ತುಮಕೂರು :
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಲತಾ ರವಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ಜರುಗಿದ ವಿಶೇಷ ಸಾಮಾನ್ಯ ಸಭೆಯಲ್ಲಿ ಈಗಾಗಲೇ ಕೃಷಿ ಇಲಾಖೆ ವತಿಯಿಂದ ಖರೀದಿಸಲಾಗಿದ್ದ ಶೇಂಗಾ ಬಿತ್ತನೆ ಬೀಜದ ಮೊತ್ತ 400 ಲಕ್ಷ ರೂ. ಪಾವತಿಸಲು ಹಾಗೂ ಪಶುಸಂಗೋಪನಾ ಇಲಾಖೆಯಿಂದ ಜಾನುವಾರುಗಳಿಗೆ ಖರೀದಿ ಮಾಡಿರುವ ಔಷಧಿಗಳ ಮೊತ್ತ ರೂ. 1.25ಕೋಟಿ ಅನುದಾನವನ್ನು ಪಾವತಿಸಲು ಘಟನೋತ್ತರ ಮಂಜೂರಾತಿ ನೀಡಿ ಸಭೆಯಲ್ಲಿ ಅನುಮೋದಿಸಲಾಯಿತು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರೆಯಲಾಗಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಗಳ ಘಟನೋತ್ತರ ಮಂಜೂರಾತಿ ಕುರಿತು ಪ್ರಸ್ತಾವನೆಯನ್ನು ವಿಶೇಷ ಸಾಮಾನ್ಯ ಸಭೆ ಶೀಘ್ರದಲ್ಲೇ ಕರೆದು ಸದರಿ ಸಭೆಯಲ್ಲಿ ಅಧಿಕಾರಿಗಳು ಸಲ್ಲಿಸಿ ಅನುಮೋದನೆ ಪಡೆಯುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪ್ರಸಕ್ತ ಹಣಕಾಸು ವರ್ಷದ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗೆ ಬಂದಿರುವ ಹಣವನ್ನು ಯಾವುದೇ ಕಾರಣಕ್ಕೆ ಲ್ಯಾಪ್ಸ್ ಆಗದ ರೀತಿಯಲ್ಲಿ ಬಳಸಿಕೊಂಡು ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸರ್ವಾನುಮತದಿಂದ ಜಿಲ್ಲಾ ಪಂಚಾಯತ್ ಸದಸ್ಯರು ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶಾರದಾ ನರಸಿಂಹಮೂರ್ತಿ, ಜಿಲ್ಲಾ ಪಂಚಾಯತ್ ಸದಸ್ಯರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಹಾಗೂ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.