಚಣಿಯನ್ನು ಶೀಘ್ರ ಪರಿಷ್ಕರಿಸಬೇಕೆಂದು ಒತ್ತಾಯಿಸಿ ಅಖಿಲ ಭಾರತ ಬ್ಯಾಂಕ್ ನಿವೃತ್ತರ ಒಕ್ಕೂಟ ಜಿಲ್ಲಾ ಶಾಖೆ ವತಿಯಿಂದ ಮಹಾನಗರಪಾಲಿಕೆ ಆವರಣದ ಮುಂದೆ ಶುಕ್ರವಾರ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.
ಈ ಸಂದರ್ಭದಲ್ಲಿ ರ್ಯಾಲಿಯನ್ನುದ್ಧೇಶಿಸಿ ಮಾತನಾಡಿದ ಅಖಿಲ ಭಾರತ ಬ್ಯಾಂಕ್ ನಿವೃತ್ತರ ಒಕ್ಕೂಟದ ಜಿಲ್ಲಾಧ್ಯಕ್ಷ ಟಿ.ವಾಸುದೇವ ತವಳ, ಕಳೆದ ಸುಮಾರು 25 ವರ್ಷಗಳಿಂದಲೂ ಕೇಂದ್ರ ಸರ್ಕಾರ ಬ್ಯಾಂಕ್ ನಿವೃತ್ತರ ಪಿಂಚಣಿಯನ್ನು ಪರಿಷ್ಕರಿಸದೆ ನಿರ್ಲಕ್ಷ್ಯ ವಹಿಸಿದೆ. ಆದ್ದರಿಂದ ಕೂಡಲೇ ನಿವೃತ್ತರ ಪಿಂಚಣಿಯನ್ನು ಪರಿಷ್ಕರಿಸಬೇಕೆಂದು ಒತ್ತಾಯಿಸಿದರು.
2002 ಕ್ಕೂ ಹಿಂದೆ ನಿವೃತ್ತರಾದವರ ತುಟ್ಟಿಭತ್ಯೆಯಲ್ಲಿರುವ ಅಸಮಾನತೆಯನ್ನು ನಿವಾರಿಸಿ ಅವರಿಗೂ ಇತರ ನಿವೃತ್ತರಂತೆಯೇ ಸಂಪೂರ್ಣ ತುಟ್ಟಿಭತ್ಯೆ ಕೊಡಬೇಕು, ಅಲ್ಪಪ್ರಮಾಣದಲ್ಲಿರುವ ಕೌಟುಂಬಿಕ ಪಿಂಚಣಿಯನನು ಕೇಂದ್ರ ಸರ್ಕಾರದ ಇತರ ಪಿಂಚಣಿದಾರರಂತೆ ಪರಿಷ್ಕರಿಸಿ ಕೌಟುಂಬಿಕ ಪಿಂಚಣಿದಾರರೂ ಸಹ ಗೌರವಯುತವಾದ ಜೀವನವನ್ನು ನಡೆಸಲು ಅನುಕೂಲ ಮಾಡಿಕೊಡಬೇಕೆಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.
ಅಖಿಲ ಭಾರತ ಬ್ಯಾಂಕ್ ನಿವೃತ್ತರ ಒಕ್ಕೂಟದ ಕಾರ್ಯದರ್ಶಿ ಎನ್.ಜಿ.ಮಹಲಿಂಗಪ್ಪ ಮಾತನಾಡಿ, ದೇಶಾದ್ಯಂತ ಸುಮಾರು ಐದು ಲಕ್ಷಕ್ಕೂ ಅಧಿಕ ಬ್ಯಾಂಕ್ ನಿವೃತ್ತರರಿದ್ದು, ಎಲ್ಲರಿಗೂ ನ್ಯಾಯಸಮ್ಮತವಾದ ಹಾಗೂ ದೀರ್ಘಕಾಲದಿಂದ ಬಾಕಿ ಇರುವ ಬೇಡಿಕೆಗಳನ್ನು ಶೀಘ್ರದಲ್ಲೇ ಪರಿಹರಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅಖಿಲ ಭಾರತ ಬ್ಯಾಂಕ್ ನಿವೃತ್ತರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ವಿಶ್ವನಾಥ ನಾಯಕ್,ರಾಜ್ಯಾಧ್ಯಕ್ಷರಾದ ಬಿ.ದೇವದಾಸರಾವ್, ಉಪಾಧ್ಯಕ್ಷರಾದ ಅಬ್ದುಲ್ ಜಲೀಲ್, ಎನ್.ಟಿ.ಹೆಗಡೆ, ಸಂಘಟನಾ ಕಾರ್ಯದರ್ಶಿ ವೆಂಕಟರಾವ್, ಛಲಪತಿ ಸೇರಿದಂತೆ ಬೆಂಗಳೂರು ಮತ್ತು ತುಮಕೂರು ಜಿಲ್ಲೆಯ ಕಾರ್ಯಕಾರಿ ಮಂಡಳಿಯ ಸದಸ್ಯರು, ಮಹಿಳಾ ಸದಸ್ಯರು ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.